ಕರ್ನಾಟಕ

ಶಾಲಾ ಬ್ಯಾಗ್‌ ಭಾರ ಇಳಿಕೆಗೆ ಸಿಬಿಎಸ್‌ಇ ಸೂತ್ರ

Pinterest LinkedIn Tumblr

schoolಬೆಂಗಳೂರು: ಮಕ್ಕಳ ಶಾಲಾ ಬ್ಯಾಗ್‌ನ ತೂಕ ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ತನ್ನ ಮಾನ್ಯತೆ ಪಡೆದಿರುವ ಶಾಲೆಗಳು, ಶಿಕ್ಷಕರು ಹಾಗೂ ಪೋಷಕರಿಗೆ ಕೆಲ ಸಲಹೆಗಳನ್ನು ಕೊಟ್ಟು, ಅದನ್ನು ಪಾಲಿಸುವಂತೆ ಮನವಿ ಮಾಡಿದೆ.

‘ಶಾಲಾ ಮಕ್ಕಳು ನಿಗದಿಗಿಂತ ಅಧಿಕ ತೂಕದ ಬ್ಯಾಗ್‌ ಹೊರುವುದರಿಂದ ಅವರಿಗೆ ದೀರ್ಘ ಕಾಲ ಬೆನ್ನು, ಹೆಗಲು ಮತ್ತು ಕತ್ತು ನೋವು, ಸ್ನಾಯು ಸೆಳೆತ, ದಣಿವು ಉಂಟಾಗಬಹುದು. ಕೆಲವೊಮ್ಮೆ ಬೆನ್ನುಹುರಿ ಸಮಸ್ಯೆಗಳು ಕಾಡಬಹುದು’ ಎನ್ನುವ ಆತಂಕಕ್ಕೆ ಅದು ದನಿಗೂಡಿಸಿದೆ.

ಶಾಲೆಗಳಿಗೆ ಸಲಹೆ
l ನಿತ್ಯ ಕಡಿಮೆ ಸಂಖ್ಯೆಯ ಪಠ್ಯ ಮತ್ತು ನೋಟ್‌ ಪುಸ್ತಕವನ್ನು ತರುವುದಕ್ಕೆ ಪೂರಕವಾದ ವೇಳಾಪಟ್ಟಿಯನ್ನು ಶಾಲೆಗಳು ಸಿದ್ಧಪಡಿಸಬೇಕು.
l ಈ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಅದಕ್ಕೆ ತಕ್ಕಂತೆ ಪುಸ್ತಕಗಳನ್ನು ತರಲು ಮಕ್ಕಳಿಗೆ ಸೂಚಿಸಬೇಕು.
l ವೇಳಾಪಟ್ಟಿಗೆ ಅನುಗುಣವಾಗಿಯೇ ಶಾಲೆಯ ಬ್ಯಾಗ್‌ ಅನ್ನು ಸಿದ್ಧಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಬೇಕು. ಅನಗತ್ಯವಾದ ಪಠ್ಯ, ನೋಟ್‌ ಪುಸ್ತಕ, ಇತರ ಪುಸ್ತಕಗಳನ್ನು ತರದಂತೆ ಕಿವಿಮಾತು ಹೇಳಬೇಕು.

l ಮಕ್ಕಳ ಬ್ಯಾಗ್‌ ತೂಕವನ್ನು ಶಾಲೆಗಳ ಆಡಳಿತ ಮಂಡಳಿಗಳು ಆಗಾಗ ಪರಿಶೀಲಿಸುತ್ತಿರಬೇಕು. ಬ್ಯಾಗ್‌ ನಿಗದಿಗಿಂತ ಹೆಚ್ಚು ತೂಕ ಹೊಂದಿದ್ದರೆ ಅಗತ್ಯವಿರುವಷ್ಟನ್ನು ಮಾತ್ರವೇ ತರುವಂತೆ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಇದರಿಂದ ಭವಿಷ್ಯದಲ್ಲಿ ಹೆಚ್ಚು ಅನುಕೂಲವಾಗುತ್ತದೆ.
l ಶಾಲೆಗಳಲ್ಲಿ ಎಲ್ಲ ಮಕ್ಕಳಿಗೂ ಸಾಕಾಗುವಷ್ಟು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇರಬೇಕು. ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರಿನ ಬಾಟಲ್‌ಗಳನ್ನು ತರದಂತೆ ಮಕ್ಕಳಿಗೆ ಸೂಚಿಸಬೇಕು.
l ಶಾಲೆಯಲ್ಲಿ ಇರುವ ಎಲ್ಲ ಶಿಕ್ಷಕರು ಮತ್ತು ಪ್ರಾಂಶುಪಾಲರು ಶಾಲೆಯ ಶುದ್ಧ ನೀರನ್ನೇ ಸೇವಿಸಬೇಕು. ಈ ಮೂಲಕ ಮಕ್ಕಳು ಮತ್ತು ಅವರ ಪೋಷಕರ ಗಮನ ಸೆಳೆಯಬಹುದು. ನೀರಿನ ಶುದ್ಧತೆಯ ಗುಣಮಟ್ಟವನ್ನು ಪದೇ ಪದೇ ಪರೀಕ್ಷಿಸುವ ವ್ಯವಸ್ಥೆಯನ್ನು ಆಯಾ ಶಾಲೆಗಳು ಮಾಡಬೇಕು.

