ಕರ್ನಾಟಕ

ಆರ್‌ಎಸ್‌ಎಸ್‌ ಕಾರ್ಯಕರ್ತನ ಹತ್ಯೆ

Pinterest LinkedIn Tumblr
RSS member Rudresh (who was murdered at Kamaraj road) in Bengaluru on Sunday. Photo/ B H Shivakumar
RSS

ಬೆಂಗಳೂರು: ಕಾಮರಾಜ ರಸ್ತೆಯ ಬಿಇಒ ಕಚೇರಿ ಬಳಿ ಭಾನುವಾರ ಬೆಳಿಗ್ಗೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಾರ್ಯಕರ್ತ ಆರ್‌. ರುದ್ರೇಶ್ (35) ಎಂಬುವರನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾರೆ.

ಶಿವಾಜಿನಗರ ಸಮೀಪದ ಮಿಲ್ಕ್‌ಮೆನ್‌ ಸ್ಟ್ರೀಟ್ ನಿವಾಸಿಯಾದ ರುದ್ರೇಶ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಆಗಿದ್ದರು.
ನವರಾತ್ರಿ ಮುಕ್ತಾಯದ ಅಂಗವಾಗಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಭಾನುವಾರ ಬೆಳಿಗ್ಗೆ ಹಲಸೂರು, ಕಾಕ್ಸ್‌ಟೌನ್, ಕಮರ್ಷಿಯಲ್‌ ಸ್ಟ್ರೀಟ್‌, ಶಿವಾಜಿನಗರ, ಭಾರತೀನಗರ ಸುತ್ತಮುತ್ತಲ ರಸ್ತೆಗಳಲ್ಲಿ ಪಥಸಂಚಲನ ಮಾಡಿದ್ದರು.

ಪಂಥಸಂಚಲನ ಮುಗಿದ ಬಳಿಕ 11.30ರ ಸುಮಾರಿಗೆ ರುದ್ರೇಶ್ ಅವರು ಸ್ನೇಹಿತರಾದ ಜಯರಾಂ, ಕುಮಾರ್ ಹಾಗೂ ಹರೀಶ್ ಅವರ ಜತೆ ಬಿಇಒ ಕಚೇರಿ ಬಳಿ ಮಾತನಾಡುತ್ತ ನಿಂತಿದ್ದಾಗ ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿದ್ದಾರೆ.

‘ಮಂಕಿ ಕ್ಯಾಪ್ ಧರಿಸಿದ್ದ ಹಂತಕರು, ಕಪ್ಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ವೇಗವಾಗಿ ಬಂದರು. ನಮ್ಮ ಹತ್ತಿರ ಬರುತ್ತಿದ್ದಂತೆಯೇ ಹಿಂಬದಿ ಕುಳಿತಿದ್ದವನು ಮಚ್ಚಿನಿಂದ, ರುದ್ರೇಶ್ ಅವರ ಕುತ್ತಿಗೆಗೆ ಹೊಡೆದ. ಕ್ಷಣಾರ್ಧದಲ್ಲಿ ನಡೆದ ಈ ಘಟನೆಯಿಂದ ಕಂಗಾಲಾಗಿ, ನಾನೂ ಕಲ್ಲು ತೆಗೆದುಕೊಂಡು ಅವರ ಕಡೆಗೆ ಬೀಸಿದೆ. ಆದರೆ, ನಾಲಾ ಜಂಕ್ಷನ್‌ ಮಾರ್ಗವಾಗಿ ಮಿಂಚಿನ ವೇಗದಲ್ಲಿ ಅವರು ಪರಾರಿಯಾದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ರುದ್ರೇಶ್ ಕೊನೆಯುಸಿರೆಳೆದರು’ ಎಂದು ಮೃತರ ಸ್ನೇಹಿತ ಜಯರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

ಗಣವೇಷದಲ್ಲಿದ್ದ ರುದ್ರೇಶ್: ‘ಕಾರ್ಯ ಕರ್ತರೆಲ್ಲ ಬೆಳಿಗ್ಗೆ 8 ಗಂಟೆಗೆ ಹಲಸೂರು ಕೆರೆ ಸಮೀಪದ ಆರ್‌ಬಿಎಎನ್‌ಎಂಎಸ್‌ ಮೈದಾನದಲ್ಲಿ ಜಮಾಯಿಸಿದ್ದೆವು. ಅಲ್ಲಿಂದ ಹೊರಟು ಸುತ್ತಮುತ್ತಲ ರಸ್ತೆಗಳಲ್ಲಿ ಪಥಸಂಚಲನ ಮಾಡಿದ್ದೆವು. ನಂತರ ನಾವೆಲ್ಲ ಮನೆಗೆ ಹೋಗಿ ಸಮವಸ್ತ್ರ ಬದಲಾಯಿಸಿ ಬಂದೆವು. ಆದರೆ, ರುದ್ರೇಶ್ ಅವರು ಗಣ ವೇಷದಲ್ಲೇ ಇದ್ದರು. ಇನ್ನೇನು ಎಲ್ಲರೂ ಹೊರಡಬೇಕು ಎನ್ನುವಷ್ಟರಲ್ಲಿ ಈ ಘಟನೆ ನಡೆದು ಹೋಯಿತು’ ಎಂದು ಮತ್ತೊಬ್ಬ ಸ್ನೇಹಿತ ಕುಮಾರ್ ಹೇಳಿದರು.

