ಕರ್ನಾಟಕ

ಕಾವೇರಿ: ಇಂದು ತಜ್ಞರ ವರದಿ

Pinterest LinkedIn Tumblr
Central study team visted KRS dam, to study the water resources available in the dam, at KRS  Dam,  Sriranagapattana Taluk on Saturday October 08, 2016. -Photo / DH PV PHOTOS
Central study team visted KRS

ಬೆಂಗಳೂರು: ಕಾವೇರಿ ಕೊಳ್ಳದ ಜಲಾಶಯಗಳು ಹಾಗೂ ಅಚ್ಚುಕಟ್ಟು ಪ್ರದೇಶದ ವಾಸ್ತವ ಪರಿಸ್ಥಿತಿ ಅಧ್ಯಯನ ನಡೆಸಿರುವ ತಜ್ಞರ ತಂಡ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠಕ್ಕೆ ಸೋಮವಾರ ವರದಿ ಸಲ್ಲಿಸಲಿದೆ.

ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ ಹಾಗೂ ಉದಯ ಲಲಿತ್‌ ಅವರಿದ್ದ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ಅ.4ರಂದು ನೀಡಿದ್ದ ಆದೇಶದಲ್ಲಿ, ಅ.6 ರಿಂದ 17ರವರೆಗೆ ಪ್ರತಿನಿತ್ಯ 2 ಸಾವಿರ ಕ್ಯುಸೆಕ್‌ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಿತ್ತು.
ಅಲ್ಲದೇ, ಕಾವೇರಿ ಕೊಳ್ಳದ ಜಲಾಶಯಗಳು ಮತ್ತು ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಅರಿಯಲು ತಜ್ಞರ ತಂಡವನ್ನು ಕಳಿಸುವಂತೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು.

ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್‌. ಝಾ ಅವರ ನೇತೃತ್ವದಲ್ಲಿ ರಚನೆಯಾಗಿದ್ದ ತಜ್ಞರ ತಂಡ ಅ.7 ಮತ್ತು 8 ರಂದು ಕರ್ನಾಟಕದ ಕೆ.ಆರ್.ಎಸ್‌ , ಹೇಮಾವತಿ ಜಲಾಶಯ ಮತ್ತು ಅಚ್ಚುಕಟ್ಟು ಪ್ರದೇಶಗಳಿಗೆ  ಭೇಟಿ ನೀಡಿತ್ತು. ಅ.9 ಮತ್ತು 10ರಂದು ತಮಿಳುನಾಡಿನ ಭವಾನಿ, ಮೆಟ್ಟೂರು ಜಲಾಶಯ, ಅಚ್ಚುಕಟ್ಟು ಪ್ರದೇಶಗಳಿಗೆ ಭೇಟಿ ನೀಡಿತ್ತು.

ಎರಡೂ ರಾಜ್ಯಗಳ ಜಲಾಶಯಗಳಲ್ಲಿರುವ ನೀರಿನ ಸಂಗ್ರಹ, ಬೆಳೆದುನಿಂತ ಬೆಳೆ, ಬೆಳೆ ಹಾನಿಯನ್ನು ಖುದ್ದು ವೀಕ್ಷಿಸಿದ್ದ ತಂಡ, ರೈತರ ಸಂಕಷ್ಟವನ್ನೂ ಕಣ್ಣಾರೆ ಕಂಡಿತ್ತು. ‘ರಾಜ್ಯದ ಸಂಕಷ್ಟ ಮನವರಿಕೆಯಾಗಿದ್ದು ವಸ್ತು ಸ್ಥಿತಿ ಆಧರಿಸಿ ವರದಿ ಸಲ್ಲಿಸುವುದಾಗಿ’ ಜಿ.ಎಸ್‌. ಝಾ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.

ಪೀಠದತ್ತ ಕುತೂಹಲ: ಅ.17 ರವರೆಗೆ ಪ್ರತಿನಿತ್ಯ 2 ಸಾವಿರ ಕ್ಯುಸೆಕ್‌ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂಬ ಸುಪ್ರೀಂ ದ್ವಿಸದಸ್ಯ ಪೀಠ ನೀಡಿದ್ದ ಆದೇ ಶದ ಗಡುವು ಸೋಮವಾರಕ್ಕೆ ಮುಕ್ತಾಯವಾಗಲಿದೆ. ತಜ್ಞರ ತಂಡ ನೀಡಲಿರುವ ವರದಿ ಆಧರಿಸಿ, ದ್ವಿಸದಸ್ಯ ಪೀಠ ಯಾವ ರೀತಿಯ ಆದೇಶ ನೀಡಲಿದೆ ಎಂಬ ಕುತೂಹಲ ಮನೆ ಮಾಡಿದೆ.

Comments are closed.