l ಮಕ್ಕಳು ಹೆಚ್ಚುವರಿಯಾಗಿ ಕ್ರೀಡಾ ಸಮವಸ್ತ್ರಗಳನ್ನು ತರದಂತೆ ಎಚ್ಚರ ವಹಿಸಬೇಕು. ಕ್ರೀಡಾ ಚಟುವಟಿಕೆಯ ದಿನಗಳಂದು ಇಡೀ ದಿನ ಕ್ರೀಡಾ ಸಮವಸ್ತ್ರದಲ್ಲಿಯೇ ಇರಲು ಮಕ್ಕಳಿಗೆ ಅವಕಾಶ ನೀಡಬೇಕು.
l ತರಗತಿಗಳಲ್ಲಿ ಶಿಕ್ಷಕರ ಸಮ್ಮುಖದಲ್ಲಿಯೇ ಅಸೈನ್‌ಮೆಂಟ್‌ ಮತ್ತು ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ ಅಗತ್ಯಕ್ಕಿಂತ ಕಡಿಮೆ ಪುಸ್ತಕ ತರಲು ಅವಕಾಶ ಕಲ್ಪಿಸಬೇಕು.
l ಹೋಮ್‌ ವರ್ಕ್‌ಗಳನ್ನು ಹೆಚ್ಚಿಗೆ ಕೊಡಬಾರದು. ಸಾಧ್ಯವಾದಷ್ಟು ಹೋಮ್‌ ವರ್ಕ್‌ಗಳನ್ನು ಶಾಲೆಗಳಲ್ಲಿಯೇ ಗುಂಪು ಚಟುವಟಿಕೆಗಳ ಮೂಲಕ ಮಾಡಲು ಅನುವು ಮಾಡಿಕೊಡಬೇಕು.
l ಸಿಬಿಎಸ್‌ಇ ಮಾರ್ಗದರ್ಶಿಯಂತೆಯೇ ಪಠ್ಯ ಪುಸ್ತಕ ಮತ್ತು ವರ್ಕ್ ಬುಕ್‌ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಬೇಕು. 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಅಧಿಕ ತೂಕದ ಪಠ್ಯ ಪುಸ್ತಕಗಳು ಇರದಂತೆ ನೋಡಿಕೊಳ್ಳಬೇಕು. ಅನಗತ್ಯವಾಗಿ ಹೆಚ್ಚುವರಿ ಅಥವಾ ಪೂರಕ ಪಠ್ಯ ಪುಸ್ತಕಗಳನ್ನು ಒದಗಿಸಬಾರದು.

ಶಿಕ್ಷಕರಿಗೆ ಸಲಹೆಗಳು
l ಪಠ್ಯ ಪುಸ್ತಕ ತರದ ಮಕ್ಕಳಿಗೆ ಯಾವುದೇ ರೀತಿಯ ಶಿಕ್ಷೆ ಅಥವಾ ದಂಡನೆಯನ್ನು ಶಿಕ್ಷಕರು ನೀಡಬಾರದು. ಈ ಕುರಿತು ಪ್ರಾಂಶುಪಾಲರು ಸೂಕ್ತ ಸೂಚನೆ ನೀಡಬೇಕು.

