ಕರ್ನಾಟಕ

ಕಸ ಹಾಕುತ್ತಿದ್ದ ಜಾಗದಲ್ಲಿ ದೇವರ ಪ್ರತಿಷ್ಠಾಪನೆ!

Pinterest LinkedIn Tumblr

kasaಬೆಂಗಳೂರು: ಕೇವಲ ಹತ್ತು ದಿನಗಳ ಹಿಂದೆ ಅದು ಇಡೀ ಬಡಾವಣೆಯ ಪ್ರಮುಖ ಕಸ ವಿಲೇವಾರಿ ಕೇಂದ್ರವಾಗಿತ್ತು. ಬೆಳಗಾದರೆ ಅಲ್ಲಿ ರಾಶಿಗಟ್ಟಲೆ ಬಿದ್ದ ಕಸ ರಸ್ತೆ ಆವರಿಸುತ್ತಿತ್ತು. ಆದರೆ, ಈಗ ಆ ಜಾಗದಲ್ಲಿ ದೇವರ ಪ್ರತಿಷ್ಠಾಪನೆಯಾಗಿದೆ. ಅದಕ್ಕೊಂದು ಪೆಂಡಾಲ್‌ ಮತ್ತು ಹಸಿರು ಕಾಪೆìಟ್‌ ಕೂಡ ಹಾಕಲಾಗಿದೆ.

-ಇದು ರಾಜಾಜಿನಗರದ ಶಿವನಗರ ಸರ್ವಿಸ್‌ ರಸ್ತೆಯಲ್ಲಿನ ಬದಲಾದ ಚಿತ್ರಣ. ರಸ್ತೆಗೆ ತಂದು ಸುರಿಯುವ ಕಸದ ಸಮಸ್ಯೆಗೆ ಶಿವನಗರ ಕೆಲ ಮುಖಂಡರು ಕಂಡುಕೊಂಡ ಹೊಸ ಪ್ರಯೋಗ ಇದು. ರಾತ್ರೋರಾತ್ರಿ ಕಸದ ಚೀಲವನ್ನು ಹೊತ್ತು ಸರ್ವಿಸ್‌ ರಸ್ತೆಗೆ ಬರುವ ಜನ ಪೆಂಡಾಲ್‌ ಮತ್ತು ದೇವರ ಭಾವಚಿತ್ರ ನೋಡಿ ನಿರಾಸೆಯಿಂದ ಕೈಮುಗಿದು ಹಿಂತಿರುಗುತ್ತಿದ್ದಾರೆ. ಕೊನೆಗೆ ಮನೆ ಮುಂದೆ ಬರುವ ಕಸದ ವಾಹನಕ್ಕಾಗಿ ಕಾಯುತ್ತಾರೆ. ಇನ್ನು ಪಕ್ಕದಲ್ಲಿನ ದೇವಸ್ಥಾನಕ್ಕೆ ಬರುವ ಭಕ್ತರು ಹತ್ತು ದಿನಗಳಿಂದ ತಲೆಯೆತ್ತಿರುವ ಈ ಪೆಂಡಾಲ್‌ ಅನ್ನು ಕುತೂಹಲದಿಂದ ನೋಡುತ್ತಾರೆ.
ವಿಷಯ ತಿಳಿದು ಹುಬ್ಬೇರಿಸುತ್ತಾರೆ. ಒಟ್ಟಾರೆ ರಸ್ತೆ ಆವರಿಸುತ್ತಿದ್ದ ಕಸಕ್ಕಂತೂ ತಾತ್ಕಾಲಿಕ ಮುಕ್ತಿ ಸಿಕ್ಕಿದೆ.

