ಕರಾವಳಿ

ರಾಷ್ಟ್ರೀಯ ಹೆದ್ದಾರಿಯೊಂದಿಗೆ ಸರ್ವೀಸ್ ರಸ್ತೆಗೂ ಆದ್ಯತೆ ನೀಡಿ- ಪ್ರಮೋದ್ ಮಧ್ವರಾಜ್

Pinterest LinkedIn Tumblr

ಉಡುಪಿ: ರಾಷ್ಟ್ರೀಯ ಹೆದ್ದಾರಿ ಬಳಿಯ ನಿವಾಸಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ಸರ್ವಿಸ್ ರಸ್ತೆಯನ್ನು ಶೀಘ್ರ ಸಂಪೂರ್ಣಗೊಳಿಸಿ. ರಸ್ತೆಯ ಬದಿಗಳಲ್ಲಿ ಚರಂಡಿ ಇಲ್ಲದೆ ಕಟಪಾಡಿ, ಸಾಸ್ತಾನ, ಕೋಟಾ ಪ್ರದೇಶಗಳಲ್ಲಿ ನೀರು ನೇರವಾಗಿ ರಸ್ತೆ ಬದಿ ಇರುವ ಮನೆಗಳಿಗೆ ನುಗ್ಗಿದ್ದು ಜನರು ತೊಂದರೆ ಅನುಭವಿಸುವಂತಾಗಿದೆ. ಹೆದ್ದಾರಿ ರಚನೆ ವೇಳೆ ಪೂರಕ ವ್ಯವಸ್ಥೆಗಳನ್ನು ನಿರ್ಮಿಸಿ ಜನಜೀವನಕ್ಕೆ ತೊಂದರೆಯುಂಟು ಮಾಡದಂತೆ ಎಚ್ಚರಿಕೆ ವಹಿಸಿ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್‌ನಲ್ಲಿ ಆಯೋಜಿಸಿದ ರಾಷ್ಟ್ರೀಯ ಹೆದ್ದಾರಿ -66 ಸಂಬಂದ ಸ್ವೀಕೃತವಾದ ಸಾರ್ವಜನಿಕ ದೂರು ಅರ್ಜಿ ಪರಿಶೀಲನೆ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

National Highway_Minister_meeting (3) National Highway_Minister_meeting (2) National Highway_Minister_meeting (1)

ರಾಷ್ಟ್ರೀಯ ಹೆದ್ದಾರಿಯವರು ಜಿಲ್ಲಾಡಳಿತ ನೀಡುವ ಜನಪರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯನಿರ್ವಹಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಜನಪರವಾಗಿ ಕರ್ತವ್ಯ ನಿರ್ವಹಿಸಬೇಕಿದ್ದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವೇಳೆ ಜಿಲ್ಲಾಡಳಿತದ ಸಲಹೆ ಸೂಚನೆಗಳನ್ನು ಅನುಷ್ಠಾನಕ್ಕೆ ತರುವ ಹೊಣೆಯಿದೆ ಎಂದರು.  ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರಶೇಖರ್ ಅವರಿಗೆ ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ನಡುವೆ ಆದ ಪರಸ್ಪರ ಒಪ್ಪಂದ ಮತ್ತು ಟೋಲ್ ಬಗ್ಗೆ ಇರುವ ಮಾರ್ಗಸೂಚಿಗಳನ್ನು ಅಭ್ಯಸಿಸಿ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.

ಕುಂದಾಪುರದಿಂದ ಹೆಜಮಾಡಿ ವರೆಗಿನ ರಾಷ್ಟ್ರೀಯ ಹೆದ್ದಾರಿಯೊಳಗಡೆ ಬರುವ ಪಿಡಿ‌ಒ, ತಹಸೀಲ್ದಾರ್, ಇತರ ಸಂಬಂಧಪಟ್ಟ ಅಧಿಕಾರಿಗಳ ಮತ್ತು ಜನರ ಸಭೆ ಕರೆದು ಅಹವಾಲು ಆಲಿಸಲು ಸಹಾಯಕ ಕಮಿಷನರ್ ಅಶ್ವಥಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು. ಪಂಚಾಯಿತಿಗಳ ನೀರಿನ ಪೈಪ್ ಒಡೆದಿರುವುದು, ಚರಂಡಿ ಹಾಳಾಗಿರುವುದು, ದಾರಿದೀಪ ಇಲ್ಲದಿರುವುದನ್ನು ಪಟ್ಟಿ ಮಾಡಿ, ಎನ್ ಎಚ್‌ನವರಿಂದ ಹಾಳಾಗಿರುವ ಸಾರ್ವಜನಿಕ ಸೊತ್ತುಗಳನ್ನು ಅವರಿಂದಲೇ ಸರಿ ಮಾಡಿಸಲು ಸೂಚನೆ ನೀಡುವ ಬಗ್ಗೆಯೂ ಸಭೆಯಲ್ಲಿ ಮಾರ್ಗದರ್ಶನ ನೀಡಿದರು.

ಕೋಟಾ ಹೈಸ್ಕೂಲ್ ಜಂಕ್ಷನ್, ಸಂತೆಕಟ್ಟೆ, ಕಲ್ಯಾಣಪುರ, ನಾವುಂದ, ಬಸ್ರೂರು, ಅಂಬಲಪಾಡಿಯಲ್ಲಿ ಫ್ಲೈ‌ಓವರ್, ಅಂಡರ್‌ಪಾಸ್, ಸರ್ವಿಸ್ ರಸ್ತೆ ನಿರ್ಮಾಣಕ್ಕೆ ವಿವಿಧ ಸಂಘಟನೆಗಳ ಮುಖಂಡರು ಸಚಿವರ ಗಮನ ಸೆಳೆದರು. ಕುಂದಾಪುರ ತಲ್ಲೂರು ನಡುವೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಿಗುವ ಸೇತುವೆಗಳಲ್ಲಿ ಅಪಾಯಕಾರಿ ಹೊಂಡಗಳಾಗಿದ್ದು, ಇದನ್ನು ಮುಚ್ಚಲು ಕ್ರಮಕೈಗೊಳ್ಳುವ ಬಗ್ಗೆ, ಬಸ್ ಸ್ಟ್ಯಾಂಡ್ ನಿರ್ಮಿಸುವ ಬಗ್ಗೆ, ನಿತ್ಯ ಸಂಚಾರಿಗಳಿಗೆ ಟೋಲ್ ನಿಂದ ಆಗಿರುವ ತೊಂದರೆಯ ಬಗ್ಗೆ, ಟೋಲ್ ಸಿಬ್ಬಂದಿಗಳನ್ನು ನೇಮಕ ಮಾಡುವಾಗ ಸ್ಥಳೀಯರನ್ನು ನೇಮಿಸುವ ಬಗ್ಗೆ, ಮೇಲು ಸೇತುವ ಬಗ್ಗೆ, ಆಟೋ ಮುಂತಾದ ಬಾಡಿಗೆ ವಾಹನಗಳಿಗೆ ತಂಗುದಾಣ ನಿರ್ಮಾಣ ಮಾಡುವ ಬಗ್ಗೆ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು.ಕಟಪಾಡಿ, ಕಾಪು, ಬೈಂದೂರು ವ್ಯಾಪ್ತಿಯ ಸಂಘಟನೆಯ ಮುಖಂಡರು ಹಾಗೂ ಪ್ರಾಕೃತಿಕ ವಿಕೋಪ ಎದುರಿಸಿದ ಕಟಪಾಡಿಯ ಪಾಂಡುರಂಗ ಕಿಣಿ ಅವರು ಸಭೆಯಲ್ಲಿ ಮಳೆಗಾಲದಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ನೀಡಿದ ಸೇವೆಯನ್ನು ಶ್ಲಾಘಿಸಿದರಲ್ಲದೆ, ನೀರಿನ ಹರಿವಿಗೆ ಶಾಶ್ವತ ವ್ಯವಸ್ಥೆ ಮಾಡಿಸುವಂತೆ ಸಚಿವರಲ್ಲಿ ವಿನಂತಿಸಿದರು.

ಕುಂದಾಪುರದ ಕಿರಿಮಂಜೇಶ್ವರದಲ್ಲಿ ಅಂಡರ್‌ಪಾಸ್ ಕಾಮಗಾರಿ ಆರಂಭಿಸಲು ಸಚಿವರಿಗೆ ವಿಶೇಷ ಮನವಿಯನ್ನು ಸಭೆಯಲ್ಲಿ ಸಲ್ಲಿಸಲಾಯಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ 2010ರಿಂದ ಈವರೆಗೆ 3010 ರಸ್ತೆ ಅಪಘಾತಗಳು ಸಂಭವಿಸಿದ್ದು, 4309 ಜನರು ಗಾಯಗೊಂಡಿದ್ದಾರೆ ಮತ್ತು 750 ಜನ ಮೃತಪಟ್ಟಿದ್ದಾರೆ ಎಂದು ಡಿವೈ‌ಎಸ್ ಪಿ ಕುಮಾರಸ್ವಾಮಿ ಅವರು ಸಚಿವರ ಪ್ರಶ್ನೆಗೆ ಉತ್ತರಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿರಿಯ ನಾಗರೀಕರು ಕ್ರಾಸ್ ಮಾಡುವಾಗ ಸಂಭವಿಸಿದ ಅಪಘಾತಗಳಿಂದ ಹೆಚ್ಚಿನ ಮರಣ ಸಂಭವಿಸಿದೆ ಎಂದು ವಿವರಿಸಿದರು. ಪಡುಬಿದ್ರೆಯ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಎನ್ ಎಚ್‌ನ ಅಧಿಕಾರಿ ಸ್ಯಾಮ್ಸನ್ ವಿಜಯ್ ಕುಮಾರ್ ಸಭೆಗೆ ಮಾಹಿತಿ ನೀಡಿದರು.

ಅಂಬಲಪಾಡಿ ರಸ್ತೆಯಲ್ಲಿ ಫ್ಲೈ ಓವರ್, ಫೂಟ್ ಓವರ್, ಅಂಡರ್‌ಪಾಸ್ ಪ್ರತೀ ಬಾರಿ ಒಂದೊಂದು ಬೇಡಿಕೆ ಇಡುವುದರಿಂದ ಅನುಮೋದನೆಗೆ ಕಷ್ಟವಾಗಲಿದೆ ಎಂದು ಸ್ಯಾಮ್ಸನ್ ಸಚಿವರ ಗಮನಕ್ಕೆ ತಂದರು.
ಕರಾವಳಿ ಬೈಪಾಸ್ ನಿಂದ ಸಂದೀಪ್ ನಗರದವರೆಗೂ ನಗರಸಭೆಯ ನೀರಿನ ಪೈಪ್ ಹೆದ್ದಾರಿ ಕಾಮಗಾರಿಯಿಂದ ಹಾಳಾಗಿದೆ ಎಂದು ನಗರಸಭೆ ಇಂಜಿನಿಯರ್ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಅನುರಾಧ ಹಾಗೂ ಎನ್ ಎಚ್ ನ ಇತರ ಅಧಿಕಾರಿಗಳು ಸಭೆಯಲ್ಲಿದ್ದರು.

Comments are closed.