ಕಾವೇರಿ ಮೇಲುಸ್ತುವಾರಿ ಸಮಿತಿಯ “ಕೀಲಿಕೈ’ ಪ್ರಧಾನಿ ಬಳಿಯಿದೆ. ಸಮಸ್ಯೆಗೆ ನಿಜವಾದ ಪರಿಹಾರವಿರುವುದು ಈ ಸಮಿತಿಯಲ್ಲೇ. ನಮ್ಮ ರಾಜ್ಯದ ಬಿಜೆಪಿ ಸಂಸದರು ಪ್ರಧಾನಿಯ ಮನವೊಲಿಸುವ ಕೆಲಸವನ್ನು ಏಕೆ ಮಾಡುತ್ತಿಲ್ಲ?
ನಮ್ಮಲ್ಲಿ ಕುಡಿಯುವುದಕ್ಕೇ ನೀರಿಲ್ಲ, ತಮಿಳುನಾಡಿನ ಬೆಳೆಗಳಿಗೆ ನೀರು ಹರಿಸಲು ಸೂಚಿಸಿರುವ ನಿಮ್ಮ ಆದೇಶವನ್ನು ಮಾರ್ಪಾಟು ಮಾಡಿ ಎಂದು ಕೇಳಿಕೊಂಡು ಸುಪ್ರೀಂಕೋರ್ಟ್‌ಗೆ ಹೋಗಿದ್ದ ಕರ್ನಾಟಕಕ್ಕೆ ಅಲ್ಲಿ ಸಮಾಧಾನ ಸಿಗುವ ಬದಲು ಸಂಕಷ್ಟ ಸಿಕ್ಕಿರುವುದು ಕೇವಲ ನೀರಿನ ವಿಚಾರದಲ್ಲಿ ಮಾತ್ರವಲ್ಲ, ಹಿಂಸಾಚಾರದ ರೂಪದಲ್ಲೂ. ಈ ಅಸಹಾಯಕ ಸ್ಥಿತಿಯಲ್ಲೂ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಲು ನಿರ್ಧರಿಸಿದೆ. ಇದು ರಾಜ್ಯದ ಜನತೆಯ ಹಿತ ದೃಷ್ಟಿಯಿಂದ ಆಘಾತಕಾರಿ, ಆದರೆ ಸದ್ಯದ ಸ್ಥಿತಿಯಲ್ಲಿ ಅನಿವಾರ್ಯ. ಹಾಗೆಯೇ ಒಟ್ಟಾರೆಯಾಗಿ ಈ ಪ್ರಕರಣ ಒಕ್ಕೂಟದಲ್ಲಿ ರಾಜ್ಯಗಳು ಕೆಲ ಅವೈಜ್ಞಾನಿಕ ವ್ಯವಸ್ಥೆಗಳಿಂದ ಹೇಗೆ ಇಕ್ಕಟ್ಟು ಅನುಭವಿಸಬೇಕಾಗಿ ಬಂದಿದೆ ಎಂಬುದಕ್ಕೆ ನಿದರ್ಶನವಾಗಿಯೂ ಇದೆ.
ಕಾವೇರಿ ವಿಚಾರದಲ್ಲಿ ಕರ್ನಾಟಕ ಸರ್ಕಾರ, ಇಲ್ಲಿನ ರಾಜಕೀಯ ಪಕ್ಷಗಳು, ಕೇಂದ್ರ ಸರ್ಕಾರ ಹಾಗೂ ನ್ಯಾಯಾಂಗದ ನಡೆಯ ವಿಚಾರದಲ್ಲೂ ಹಲವು ಪ್ರಶ್ನೆಗಳನ್ನು ತಜ್ಞರು ಎತ್ತುತ್ತಿದ್ದಾರೆ. ಇವುಗಳನ್ನು ಕಡೆಗಣಿಸಿ, ಕೇವಲ ಶಾಂತಿ ಕಾಪಾಡಿ ಎಂದು ಮನವಿ ಮಾಡುವ, ರಾಜಕೀಯ ದೋಷಾರೋಪ ಮಾಡುವ ಹಾಗೂ ಮತ್ತೆ ಮತ್ತೆ ಹಳೆಯ ಮಾರ್ಗದಲ್ಲೇ ನ್ಯಾಯಾಂಗವನ್ನು ಎಡತಾಕುವ ಕೆಲಸವನ್ನಷ್ಟೇ ಸಂಬಂಧಪಟ್ಟವರು ಮಾಡುತ್ತಿದ್ದಾರೆ. ಇದು ತಂತ್ರಗಾರಿಕೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ.
