ಕಾಸರಗೋಡು, ಅ.11″ ಕಣ್ಣೂರು ಕೂತುಪರಂಬದಲ್ಲಿ ಹಾಡಹಗಲೇ ಸಿಪಿಎಂ ನಾಯಕನನ್ನು ಕೊಲೆಗೈದ ಘಟನೆ ನಿನ್ನೆ ನಡೆದಿದೆ. ಪಡುವಿಲಾಯಿ ಸ್ಥಳೀಯ ಕಮಿಟಿ ಮುಖಂಡ ವಳ್ಳಂಕಿಚಾಲ್ ನಿವಾಸಿ ಮೋಹನನ್(೫೨) ಕೊಲೆಗೀಡಾದವರು.
ಇವರ ಜೊತೆಗಿದ್ದ ಸಿಪಿಐಎಂ ಕಾರ್ಯಕರ್ತ ಅಶೋಕನ್ ಕೂಡಾ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃತ್ಯವನ್ನು ಖಂಡಿಸಿ ಕಣ್ಣೂರು ಜಿಲ್ಲೆಯಲ್ಲಿ ಹರತಾಳಕ್ಕೆ ಸಿಪಿಎಂ ಕರೆ ನೀಡಿದೆ. ಎಲ್ಲೆಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ.
ಪಿಣರಾಯಿಯಲ್ಲಿ ಶೇಂದಿ ಅಂಗಡಿಯ ಕಾರ್ಮಿಕರಾಗಿದ್ದ ಇವರನ್ನು ಅಂಗಡಿಗೆ ನುಗ್ಗಿದ ತಂಡವೊಂದು ಮಾರಾಕಾಸ್ತ್ರದಿಂದ ಇರಿದು ಕೊಲೆಗೈದು ಪರಾರಿಯಾಗಿದೆ. ಓಮ್ನಿ ವ್ಯಾನ್‌ನಲ್ಲಿ ಬಂದಿದ್ದ ಹಂತಕರು ಮುಸುಕುಧಾರಿಗಳಾಗಿದ್ದರು ಎನ್ನಲಾಗಿದೆ. ಕೂಡಲೇ ತಲಶ್ಯೆರಿ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ಕೃತ್ಯದ ಹಿಂದೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ಕೈವಾಡವಿದೆ ಎಂದು ಸಿಪಿಎಂ ಆರೋಪಿಸಿದೆ.
ಪಿಣರಾಯಿ ವಿಜಯನ್ ಅವರು ಕಳೆದ ಮೇ ತಿಂಗಳಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಣ್ಣೂರಿನಲ್ಲಿ 50 ದಾಳಿ ಪ್ರಕರಣ ನಡೆದಿದ್ದು, ರಾಜಕೀಯ ದ್ವೇಷಕ್ಕೆ ನಾಲ್ಕು ಹತ್ಯೆ ಪ್ರಕರಣ ನಡೆದಿದೆ. ಕೊಲೆಯನ್ನು ಪ್ರತಿಭಟಿಸಿ ಪರಿಸರದ ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹರತಾಳಕ್ಕೆ ಸಿಪಿಎಂ ಕರೆ ನೀಡಿದೆ. ಹಿಂಸಾಚಾರ ಮರುಕಳಿಸದಂತೆ ಪೊಲೀಸರು ಬಿಗು ಬಂದೋಬಸ್ತ್ ಕೈಗೊಂಡಿದ್ದಾರೆ. ಎಲ್ಲೆಡೆ ಹಿಂಸೆ ಮರುಕಳಿಸದಂತೆ ಎಚ್ಚರ ವಹಿಸಲು ಪೊಲೀಸ್ ಇಲಾಖೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದ್ದು ಪೊಲೀಸ್ ಅಧಿಕಾರಿಗಳು ಕಣ್ಗಾವಲು ಇರಿಸಿದ್ದಾರೆ.
ಮೋಹನನ್ ಅವರ ಮೃತದೇಹವನ್ನು ಕೋಝಿಕ್ಕೋಡ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ದೇಹದ ಮೇಲೆ 40ಕ್ಕೂ ಹೆಚ್ಚು ಇರಿದ ಗುರುತುಗಳಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕೂತುಪರಂಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಡಿಜಿಪಿ ಸುದೇಶ್ ಕುಮಾರ್, ಐಜಿ ದಿನೇಂದ್ರ ಕಶ್ಯಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂಜಯ್ ಕುಮಾರ್ ಗುರುದಿನ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಲಾಗಿದೆ. ವಳ್ಳಂಕಿಚಾಲ್‌ನಲ್ಲಿರುವ ಮೋಹನನ್ ಮನೆಯಲ್ಲಿ ಇಂದು ಸಂಜೆಯ ವೇಳೆಗೆ ಅಂತಿಮ ಸಂಸ್ಕಾರ ಕಾರ್ಯ ನಡೆಯಲಿರುವುದರಿಂದ ರಾಜಕೀಯ ಗಲಭೆ ಭುಗಿಲೇಳದಂತೆ ಗರಿಷ್ಠ ಬಂದೋಬಸ್ತ್ ಮಾಡಲಾಗಿದೆ.
Comments are closed.