ಕರ್ನಾಟಕ

ಮದುವೆಯಾಗಲು ತಮಿಳುನಾಡಿಗೆ ವಧುವಿನ “ಪಾದಯಾತ್ರೆ’!

Pinterest LinkedIn Tumblr

tn-brideಹೊಸೂರು (ತಮಿಳುನಾಡು): ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ವಿಷಯವಾಗಿ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಇಂಥ ಸಂದರ್ಭದಲ್ಲಿ ಅಂತಾರಾಜ್ಯ ಪ್ರಯಾಣಿಕರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಈ ಕಷ್ಟಕ್ಕೆ ಮದುವೆಯ ಹೊಸ್ತಿಲಲ್ಲಿ ನಿಂತಿರುವ ಈ ವಧುವೂ ಹೊರತಲ್ಲ. ಆರ್‌. ಪ್ರೇಮಾ ಎಂಬ 25 ವರ್ಷದ ಬೆಂಗಳೂರಿನ ವಧು, ಇಲ್ಲಿಂದ ತಮಿಳುನಾಡಿನ ವಣಿಯಂಬಾಡಿ ಎಂಬ 110 ಕಿ.ಮೀ. ದೂರದಲ್ಲಿರುವ ಊರಿನಲ್ಲಿ ಬುಧವಾರ ವಿವಾಹವಾಗಬೇಕಿದೆ.

ಆದರೆ, ಸಾರ್ವಜನಿಕ ಸಾರಿಗೆ ಸಂಪೂರ್ಣ ಸ್ತಬ್ಧವಾಗಿರುವ ಕಾರಣ ಈಗ ಆಕೆ ಮದುವೆಗಾಗಿ ಬೆಂಗಳೂರಿನಿಂದ ಮಂಗಳವಾರ ನಡೆದೇ ಹೊರಟಿದ್ದಾಳೆ. ತಮಿಳುನಾಡು-ಕರ್ನಾಟಕದ ಗಡಿ ದಾಟಿ ತಮಿಳುನಾಡಿನ ಹೊಸೂರು ಬಂದ ನಂತರ ಅಲ್ಲಿಂದ ಬಸ್ಸನ್ನೇರಿ ವಾಣಿಯಂಬಾಡಿಗೆ ತೆರಳಲಿದ್ದಾಳೆ.

ಮೈತುಂಬ ಆಭರಣ, ರೇಷ್ಮೆ ಸೀರೆ ಉಟ್ಟಿರುವ ಪ್ರೇಮಾ, ತನ್ನ ಬಂಧುಗಳ ಜತೆ ಭಾವಿ ಪತಿಯ ಊರಿನತ್ತ ಹೆಜ್ಜೆ ಹಾಕುತ್ತಿದ್ದಾಳೆ. “ಸಂಭ್ರಮದ ದಿನ ಆಗಬೇಕಾದ ಇದು ಕಷ್ಟದ ದಿನವಾಗಿ ಮಾರ್ಪಟ್ಟಿದೆ. ಕನ್ನಡಿಗರು-ತಮಿಳರು ಎಂದು ಈ ರೀತಿ ಹೊಡೆದಾಡಿಕೊಳ್ಳುವ ಬದಲು ನಾವು ಭಾರತೀಯರು ಎಂದು ಮೊದಲು ಅರಿಯಬೇಕು’ ಎಂದು ಬಿಕಾಂ
ಪದವೀಧರಳಾಗಿರುವ ಪ್ರೇಮಾ ಹೇಳುತ್ತಾಳೆ. ಇನ್ನೊಂದೆಡೆ ಭಾವಿ ಪತಿಯಿಂದ ಪ್ರೇಮಾಗೆ “ಎಲ್ಲಿದ್ದೀಯಾ? ಎಲ್ಲ ಸುರಕ್ಷಿತ ತಾನೆ?’ ಎಂದು ಆತಂಕದಿಂದ ಕರೆಗಳು ಬರುತ್ತಲೇ ಇವೆ.

-ಉದಯವಾಣಿ

Comments are closed.