ನೀರೇ ಇಲ್ಲದ ದುಸ್ಥಿತಿಯನ್ನು ನಾವು ಅನುಭವಿಸುತ್ತಿರುವಾಗ ತಮಿಳುನಾಡಿನ ಕೃಷಿ ಬೆಳೆಗಳಿಗೆ ನೀರು ಹರಿಸಲು ಹೇಳಿದ್ದೀರಿ, ಕನಿಷ್ಠ ಪಕ್ಷ ಅದರ ಪ್ರಮಾಣವನ್ನಾದರೂ ಕಡಿಮೆ ಮಾಡಿ ಎಂದು ಕರ್ನಾಟಕ ಸರ್ಕಾರ ಪ್ರಾಮಾಣಿಕ ಜನಪರ ಕಾಳಜಿಯೊಂದಿಗೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯಲ್ಲಿ, ಹಿಂದಿನ ಆದೇಶದಿಂದಾಗಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗಿದೆ ಎಂಬ ಸತ್ಯ ಸಂಗತಿಯನ್ನೂ ಉಲ್ಲೇಖೀಸಿತ್ತು. ಅದನ್ನು ನೋಡಿ ನ್ಯಾಯಮೂರ್ತಿಗಳು ಕೆಂಡಾಮಂಡಲವಾಗಿದ್ದು ರಾಜ್ಯದ ಜನತೆಗೆ ಆಘಾತ ಉಂಟುಮಾಡಿದೆ. ಅದೇ ರೀತಿ, ಹಿಂದಿನ ಆದೇಶವನ್ನು ಮಾರ್ಪಾಟು ಮಾಡಿ ನೀರು ಹರಿಸುವ ಪ್ರಮಾಣವನ್ನು ಕಡಿಮೆ ಮಾಡಿ ಎಂಬ ರಾಜ್ಯದ ಅರ್ಜಿಯನ್ನು ಕಾನೂನಿನ ಪ್ರಕಾರ ಸುಪ್ರೀಂಕೋರ್ಟ್ ಒಂದೋ ಪುರಸ್ಕರಿಸಬೇಕಿತ್ತು ಇಲ್ಲಾ ತಿರಸ್ಕರಿಸಬೇಕಿತ್ತು. ಅದರ ಬದಲು ಇನ್ನೂ 4 ಟಿಎಂಸಿ ಹೆಚ್ಚು ನೀರು ಹರಿಸಲು ಹೇಳಿರುವುದು ಯಾಕೆ ಎಂಬ ಪ್ರಶ್ನೆ ಕನ್ನಡಿಗರನ್ನು ಕಾಡುತ್ತಿದೆ. ಆದರೆ ಸುಪ್ರೀಂಕೋರ್ಟ್‌ನ ಆದೇಶ ಅಂತಿಮವಾಗಿರುವುದರಿಂದ ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಿದೆ.
ಅಂತಾರಾಜ್ಯ ನದಿ ನೀರಿನ ವಿವಾದಗಳಲ್ಲಿ ಕಾಯ್ದೆಯ ಪ್ರಕಾರ ಸುಪ್ರೀಂಕೋರ್ಟ್ ಆದೇಶಗಳನ್ನು ನೀಡಲು ಬರುವುದಿಲ್ಲ, ಈ ಕೆಲಸವನ್ನು ನ್ಯಾಯಾಧಿಕರಣಗಳು ಅಥವಾ ಮೇಲುಸ್ತುವಾರಿ ಸಮಿತಿಗಳೇ ಮಾಡಬೇಕು, ಹಾಗಾಗಿ ಕಾಯ್ದೆಯ ಉಲ್ಲಂಘನೆಯಾಗಿರುವ ಸುಪ್ರೀಂಕೋರ್ಟ್‌ನ ಈ ತೀರ್ಪನ್ನು ರಾಜ್ಯ ಸರ್ಕಾರ ಪಾಲನೆ ಮಾಡಬೇಕಿಲ್ಲ ಎಂದು ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ.ಆಚಾರ್ಯ ಹೇಳಿದ್ದಾರೆ. ಇದನ್ನು ರಾಜ್ಯ ಸರ್ಕಾರ ಏಕೆ ಗಣನೆಗೆ ತೆಗೆದುಕೊಳ್ಳುತ್ತಿಲ್ಲ?
ವಿವಾದದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಲ್ಲಿ ಒಬ್ಬರು ಜಯಲಲಿತಾ ಅವರಿಗೆ ಈ ಹಿಂದೆ ವಕೀಲರಾಗಿದ್ದವರು. ಅವರ ಹೊರತಾದ ನ್ಯಾಯಮೂರ್ತಿಗಳಿಗೆ ಈ ಕೇಸು ವರ್ಗಾಯಿಸಿ ಎಂದು ರಾಜ್ಯ ಸರ್ಕಾರ ಕೇಳಬಹುದಲ್ಲವೇ?
ಒಕ್ಕೂಟ ವ್ಯವಸ್ಥೆಯಲ್ಲಿ ಎರಡು ರಾಜ್ಯಗಳ ನಡುವೆ ತೀವ್ರತರ ಸಂಘರ್ಷ ಏರ್ಪಟ್ಟರೆ ವ್ಯವಸ್ಥೆಯ ಮುಖ್ಯಸ್ಥರಾಗಿರುವ ಪ್ರಧಾನಿ ಮಧ್ಯ ಪ್ರವೇಶ ಮಾಡಿ ಬಗೆಹರಿಸುವ ಯತ್ನ ಮಾಡಬೇಕಾಗುತ್ತದೆ. ಆದರೆ, ಪ್ರಧಾನಿ ಮೋದಿ ಏಕೆ ಅದನ್ನು ಮಾಡುತ್ತಿಲ್ಲ?
ಇದಕ್ಕಿಂತ ಹೆಚ್ಚಾಗಿ, ರಾಜ್ಯ ಬಿಜೆಪಿಯ 17 ಸಂಸದರು ಈ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ದೂಷಿಸುವುದನ್ನು ಬಿಟ್ಟು ತಮ್ಮದೇ ಪಕ್ಷದ ಪ್ರಧಾನಿಯ ಬಳಿ ತೆರಳಿ ರಾಜ್ಯದ ಸಮಸ್ಯೆಯನ್ನು ಏಕೆ ಮನದಟ್ಟು ಮಾಡಿಕೊಡುತ್ತಿಲ್ಲ? ಇದರಲ್ಲಿ ಜನಹಿತದ ಜತೆಗೆ ಅವರ ಪಕ್ಷಕ್ಕೆ ರಾಜಕೀಯ ಲಾಭವೂ ಇದೆಯಲ್ಲವೇ?
-ಉದಯವಾಣಿ
Comments are closed.