ಠಾಣೆ ಮುಂದೆ ಪ್ರತಿಭಟನೆ: ಘಟನೆಯಿಂದ ಆಕ್ರೋಶಗೊಂಡ ಆರ್ಎಸ್‌ಎಸ್‌ ಕಾರ್ಯಕರ್ತರು ಹಾಗೂ ಮೃತರ ಕುಟುಂಬ ಸದಸ್ಯರು, ‘ಇದೊಂದು ಪೂರ್ವನಿಯೋಜಿತ ಕೃತ್ಯ. ಆರ್‌ಎಸ್‌ಎಸ್‌ ಕಾರ್ಯಕರ್ತ ಎಂಬ ಕಾರಣಕ್ಕೆ ಅವರನ್ನು ಹತ್ಯೆ ಮಾಡಲಾಗಿದೆ. ಕೂಡಲೇ, ಆರೋಪಿಗಳನ್ನು ಬಂಧಿಸಬೇಕು’ ಎಂದು ಆಗ್ರಹಿಸಿ ಕಮರ್ಷಿಯಲ್‌ ಸ್ಟ್ರೀಟ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿದರು.

ಈ ವೇಳೆ ಸ್ಥಳಕ್ಕೆ ಬಂದ ನಗರ ಪೊಲೀಸ್ ಕಮಿಷನರ್ ಎನ್.ಎಸ್. ಮೇಘರಿಕ್, ‘ಹಂತಕರ ಬಗ್ಗೆ ಸುಳಿವು ಸಿಕ್ಕಿದೆ. ಸದ್ಯದಲ್ಲೇ ಅವರನ್ನು ಬಂಧಿಸಲಾಗುವುದು’ ಎಂದು ಹೇಳಿದರು. ರಾತ್ರಿಯೊಳಗೆ ಹಂತಕರನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ನಂತರ ಶಿವಾಜಿ ವೃತ್ತಕ್ಕೆ ತೆರಳಿ ರಾತ್ರಿ 8 ಗಂಟೆವರೆಗೆ ಧರಣಿ ಮಾಡಿದರು.

ಹತ್ಯೆ ನಡೆದ ಬಳಿಕ ಕಾಮರಾಜ ರಸ್ತೆಯಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಹಿರಿಯ ಅಧಿಕಾರಿಗಳು, ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್‌), ಕೆಎಸ್‌ಆರ್‌ಪಿ, ಸಿಎಆರ್ ತುಕಡಿಗಳನ್ನು ಸ್ಥಳಕ್ಕೆ ಕರೆಸಿಕೊಂಡರು. ಆ ನಂತರ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಿಳಿಯಾಯಿತು.

ಶಾಸಕರಾದ ಆರ್‌. ಅಶೋಕ್‌, ಅರವಿಂದ ಲಿಂಬಾವಳಿ, ಸಂಸದರಾದ ಪಿ.ಸಿ. ಮೋಹನ್‌ ಮತ್ತು ಪ್ರತಾಪ್‌ ಸಿಂಹ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಹಂತಕರನ್ನು ಬಂಧಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.

ಮಕ್ಕಳೂ ಪಥಸಂಚಲನಕ್ಕೆ ಹೋಗಿದ್ದರು: ‘ಪತ್ನಿ ವಿದ್ಯಾ ಹಾಗೂ ಇಬ್ಬರು ಮಕ್ಕಳ ಜತೆ ಶಿವಾಜಿನಗರದ ಮಿಲ್ಕ್‌ ಮೆನ್‌ ಸ್ಟ್ರೀಟ್‌ನಲ್ಲಿ ವಾಸವಾಗಿದ್ದ ರುದ್ರೇಶ್, ಬೆಳಿಗ್ಗೆ ತಮ್ಮ ಮಕ್ಕಳನ್ನು ಸಹ ಪಥಸಂಚಲನಕ್ಕೆ ಕರೆದುಕೊಂಡು ಬಂದಿದ್ದರು’ ಎಂದು ಮೃತರ ಸ್ನೇಹಿತರು ಹೇಳಿದರು. ಪಥಸಂಚಲನ ಮುಗಿದ ನಂತರ ‘ನಾನು ಆಮೇಲೆ ಬರುತ್ತೇನೆ. ನೀವು ಮನೆಗೆ ಹೋಗಿರಿ’ ಎಂದು ಹೇಳಿ ಮಕ್ಕಳನ್ನು ಮನೆಗೆ ಕಳುಹಿಸಿದ್ದರು.

