ಕರ್ನಾಟಕ

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಆದೇಶ, ವಿವಿಧೆಡೆ ಪ್ರತಿಭಟನೆ

Pinterest LinkedIn Tumblr

krs-dam

ಬೆಂಗಳೂರು, ಸೆ. ೨೦- ತಮಿಳುನಾಡಿಗೆ ನಾಳೆಯಿಂದ 10 ದಿನಗಳ ಕಾಲ ನೀರು ಬಿಡುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ನೀಡಿರುವ ತೀರ್ಪಿನಿಂದ ಉಂಟಾಗಿರುವ ಪರಿಸ್ಥಿತಿ ನಿಭಾಯಿಸಲು ಹೈ ಅಲರ್ಟ್ ಘೋಷಿಸಲಾಗಿದೆ.
ಇಂದು ಸಂಜೆವೇಳೆಗೆ ಸುಪ್ರೀಂಕೋರ್ಟ್ ಕಾವೇರಿ ಜಲ ಹಂಚಿಕೆ ಕುರಿತಂತೆ ತೀರ್ಪು ನೀಡುವ ಹಿನ್ನೆಲೆಯಲ್ಲಿ ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಿದ್ದು, ರಾಜ್ಯ ಮೀಸಲು ಪಡೆಯ 40, ನಗರ ಮೀಸಲು ಪಡೆಯ 30 ಫ್ಲಟೂನ್‌ಗಳು, ಕ್ಷಿಪ್ರ ಕಾರ್ಯಾಚರಣೆ ಪಡೆಯ 6 ಸ್ಕ್ವಾ‌ಡ್‌ಗಳು, ಸೀಮಾ ಸುರಕ್ಷಾದಳದ 3 ಕಂಪನಿಗಳು, ಇದರ ಜೊತೆಗೆ ಗಡಿಭದ್ರತಾ ಪಡೆ, ರೈಲ್ವೆ ಪೊಲೀಸರು, ರಾಜ್ಯಪೊಲೀಸರೊಂದಿಗೆ ಕೈಜೋಡಿಸಿದ್ದು, ಭದ್ರತೆಯ ಉಸ್ತುವಾರಿ ವಹಿಸಿದ್ದಾರೆ.

ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿ
ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ ರಾಜ್ಯದ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಹಾಗೂ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ಗೆ ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ.
ಸುಪ್ರೀಂಕೋರ್ಟ್‌ನಲ್ಲಿ ಮಧ್ಯಾಹ್ನ 2 ಗಂಟೆಗೆ ವಿಚಾರಣೆ ಇದ್ದು, ನಿನ್ನೆ ನಡೆದ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ನೀಡಿದ್ದ ಆದೇಶವನ್ನು ಪರಿಗಣಿಸದಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಿ ಎಂದಿದ್ದಾರೆ.
ಸಮರ್ಥ ವಾದ ಮಂಡನೆಗೆ ಸಿದ್ಧತೆ
ದೆಹಲಿಯಲ್ಲಿ ನಿನ್ನೆ ನಡೆದ ಮೇಲುಸ್ತುವಾರಿ ಸಭೆಯ ಆದೇಶದ ಪ್ರತಿಗಾಗಿ ರಾಜ್ಯ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಕಾದು ಅದರ ಅಧ್ಯಯನ ನಡೆಸಿ ಸುಪ್ರೀಂಕೋರ್ಟ್‌ ಮುಂದೆ ಸಮರ್ಥ ವಾದ ಮಂಡನೆಗೆ ಮುಂದಾದರು.
ಇಂದು ಮಧ್ಯಾಹ್ನ 2 ಗಂಟೆಗೆ ಸುಪ್ರೀಂನಲ್ಲಿ ವಿಚಾರಣೆ ನಿಗದಿಯಾಗಿದ್ದು, ಆದೇಶದ ಪ್ರತಿಯ ಸಂಪೂರ್ಣ ಅಧ್ಯಯನ ನಂತರ ವಾದ ಮಂಡನೆಗೆ ಸಿದ್ಧರಾದರು.
ಈ ಮಧ್ಯೆ ಮೇಲುಸ್ತುವಾರಿ ಸಮಿತಿಯ ಆದೇಶವನ್ನು ತಮಿಳುನಾಡು ಪ್ರಶ್ನಿಸಿದೆ.
ಮಂಡ್ಯ ಜಿಲ್ಲೆಯಲ್ಲಿ 4 ಸಾವಿರಕ್ಕೂ ಅಧಿಕ ಪೊಲೀಸರು ಹಾಗೂ ಬೆಂಗಳೂರು ನಗರದಲ್ಲಿ 16 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅದರಲ್ಲೂ ಸೂಕ್ಷ್ಮ ಪ್ರದೇಶಗಳಾದ ಬೆಂಗಳೂರಿನ ಹೆಗ್ಗನಹಳ್ಳಿ, ಮೈಸೂರು ರಸ್ತೆ, ನಾಯಂಡನಹಳ್ಳಿ, ಸ್ಯಾಟಲೈಟ್ ಬಸ್ ನಿಲ್ದಾಣ ಸೇರಿದಂತೆ ವಿವಿಧ ಭಾಗಗಳಲ್ಲಿ ಪೊಲೀಸರ ಗಸ್ತು ವಾಹನಗಳನ್ನು ಭದ್ರತೆಯ ಜವಾಬ್ದಾರಿ ವಹಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಲ್ಲಿ 550ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರ ತಾಲ್ಲೂಕುಗಳಲ್ಲಿ ಬಿಗಿ ಭದ್ರತೆ ವಹಿಸಲಾಗಿದ್ದು, ಕೆಆರ್‌ಎಸ್‌ನಲ್ಲಿ ಹಿಂದೆಂದೂ ಕಂಡರಿಯದ ಭದ್ರತೆ ವಹಿಸಲಾಗಿದೆ.
ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ರಾಜ್ಯ ಪೊಲೀಸರ ಜೊತೆಗೆ ಕೇರಳದ ಪೊಲೀಸರನ್ನು ಭದ್ರತೆಗೆ ಕರೆಸಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಇದೇ 25ರವರೆಗೂ ನಿಷೇಧಾಜ್ಞೆ ಮುಂದುವರೆಸಿದ್ದು, ಇಂದು ಮಧ್ಯರಾತ್ರಿ 1 ಗಂಟೆಯವರೆಗೆ ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ತಾರಾ ಹೋಟೆಲ್‌ಗಳು, ಮಿಲಿಟರಿ ಕ್ಯಾಂಟೀನ್‌ಗಳು, ಕ್ಲಬ್‌ಗಳಲ್ಲಿ ಮದ್ಯ ಮಾರಾಟಕ್ಕೆ ಯಾವುದೇ ಅಡೆತಡೆ ಇಲ್ಲ.
ಮಂಡ್ಯದಲ್ಲಿ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಹೋರಾಟಗಾರರು ಕಾವೇರಿ ಉದ್ಯಾನವನದಲ್ಲಿರುವ ಕಾವೇರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುಪ್ರೀಂಕೋರ್ಟ್ ತೀರ್ಪು ರಾಜ್ಯದ ಪರವಾಗಿ ಬರಲಿ ಎಂದು ಪ್ರಾರ್ಥಿಸಿದರು.
ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ಆದೇಶಿಸಿರುವ ಹಿನ್ನೆಲೆಯಲ್ಲಿ ಚಾಮರಾಜನಗರ, ಕೊಯಂಬತ್ತೂರು, ಗಡಿ ಭಾಗವನ್ನು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಗಡಿ ಭಾಗದ ಪುಣಜನೂರಿನಲ್ಲಿ ವ್ಯಾಪಕ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಚಾಮರಾಜನಗರದಲ್ಲಿ ಹೋರಾಟಗಾರರು ಬೃಹತ್ ಮೆರವಣಿಗೆ ನಡೆಸಿ ಗಡಿಭಾಗವನ್ನು ಬಂದ್ ಮಾಡಿದರು.

Comments are closed.