ಕರ್ನಾಟಕ

ಕಾವೇರಿ ಜಲ ವಿವಾದ: ಜನರ ಹಿತ ಕಾಪಾಡಲು ಸರ್ಕಾರ ಬದ್ಧ-ಪರಮೇಶ್ವರ್

Pinterest LinkedIn Tumblr

g-parameshwaraಬೆಂಗಳೂರು, ಅ. ೩- ಕಾವೇರಿ ಜಲ ವಿವಾದದ ಹಿನ್ನೆಲೆಯಲ್ಲಿ ಮತ್ತು ಜನರ ಹಿತ ಕಾಪಾಡಲು ಸರ್ಕಾರ ಬದ್ಧ. ಹಾಗೆಯೇ ಸದನ ಕೈಗೊಳ್ಳುವ ನಿರ್ಣಯವನ್ನು ಗೌರವಿಸಲಿದೆ. ಸದಸ್ಯರು ನೀಡುವ ಸಲಹೆ ಕೂಡ ಜನರ ಹಿತ ಕಾಪಾಡಬೇಕು ಎಂದು ಸಭಾನಾಯಕ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ವಿಧಾನ ಪರಿಷತ್‌ನಲ್ಲಿಂದು ಹೇಳಿದರು.
ಸುಪ್ರೀಂ ಕೋರ್ಟ್‌ನಿಂದ ರಾಜ್ಯಕ್ಕೆ ಪದೇ ಪದೇ ಅನ್ಯಾಯ ಆಗಿರಬಹುದು. ಆದರೆ ಮುಂದಿನ ವಿಚಾರಣೆ ವೇಳೆ ನ್ಯಾಯ ಸಿಗಬಹುದು ಎಂಬ ಆಸೆಯೂ ಇದೆ. ಇದಕ್ಕೆ ಪೂರಕವಾಗಿ ಸದನದಲ್ಲಿ ಚರ್ಚೆಗಳು ನಡೆಯಬೇಕು. ಯಾವುದೇ ಚರ್ಚೆ ಪ್ರತೀಕೂಲ ಪರಿಣಾಮ ಬೀರಬಾರದು ಎಂದು ಸದಸ್ಯರಲ್ಲಿ ಮನವಿ ಮಾಡಿದರು.
ಈಗಾಗಲೇ ರಾಜ್ಯದ ರೈತರ ಹಾಗೂ ಜನರ ಹಿತ ಕಾಪಾಡಲು ಸದನದಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಆದರೆ ನ್ಯಾಯಾಲಯದಲ್ಲಿ ಯಾವುದೇ ನ್ಯಾಯ ಸಿಗಲಿಲ್ಲ. ನಾಲ್ಕು ಬಾರಿ ಸರ್ವ ಪಕ್ಷಗಳ ಸಭೆಯನ್ನು ಕರೆಯಲಾಗಿತ್ತು ಎಂದು ಸರ್ಕಾರ ಕೈಗೊಂಡ ಕ್ರಮಗಳನ್ನು ಸದನದಲ್ಲಿ ವಿವರಿಸಿದರು.
ತಮಿಳುನಾಡಿಗೆ 53 ಟಿಎಂಸಿ ನೀರು ಹರಿದುಹೋಗಿರುವುದು ಬಿಳಿಗುಂಡ್ಲು ಜಲಮಾಪನದಲ್ಲಿ ದಾಖಲಾಗಿದೆ. ಮಳೆಯಾದ ನಂತರ 4 ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿರುವುದರಿಂದ 27.6 ಟಿಎಂಸಿ ನೀರಿನ ಪ್ರಮಾಣ 34.12 ಟಿಎಂಸಿಗೆ ಹೆಚ್ಚಾಗಿದೆ. ಅಂದರೆ, 7 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವು ಹೆಚ್ಚಾಗಿದೆ. ಆದರೆ ಹೆಚ್ಚಾದ ನೀರನ್ನು ಏನು ಮಾಡುವುದು ಎಂದು ಈವರೆಗೆ ತೀರ್ಮಾನ ತೆಗೆದುಕೊಂಡಿರಲಿಲ್ಲ ಎಂದರು.
ರಾಜ್ಯದಲ್ಲಿ ತಮಿಳುನಾಡಿಗೆ ನೀರು ಹರಿಸಿದ ಬಳಿಕ ಕುಡಿಯುವ ನೀರು ಹಾಗೂ ಕೃಷಿ ಬಳಕೆಗೆ ನೀರಿನ ಕೊರತೆ ಎದುರಾಯಿತು. ಆರೂವರೆ ಲಕ್ಷ ಎಕರೆಗೆ ನೀರು ಹರಿಸಲು ಸಾಧ್ಯವಾಗಲಿಲ್ಲ. 2 ಲಕ್ಷ ಎಕರೆ ಜಮೀನಿಗೆ ನೀರು ಪೂರೈಸಲಾಗಲಿಲ್ಲ. ಈಗ ಉಳಿದಿರುವ 4.5 ಲಕ್ಷ ಎಕರೆ ಜಮೀನಿಗೆ ನೀರು ಬಿಡಬೇಕೆ ಅಥವಾ ಇಲ್ಲವೆ ಎಂಬ ಪ್ರಶ್ನೆ ಎದುರಾಗಿದೆ ಎಂದರು.
ರಾಜ್ಯದ ಸಂಕಷ್ಟದ ಪರಿಸ್ಥಿತಿಯ ವಸ್ತುಸ್ಥಿತಿಯನ್ನು ಸದನದಲ್ಲಿ ಚರ್ಚೆಯಾಗಬೇಕು. ಹಾಗೆಯೇ ಚರ್ಚೆಯಲ್ಲಿ ರಾಜ್ಯದ ಜನರ ಹಾಗೂ ರೈತರ ಹಿತದ ಬಗ್ಗೆಯೂ ಸದಸ್ಯರು ಗಮನಹರಿಸಬೇಕು ಎಂದು ಮನವಿ ಮಾಡಿದರು.

Comments are closed.