ಕರ್ನಾಟಕ

ಕಾವೇರಿ ವಿವಾದ: ದೇವೇಗೌ‌ಡರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ

Pinterest LinkedIn Tumblr

hd-devegowdaಬೆಂಗಳೂರು, ಅ. ೧- ಹಠ ಬಿಡದೆ ತ್ರಿವಿಕ್ರಮನಂತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಮೂರನೇಯ ಬಾರಿ ಕಟ್ಟಾಜ್ಞೆ ಹೊರಡಿಸಿರುವ ಜತೆಗೆ ನೀರು ನಿರ್ವಹಣಾ ಮಂಡಳಿಗೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಕನ್ನಡಿಗರ ಆಕ್ರೋಶ ಭುಗಿಲೆದ್ದಿರುವ ದಿಕ್ಸೂಚಿಯಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ವಿಧಾನಸೌಧದ ಆವರಣದ ಗಾಂಧಿ ಪ್ರತಿಮೆಯ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಪರಿಣಾಮವಾಗಿ ನಾಡಿನ ಸಾತ್ವಿಕ ನಿಟ್ಟಿನ ಪ್ರದರ್ಶನವಾದಂತಾಗಿದೆ.
ಸುಪ್ರೀಂ ಕೋರ್ಟಿನ `ಮಾಡು ಇಲ್ಲವೇ ಮಡಿ’ ಎಂಬ ಇಕ್ಕಳದ ರೀತಿಯ ಆದೇಶದ ಹಿನ್ನೆಲೆಯಲ್ಲಿ ಮುಂದೆ ಏನು ಮಾಡಬೇಕು ಎಂಬ ದಿಕ್ಕು ಕಾಣದಂತಿರುವ ರಾಜ್ಯ ಸರ್ಕಾರ ತಡಕಾಡುತ್ತಿರುವಾಗ ಸತ್ಯಾಗ್ರಹ ಒಂದು ರೀತಿಯಲ್ಲಿ ಹೊಸ ಬೆಳಕನ್ನು ತೋರಿಸಿದೆ.
ಈಗಿರುವಂತೆ ಸುಪ್ರೀಂ ಕೋರ್ಟ್ ಮೂಲಕವೇ ಕರ್ನಾಟಕ ಪರಿಹಾರ ಪಡೆಯಬೇಕು. ಇಲ್ಲವಾದರೆ ರಾಜ್ಯಾಂಗ ಬಿಕ್ಕಟ್ಟು ಸೃಷ್ಟಿಸಿ ಸರ್ಕಾರ ನೀಗಿಕೊಳ್ಳುವ ಬಲಿದಾನಕ್ಕೂ ಸಿದ್ಧವಾಗಬೇಕು. ಈ ಹಿನ್ನೆಲೆಯಲ್ಲಿ ಸಂಜೆ ನಡೆಯುವ ಸರ್ವಪಕ್ಷಗಳ ಸಭೆ ಕಲಾಪ ನಿರ್ಣಾಯಕವಾಗಲಿದೆ. ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸುವ ಜತೆಗೆ ಪರಿಹಾರ ಕೋರುವ (ಕ್ಯುರೇಟಿವ್) ಅರ್ಜಿಯನ್ನು ಸಲ್ಲಿಸುವ ಅವಕಾಶ ಸೃಷ್ಟಿಸಿಕೊಳ್ಳಲು ಕಾನೂನು ತಜ್ಞರ ನಡುವೆ ವಿಚಾರ ವಿನಿಮಯ ಸಾಗಿದೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‍ನಿಂದ ರಾಜ್ಯಕ್ಕೆ ಮತ್ತೆ ಮತ್ತೆ ಅನ್ಯಾಯ ಆಗುತ್ತಿರುವುದರ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೀದಿಗಿಳಿದು ಹೋರಾಟ ಆರಂಭಿಸಿದ್ದು, ಕಾವೇರಿ ವಿಷಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಏಕಾಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಇಂದು ಮಧ್ಯಾಹ್ನ ನಡೆಯುವ ಸರ್ವ ಪಕ್ಷಗಳ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರ ಕುತೂಹಲ ಕೆರಳಿಸಿದೆ.
ಈ ಮಧ್ಯೆ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ಸರ್ಕಾರ, ರಾಜ್ಯದ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ಪಾಲನೆ ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಇಂದು ಸಂಜೆ ನಡೆಯುವ ಮಂತ್ರಿ ಪರಿಷತ್ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಆರು ದಿನಗಳ ಕಾಲ ನಿತ್ಯ 6000 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಹಾಗೂ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ನಿನ್ನೆ ನೀಡಿದ್ದ ಸುಪ್ರೀಂ ತೀರ್ಪಿಗೆ ಇಂದು ರಾಜ್ಯ ಸರ್ಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನು ಕಾವೇರಿ ಪೀಠದ ನ್ಯಾಯಮೂರ್ತಿಗಳು ತಿರಸ್ಕರಿಸಿದರೆ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡು ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಸುವಂತೆ ಕೋರಿ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ.
ಕರ್ನಾಟಕದಿಂದ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿರುವುದರಿಂದ ಹಿರಿಯ ವಕೀಲರಾಗಿ ಇನ್ನು ಮುಂದೆ ಕಾವೇರಿ ವಿಷಯದಲ್ಲಿ ಕರ್ನಾಟಕದ ಪರ ವಾದ ಮಂಡಿಸುವುದಿಲ್ಲ ಎಂದು ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ನಿನ್ನೆ ವಾದದಿಂದ ಹಿಂದೆ ಸರಿಯುವುದಾಗಿ ಹೇಳಿಕೆ ನೀಡಿದ್ದರೆ, ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಈ ಬಗ್ಗೆ ಸ್ಪಷ್ಟನೆ ನೀಡಿ, ನಾರಿಮನ್ ಅವರು ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಗೊಂದಲ ಇನ್ನೂ ಬಗೆಹರಿದಿಲ್ಲ, ಈ ಎಲ್ಲಾ ಗೊಂದಲಗಳ ನಡುವೆ ಇಂದು ಮರು ಪರಿಶೀಲನಾ ಅರ್ಜಿ ಸಲ್ಲಿಸಿದೆ.
ಸಮುದ್ರದ ಮೇಲ್ಮೈ ಗಾಳಿ ಬಂಗಾಳಕೊಲ್ಲಿಯಲ್ಲಿ ತೀವ್ರತೆ ಪಡೆದುಕೊಂಡಿರುವುದರಿಂದ ತಮಿಳುನಾಡಿನ ಹಲವೆಡೆ ಭಾರಿ ಮಳೆಯಾಗಿರುವುದರಿಂದ ಕಾವೇರಿ ಬಿಕ್ಕಟ್ಟಿಗೆ ಅಲ್ಪಮಟ್ಟಿನ ಶಮನದೊರೆಯುವ ಸಾಧ್ಯತೆ ಇದೆ. ತಮಿಳುನಾಡಿನಾದ್ಯಂತ ಹೆಚ್ಚಿನ ಮಳೆಯಾದರೆ ಸುಪ್ರೀಂಕೋರ್ಟ್‍ಗೆ ಈ ವಿಷಯವನ್ನು ಮನವರಿಕೆ ಮಾಡಿಕೊಟ್ಟು ರಾಜ್ಯ ಬಚಾವಾಗಬಹುದು ಎಂಬ ಆಶಾವಾದ ರಾಜ್ಯ ಸರ್ಕಾರಕ್ಕಿದೆ.
ಕಾವೇರಿ ನಿರ್ವಹಣಾ ಮಂಡಳಿಯನ್ನು ನಾಲ್ಕು ದಿನಗಳ ಒಳಗೆ ರಚಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ್ದು, ಇದರಿಂದ ಎಚ್ಚೆತ್ತುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ತುರ್ತು ಸಭೆ ನಡೆಸಿ, ನಿರ್ವಹಣಾ ಮಂಡಳಿ ರಚನೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಕರ್ನಾಟಕದಲ್ಲಿ ನಿರ್ವಹಣಾ ಮಂಡಳಿಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಕೂಡ ಮಂಡಳಿ ರಚನೆಗೆ ಮುಂದಾಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಶೀಘ್ರವೇ ಸುಪ್ರೀಂ ಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸುವ ಸಾಧ್ಯತೆ ಇದೆ.
ಸುಪ್ರೀಂ ತೀರ್ಪು ವಿರೋಧಿಸಿ ಮಂಡ್ಯ, ಮೈಸೂರು ಭಾಗದ ಕೆಲವೆಡೆ ಇಂದು ಕೂಡ ಪ್ರತಿಭಟನೆ ಮುಂದುವರಿದಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಮಂಡ್ಯ, ಮೈಸೂರು, ಬೆಂಗಳೂರು ನಗರಗಳಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದೆ.

Comments are closed.