ಬೆಂಗಳೂರು: ಎಲ್ಲಾ ಮುಗಿದ ಮೇಲೆ ಪೊಲೀಸರು ಬರುತ್ತಾರೆ ಎಂಬ ಮಾತಿಗೆ ಅಪವಾದವಾಗುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಡಿಮೆ ಅಂಕ ಪಡೆದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಗ ಹೊಯ್ಸಳ ಪೊಲೀಸರ ಸಮಯ ಪ್ರಜ್ಞೆಯಿಂದ ಈ ಅನಾಹುತ ತಪ್ಪಿದೆ.
ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿ ಉದ್ದೇಶವನ್ನು ಹೊಯ್ಸಳ ವಾಹನದ ಸಿಬ್ಬಂದಿ ವಿಫಲಗೊಳಿಸುವ ಮೂಲಕ ಕೆಲವೊಮ್ಮೆ ಪೊಲೀಸರು ಸಮಯಕ್ಕೆ ಬರುತ್ತಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಹೀಗೆ ಪೊಲೀಸರಿಂದ ಜೀವ ಉಳಿಸಿಕೊಂಡವ ಡಿಪ್ಲೊಮಾ ವಿದ್ಯಾರ್ಥಿ ಚರಣ್. ಈತನ ಪ್ರಾಣ ಉಳಿಸಿದವರು ಜಾಲಹಳ್ಳಿ ಠಾಣೆಯ ಹೊಯ್ಸಳ ವಾಹನದ ಗಸ್ತು ಸಿಬ್ಬಂದಿ. ವಿದ್ಯಾರಣ್ಯಪುರದ ನಿವಾಸಿಯಾದ ಚರಣ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದ ಕಾರಣಕ್ಕೆ ಬೇಸತ್ತು ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಳ್ಳಲೆಂದು ರೈಲ್ವೆ ಹಳಿ ಮೇಲೆ ಮಲಗಿದ್ದ. ಅದೇ ವೇಳೆ ಹೊಯ್ಸಳ ವಾಹನದಲ್ಲಿ ಗಸ್ತಿನಲ್ಲಿದ್ದ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ಯುವಕನೊಬ್ಬ ರೈಲ್ವೆ ಹಳಿ ಮೇಲೆ ಮಲಗಿದ್ದನ್ನು ಕಂಡು ರೈಲು ನಿಲ್ಲಿಸಿ ವಿದ್ಯಾರ್ಥಿಯ ಪ್ರಾಣ ರಕ್ಷಿಸಿದ್ದಾರೆ.
ಆತ್ಮಹತ್ಯೆಗೆ ನಿರ್ಧಾರ: ವಿದ್ಯಾರಣ್ಯಪುರದ ಚರಣ್ ದೊಡ್ಡಬೊಮ್ಮಸಂದ್ರ ಹತ್ತಿರದ ಖಾಸಗಿ ಡಿಪ್ಲೊಮಾ ಕಾಲೇಜಿನಲ್ಲಿ ಎರಡನೇ ವರ್ಷದ
ವಿದ್ಯಾರ್ಥಿಯಾಗಿದ್ದು, ಓದಿನಲ್ಲಿ ಹಿಂದಿದ್ದ. ಇತ್ತೀಚೆಗೆ ನಡೆದಿದ್ದ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಬೇಸತ್ತು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ. ಅದರಂತೆ ಸೋಮವಾರ ಬೆಳಗ್ಗೆ 10.50ರ ವೇಳೆಗೆ ಎಚ್‌ಎಂಟಿ ಲೇಔಟ್ ಹತ್ತಿರದ ರೈಲ್ವೆ ಹಳಿ ಮೇಲೆ ನಡೆಯುತ್ತಿದ್ದ.
ಅದೇ ವೇಳೆಗೆ ಹೊಯ್ಸಳ ಗಸ್ತು ವಾಹನದಲ್ಲಿ ಸಹಾ ಯಕ ಸಬ್ ಇನ್ಸ್‌ಪೆಕ್ಟರ್ ಶಿವಲಿಂಗಯ್ಯ ಹಾಗೂ ಯಶ ವಂತ್ ಆ ಪ್ರದೇಶಕ್ಕೆ ಬಂದಿದ್ದು, ಅವರಿಗೆ ರೈಲ್ವೆ ಹಳಿ ಮೇಲೆ ಚರಣ್ ಹೋಗುತ್ತಿರುವುದು ಕಾಣಿಸಿದೆ. ಆತನ ವರ್ತನೆ ಕಂಡು ಅನುಮಾನಗೊಂಡ ಪೊಲೀಸರು ರೈಲು ಬರುತ್ತಿದೆ, ಪಕ್ಕಕ್ಕೆ ಸರಿ ಎಂದು ಕೂಗಿದರೂ ಆತ ಕೇಳಿಸದವನಂತೆ ರೈಲ್ವೆ ಹಳಿ ಮೇಲೆ ಮುಂದೆ ಹೋಗುತ್ತಿದ್ದ. ಹೀಗಾಗಿ ಆತ ಆತ್ಮಹತ್ಯೆ ಮಾಡಿಕೊಳ್ಳಲೆಂದೇ ರೈಲ್ವೆ ಹಳಿ ಮೇಲೆ ಹೋಗುತ್ತಿದ್ದಾನೆ ಎಂಬುದನ್ನು ಅರಿತ ಪೊಲೀಸರು ಹೊಯ್ಸಳ ವಾಹನವನ್ನು ರೈಲ್ವೆ ಮೇಲ್ಸೇತುವೆಯಲ್ಲಿ ನಿಲ್ಲಿಸಿ ಜೋರಾಗಿ ಸೈರನ್ ಮಾಡಿದ್ದಾರೆ. ಅದೇ ಸಮಯಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ಬರುತ್ತಿದ್ದ ಪ್ಯಾಸೆಂಜರ್ ರೈಲಿಗೆ ತಲೆಕೊಡಲು ವಿದ್ಯಾರ್ಥಿ ಹಳಿ ಮೇಲೆ ವಿದ್ಯಾರ್ಥಿ ಮಲಗಿದ್ದ.
ಹೊಯ್ಸಳ ವಾಹನದ ಸೈರನ್ ಹಾಗೂ ಪೊಲೀಸರು ಟೋಪಿ ಬೀಸಿ ಅಪಾಯದ ಸಂಜ್ಞೆ ನೀಡುತ್ತಿದ್ದ ರೈಲ್ವೆ ಸಿಬ್ಬಂದಿ ತಕ್ಷಣ ರೈಲಿನ ಬ್ರೇಕ್ ಹಾಕಿದ್ದಾರೆ.
ಇದರಿಂದಾಗಿ ವಿದ್ಯಾರ್ಥಿ ಜೀವ ಉಳಿದಿದೆ. ಇಷ್ಟಾಗಿಯೂ ರೈಲಿನ ಮುಂಭಾಗ ತಗುಲಿದ್ದರಿಂದ ಸ್ವಲ್ಪ ಗಾಯವಾಗಿದೆ. ಕೂಡಲೇ ಆ್ಯಂಬುಲೆನ್ಸ್ ಕರೆಸಿ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
-ಉದಯವಾಣಿ
Comments are closed.