ಸಿವಿಲ್ ಗುತ್ತಿಗೆದಾರರಾಗಿದ್ದ ರುದ್ರೇಶ್, ಹಾಲಿನ ವ್ಯಾಪಾರ, ಫೈನಾನ್ಸ್‌ ಹಾಗೂ ರಿಯಲ್‌ ಎಸ್ಟೇಟ್ ವ್ಯವಹಾರವನ್ನೂ ಮಾಡುತ್ತಿದ್ದರು.
‘ನಿರಂತರವಾಗಿ ದಾಳಿ ನಡೆಯುತ್ತಿವೆ’: ‘ಕೆಲ ದಿನಗಳ ಹಿಂದೆ ವಿದ್ಯಾರಣ್ಯಪುರದಲ್ಲಿ ಫಣೀಂದ್ರ ಎಂಬ ಆರ್‌ಎಸ್‌ಎಸ್‌ ಕಾರ್ಯಕರ್ತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು. ವಾರದ ಹಿಂದೆ ಮುತ್ಯಾಲನಗರದಲ್ಲಿ ದಿಲೀಪ್‌ ಎಂಬ ಕಾರ್ಯಕರ್ತನ ಮೇಲೂ ಹಲ್ಲೆ ನಡೆದಿದೆ. ಇದನ್ನು ನೋಡಿದರೆ, ಆರ್‌ಎಸ್‌ಎಸ್‌ ಕಾರ್ಯಕರ್ತರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ರುದ್ರೇಶ್ ಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಬ್ಯಾನರ್‌ ಗಲಾಟೆ: ‘ದಸರಾ ಹಬ್ಬದ ಪ್ರಯುಕ್ತ ಶಿವಾಜಿ ವೃತ್ತದಲ್ಲಿ ಬ್ಯಾನರ್ ಕಟ್ಟುತ್ತಿದ್ದಾಗ ರುದ್ರೇಶ್ ಅವರು ಕೆಲ ಸಂಘಟನೆ ಸದಸ್ಯರ ಜತೆ ಗಲಾಟೆ ಮಾಡಿಕೊಂಡಿದ್ದರು. ಆ ಜಗಳವೂ ಅವರ ಹತ್ಯೆಗೆ ಕಾರಣವಾಗಿರಬಹುದು’ ಎಂದು ಮೃತರ ಸ್ನೇಹಿತರು ಶಂಕೆ ವ್ಯಕ್ತಪಡಿಸಿದ್ದಾರೆ.

ಹಂತಕರ ಪತ್ತೆಗೆ 5 ತಂಡ

‘ರುದ್ರೇಶ್ ಅವರ ವಿರುದ್ಧ ಹಿಂದೆ ಕೆಲವು ಪ್ರಕರಣಗಳು ದಾಖಲಾಗಿದ್ದವು. ಕೌಟುಂಬಿಕ ಕಲಹ, ವ್ಯವಹಾರಿಕ ವೈಷಮ್ಯ, ಸಂಘಟನೆಗಳ ಕೈವಾಡ ಸೇರಿದಂತೆ ಎಲ್ಲ ಆಯಾಮಗಳಿಂದಲೂ ತನಿಖೆ ಮಾಡಲಾಗುತ್ತಿದೆ. ಹಂತಕರ ಪತ್ತೆಗೆ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ. ಸಿಸಿಬಿ ಪೊಲೀಸರು ಸಹ ತನಿಖೆ ನಡೆಸುತ್ತಿದ್ದಾರೆ’ ಎಂದು ಕಮಿನಷರ್ ಮೇಘರಿಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಥಸಂಚಲನ ಮುಗಿಸಿಕೊಂಡು ರುದ್ರೇಶ್ ಮನೆಗೆ ಹೋಗಿದ್ದರು. ಯಾರೋ ಕರೆ ಮಾಡಿ ಅವರನ್ನು ಕರೆಸಿಕೊಂಡರು ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಿಟ್ಟಿನಲ್ಲೂ ತನಿಖೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ರಾಜು ಕೊಲೆ ಮಾದರಿಯಲ್ಲೇ ಹತ್ಯೆ

ಕಳೆದ ವರ್ಷ ಮೈಸೂರಿನಲ್ಲಿ ನಡೆದಿದ್ದ ಆರ್‌ಎಸ್‌ಎಸ್‌ ಮುಖಂಡ ರಾಜು ಅವರ ಹತ್ಯೆಯ ಮಾದರಿಯಲ್ಲೇ ರುದ್ರೇಶ್ ಅವರ ಕೊಲೆ ನಡೆದಿದೆ. ಮನೆ ಹತ್ತಿರ ಟೀ ಕುಡಿಯುತ್ತಿದ್ದ ರಾಜು ಅವರನ್ನು ಹಂತಕರು ತಲ್ವಾರ್‌ನಿಂದ ಕೊಚ್ಚಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದರು. ಹೀಗಾಗಿ, ಆ ಪ್ರಕರಣದ ಆರೋಪಿಗಳನ್ನು ಸಹ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.

Comments are closed.