l ಶಿಕ್ಷಕರು ಬೋಧನೆಗೆ ಪಠ್ಯವನ್ನೇ ಅವಲಂಬಿಸಬಾರದು. ಇದಕ್ಕಾಗಿ ಇತರ ಪರ್ಯಾಯ ಬೋಧನಾ ವಿಧಾನಗಳನ್ನು ಕಂಡುಕೊಳ್ಳಬೇಕು. ಮಾಹಿತಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಿಂದ ಪಠ್ಯದ ಅವಲಂಬನೆಯನ್ನು ಶಿಕ್ಷಕರು ಕಡಿಮೆ ಮಾಡಿಕೊಳ್ಳಬಹುದು. ಆಗ ಮಕ್ಕಳು ಪಠ್ಯ ಪುಸ್ತಕವನ್ನು ತರಲೇ ಬೇಕು ಎಂಬ ಅಗತ್ಯ ಇರುವುದಿಲ್ಲ.

l ವರ್ಕ್‌ ಪುಸ್ತಕದ ಬದಲಿಗೆ ಹಗುರವಿರುವ ಬಿಡಿ ಹಾಳೆಗಳಲ್ಲಿ ಬರೆದುಕೊಳ್ಳುವಂತೆ ಮಕ್ಕಳನ್ನು ಪ್ರೋತ್ಸಾಹಿಸಬೇಕು.
l ಶಿಕ್ಷಕರು ಪ್ರತಿ ತರಗತಿಗಳಲ್ಲಿ ಇಬ್ಬಿಬ್ಬರು ಮಕ್ಕಳನ್ನು ಜೋಡಿ ಮಾಡಬಹುದು. ವೇಳಾಪಟ್ಟಿಯನ್ನು ಆಧರಿಸಿ ಇಬ್ಬರೂ ಪ್ರತ್ಯೇಕ ಪುಸ್ತಕಗಳನ್ನು ತರುವಂತೆ ನೋಡಿಕೊಳ್ಳಬಹುದು. ಉದಾಹರಣೆಗೆ ದಿನಕ್ಕೆ 8 ತರಗತಿ ಇದ್ದರೆ, ನಾಲ್ಕು ತರಗತಿಯ ಪಠ್ಯ ಪುಸ್ತಕಗಳನ್ನು ಒಬ್ಬ ವಿದ್ಯಾರ್ಥಿ, ಉಳಿದ ನಾಲ್ಕು ತರಗತಿಗಳ ಪಠ್ಯ ಪುಸ್ತಕಗಳನ್ನು ಇನ್ನೊಬ್ಬ ವಿದ್ಯಾರ್ಥಿ ತರುವಂತೆ ಸೂಚಿಸಬಹುದು. ಇದರಿಂದ ಮಕ್ಕಳ ಶಾಲಾ ಬ್ಯಾಗಿನ ತೂಕ ಕಡಿಮೆ ಆಗುತ್ತದೆ.

ಪೋಷಕರಿಗೆ ಸಲಹೆಗಳು

l ಪೋಷಕರು ಮಕ್ಕಳಿಗೆ ಕಡಿಮೆ ತೂಕದ ಬ್ಯಾಗ್‌ ಕೊಡಿಸಬೇಕು.
l ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾಗಿದ್ದರೆ ನಿತ್ಯ ವೇಳಾಪಟ್ಟಿಗೆ ಅನುಗುಣವಾಗಿ ಪುಸ್ತಕಗಳನ್ನು ತೆಗೆದುಕೊಂಡು ಹೋಗುವಂತೆ ನೋಡಿಕೊಳ್ಳಬೇಕು.
l ಅನಗತ್ಯವಾಗಿ ಕತೆ ಪುಸ್ತಕ, ಆಟಿಕೆಗಳನ್ನು ತೆಗೆದುಕೊಂಡು ಹೋಗದಂತೆ ನಿಗಾ ವಹಿಸಬೇಕು.
l ಮಕ್ಕಳ ಶಾಲಾ ಬ್ಯಾಗ್‌ಗಳನ್ನು ನಿತ್ಯ ಶುಚಿಗೊಳಿಸಬೇಕು.

ಹೋಮ್‌ವರ್ಕ್‌ ಬೇಡ
ಒಂದು ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಹೋಮ್‌ ವರ್ಕ್‌ ಕೊಡಬಾರದು. ಅಲ್ಲದೆ ಈ ಮಕ್ಕಳು ಶಾಲೆಗಳಿಗೆ ತಮ್ಮ ಬ್ಯಾಗ್‌ಗಳನ್ನೂ ತರಬಾರದು ಎಂಬುದು ಸಿಬಿಎಸ್‌ಇಯ ಮಹತ್ವದ ಸಲಹೆಗಳಲ್ಲೊಂದು.

Comments are closed.