ಕರ್ನಾಟಕ

ಕರ್ನಾಟಕ ಬಂದ್‌ಗೆ ಪಾಲಿಕೆ ಬೆಂಬಲ

Pinterest LinkedIn Tumblr

bbmp_logo

ಬೆಂಗಳೂರು, ಸೆ. ೭-ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶದಿಂದ ರಾಜ್ಯದ ರೈತರಿಗೆ ವಿಶೇಷವಾಗಿ ಬೆಂಗಳೂರು ನಗರದ ಜನತೆಗೆ ಅನ್ಯಾಯವಾಗಿದೆ. ಆದೇಶದ ವಿರುದ್ಧವಾಗಿ ನಡೆದಿರುವ ಹೋರಾಟ ಹಾಗೂ ಸೆ. 9ರ ಕರ್ನಾಟಕ ಬಂದ್‌ಗೆ ಬಿಬಿಎಂಪಿಯ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಪಕ್ಷಗಳು ಪಕ್ಷಾತೀತವಾಗಿ ಪರೋಕ್ಷ ಬೆಂಬಲ ವ್ಯಕ್ತಪಡಿಸಿವೆ.
ಬಿಬಿಎಂಪಿ ಕೇಂದ್ರ ಕಛೇರಿಯ ಸಭಾಂಗಣದಲ್ಲಿ ಮೇಯರ್ ಮಂಜುನಾಥರೆಡ್ಡಿ, ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ, ಬಿಜೆಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಜೆಡಿಎಸ್ ನಾಯಕ ಆನಂದ್ ರವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಜ್ಯಾದ್ಯಂತ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ನಡೆಯಲಿರುವ ಹೋರಾಟಗಳು ಹಾಗೂ ಬಂದ್ ಸಂಬಂಧ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಹೋರಾಟ ಮತ್ತು ಬಂದ್ ಶಾಂತಿಯುತವಾಗಿರಬೇಕು ಎಂದು ಹೋರಾಟಗಾರರಲ್ಲಿ ಮೇಯರ್ ಮನವಿ ಮಾಡಿದರು.
ರೈತರ ಬಗ್ಗೆ ನಮಗೆ ಹೆಚ್ಚಿನ ಕಾಳಜಿ ಇದೆ. ಹಾಗೆಯೇ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ನಗರದಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಮೇಯರ್ ಆತಂಕ ವ್ಯಕ್ತಪಡಿಸಿದರು.
ಸರ್ಕಾರ ಆದೇಶದ ವಿರುದ್ಧ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಲಿದೆ. ಈ ಸಂಬಂಧ ನ್ಯಾಯಾಲಯ ಮೇಲುಸ್ತುವಾರಿ ಸಮಿತಿ ರಚಿಸಬೇಕು. ವಸ್ತುಸ್ಥಿತಿಯನ್ನು ಗಮನಿಸಬೇಕು ಹಾಗೂ ಈಗ ನೀಡಿರುವ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ ಹೇಳಿದರು.
ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಸಂಕಷ್ಟ ಎದುರಾದಾಗ ಪಕ್ಷಾತೀತವಾಗಿ ನೆಲ-ಜಲ-ಭಾಷೆಗಳ ಬಗ್ಗೆ ಹೋರಾಟಗಳು ನಡೆದಿವೆ. ಸುಪ್ರೀಂಕೋರ್ಟ್ ತೀರ್ಪು ಅವೈಜ್ಞಾನಿಕ ತೀರ್ಪು ಎಂದು ಆರೋಪಿಸಿದರು.
ಮುಖ್ಯಮಂತ್ರಿ ಜಯಲಲಿತಾ ಅಧಿಕಾರಕ್ಕೆ ಬಂದಾಗಲೆಲ್ಲಾ ಕಾವೇರಿ ವಿಚಾರವಾಗಿ ಜಗಳ ತೆಗೆಯುತ್ತಲೆ ಇರುತ್ತಾರೆ. ರಾಜಕೀಯವಾಗಿ ಅವರು ಕಾವೇರಿ ವಿಷಯವನ್ನು ಬಳಸಿಕೊಳ್ಳುತ್ತಾರೆ ಎಂದು ಆಪಾದಿಸಿದರು.
ಜೆಡಿಎಸ್‌ ನಾಯಕ ಆನಂದ್, ಸುಪ್ರೀಂಕೋರ್ಟ್ ಆದೇಶದ ವಿರುದ್ದ ಜೆಡಿಎಸ್ ಪ್ರತಿಭಟನೆ ನಡೆಸುತ್ತದೆ ಎಂದು ಹೇಳಿದರು.

Comments are closed.