ಕರ್ನಾಟಕ

ಮತ್ತೆ ದೋಸ್ತಿ ಮೇಯರ್ : ಬಿಬಿಎಂಪಿಯಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿಗೆ ಓನಾಮ

Pinterest LinkedIn Tumblr

cmಬೆಂಗಳೂರು, ಸೆ. ೧೪- ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆ ಸಮೀಪಿಸುತ್ತಿದ್ದಂತೆ ಮೈತ್ರಿ ರಾಜಕಾರಣ ಕುರಿತು ಕಾಂಗ್ರೆಸ್ ಮತ್ತು ಜೆಡಿಎಸ್ ವಲಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ.
ಪ್ರಸ್ತುತ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು, ಮುಂದಿನ ಚುನಾವಣೆಯಲ್ಲೂ ಮೈತ್ರಿ ಮುಂದುವರೆಸುವ ಸಂಬಂಧ ಎರಡೂ ಪಕ್ಷಗಳ ವಲಯದಲ್ಲಿ ಗಂಭೀರ ಚರ್ಚೆ, ಸಮಾಲೋಚನೆಗಳು ನಡೆಯುತ್ತಿವೆ.
ಶತಾಯಗತಾಯ ಜೆಡಿಎಸ್ ಜತೆಗಿನ ಮೈತ್ರಿ ಮುಂದುವರೆಸಬೇಕು ಎಂಬ ನಿಲುವು ಕಾಂಗ್ರೆಸ್ ಪಕ್ಷದ್ದಾಗಿದ್ದರೇ, ಅಧಿಕಾರ ಸ್ಥಾನಮಾನ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಚೌಕಾಸಿ ಮಾಡಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಬೆಳಗ್ಗೆ ತಮ್ಮ ಗೃಹ ಕಛೇರಿ ಕೃಷ್ಣಾದಲ್ಲಿ ನಗರದ ವ್ಯಾಪ್ತಿಯ ಶಾಸಕರು, ವಿಧಾನಪರಿಷತ್ ಸದಸ್ಯರೊಂದಿಗೆ ಪಾಲಿಕೆಯಲ್ಲಿ ಮೈತ್ರಿ ಮುಂದುವರೆಸಲು ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದರು.
ಜೆಡಿಎಸ್ ಜತೆ ಮೈತ್ರಿ ಮುಂದುವರೆಸಲು ಸಿದ್ಧರಾಮಯ್ಯನವರು ಒಲವು ತೋರಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಸಚಿವರು, ಶಾಸಕರು ಸಹ ಮತ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಮ್ಮ ಪದ್ಮನಾಭನಗರದ ನಿವಾಸ ಅಮೋಘದಲ್ಲಿ ತಮ್ಮ ಪುತ್ರ, ಮಾಜಿ ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ, ಪಕ್ಷದ ಶಾಸಕರು, ನಗರಪಾಲಿಕೆ ಸದಸ್ಯರೊಂದಿಗೆ ಮೈತ್ರಿ ರಾಜಕಾರಣ ವಿಚಾರ ಕುರಿತು ಚರ್ಚೆ ನಡೆಸಿದ್ದಾರೆ.
ಮುಂದಿನ ಮೇಯರ್ ಸ್ಥಾನವನ್ನು ತಮಗೆ ಬಿಟ್ಟುಕೊಡಬೇಕೆಂಬ ಒತ್ತಾಯ ಕೆಲವು ಜೆಡಿಎಸ್ ಪಾಲಿಕೆ ಸದಸ್ಯರದ್ದಾಗಿದೆ. ಇನ್ನೊಂದು ಮೂಲದ ಪ್ರಕಾರ ಅಧಿಕಾರ ಸ್ಥಾನಮಾನ ವಿಚಾರದಲ್ಲಿ ಚೌಕಾಸಿ ಮಾಡುವ ಮೂಲಕ ಉಪಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೂ ಬೇಡಿಕೆ ಇಡಲು ಆ ಪಕ್ಷದ ನಾಯಕರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಿಂಗ್ ಮೇಕರ್ ಸ್ಥಾನದಲ್ಲಿರುವ ಜೆಡಿಎಸ್ ಬೇಡಿಕೆಗಳ ಬಗ್ಗೆ ಕಾಂಗ್ರೆಸ್ ನಾಯಕರು ಹೇಗೆ ಸ್ಪಂದಿಸಲಿದ್ದಾರೆ ಎಂಬುದು ತಿಳಿದು ಬಂದಿಲ್ಲ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಶಾಸಕರು ಜೆಡಿಎಸ್ ಜತೆಗಿನ ಮೈತ್ರಿ ಮುಂದುವರೆಸುವ ಬಗ್ಗೆ ಒಲವು ತೋರಿದ್ದಾರೆ ಎನ್ನಲಾಗಿದೆ.
ಕಳೆದ ಬಾರಿಯಂತೆ ಈ ಬಾರಿಯೂ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಉಳಿಸಿಕೊಂಡು ಉಪಮೇಯರ್ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂಬ ವಿಚಾರವೂ ಸಭೆಯಲ್ಲಿ ಪ್ರಸ್ತಾಪವಾಗಿದೆ.
ಜೆಡಿಎಸ್ ನಾಯಕರು ಕೈಗೊಳ್ಳುವ ಅಂತಿಮ ನಿರ್ಣಯವನ್ನು ಆಧರಿಸಿ ಕಾಂಗ್ರೆಸ್ ನಾಯಕರು ತಮ್ಮ ನಿಲುವೆನೆಂಬುದನ್ನು ತಿಳಿಸಲು ನಿರ್ಧರಿಸಿದ್ದಾರೆ.
ಸಿದ್ಧರಾಮಯ್ಯ ನೇತೃತ್ವದ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ, ರೋಷನ್‌ಬೇಗ್, ಶಾಸಕರಾದ ಬೈರತಿ ಸುರೇಶ್, ವಿ.ಎಸ್. ಉಗ್ರಪ್ಪ, ಜಯಮಾಲಾ, ರಿಜ್ವಾನ್ ಹರ್ಷದ್, ನಾರಾಯಣಸ್ವಾಮಿ, ಎನ್.ಎ. ಹ್ಯಾರೀಸ್ ಸೇರಿದಂತೆ ನಗರದ ಶಾಸಕರು ಪಾಲ್ಗೊಂಡಿದ್ದರು.

Comments are closed.