ಅಲ್ಲಿನ ಕೆಲ ನಿವಾಸಿಗಳೇ ಮುತುವರ್ಜಿ ವಹಿಸಿ ನಡೆಸಿದ ಈ ಪ್ರಯೋಗಕ್ಕೆ ಸ್ಥಳೀಯ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸದಸ್ಯೆ ಮೀನಾಕ್ಷಿ ವಿಜಯಕುಮಾರ್‌ ಹಾಗೂ ನಾಮ ನಿರ್ದೇಶಿತ ಸದಸ್ಯ ವಿಜಯಕುಮಾರ್‌ ಕೈಜೋಡಿಸಿದ್ದಾರೆ. ರಸ್ತೆಗೆ ಕಸ ಚೆಲ್ಲುವುದು ಅತಿಯಾದಾಗ,
ಅದು ಸುತ್ತಲಿನವರ ನಿದ್ದೆಗೆಡಿಸಿತು. ವಾಸನೆ ಮತ್ತು ಸೊಳ್ಳೆಗಳ ಕಾಟ ವಿಪರೀತವಾಯಿತು. ಈ ಹಿನ್ನೆಲೆಯಲ್ಲಿ ಇಲ್ಲಿರುವ ಕೆಲ
ಸ್ನೇಹಿತರೊಂದಿಗೆ ಹರಟುತ್ತಾ ಕುಳಿತಾಗ ಈ ವಿಷಯ ಚರ್ಚೆಗೆ ಬಂತು. ಏನಾದರೂ ಮಾಡಬೇಕು ಎಂದಾಗ ಈ ಯೋಚನೆ
ಹೊಳೆಯಿತು. ಕೆಲವರು ದೇವರ ಮೂರ್ತಿ ಪ್ರತಿಷ್ಠಾಪಿಸೋಣ ಎಂದು ಹೇಳಿದರು. ಇನ್ನು ಹಲವರು ಪೆಂಡಾಲ್‌ ಹಾಕುವ ಐಡಿಯಾ ಕೊಟ್ಟರು ಎಂದು
ವಿಜಯಕುಮಾರ್‌ ವಿವರಿಸುತ್ತಾರೆ.

„ ಕಸಕ್ಕೆ ಕಾವಲು: ಕಳೆದ 10-12 ದಿನಗಳಿಂದ ಪೆಂಡಾಲ್‌ ಹಾಕಲಾಗಿದೆ. ಬ್ಯಾನರ್‌ನಲ್ಲಿ ದೇವರ ಫೋಟೋ ಹಾಕಿ, ಇಲ್ಲಿ ಕಸ ಚೆಲ್ಲಬಾರದು.
ಕಸ ಹಾಕಿದರೆ 500ರಿಂದ ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಫ‌ಲಕ ಅಳವಡಿಸಲಾಗಿದೆ. ಅಲ್ಲದೆ, ಕುಂದುಕೊರತೆಗಳಿಗೆ ಕಸ
ಗುತ್ತಿಗೆದಾರ, ಪಾಲಿಕೆ ಆರೋಗ್ಯಾಧಿಕಾರಿ, ಕಾರ್ಪೋರೇಟರ್‌ ಮೊಬೈಲ್‌ ಸಂಖ್ಯೆ ನೀಡಲಾಗಿದೆ. ಪಕ್ಕದಲ್ಲೇ 10×10 ಪೆಂಡಾಲ್‌ ಹಾಕಲಾಗಿದೆ. ಆರಂಭದಲ್ಲಿ ಒಂದು ವಾರ ಕಾವಲುಗಾರರನ್ನು ಕೂಡ ನೇಮಿಸಲಾಗಿತ್ತು ಎಂದೂ ಅವರು ಹೇಳಿದರು.

ಇದಕ್ಕೆ ಪರ್ಯಾಯವಾಗಿ ಜನರ ಮನೆಬಾಗಿಲಿಗೆ ನಿತ್ಯ ಬೆಳಗ್ಗೆ ಎರಡು ಹೊತ್ತು ಕಸದ ವಾಹನಗಳನ್ನು ಕಳುಹಿಸಲಾಗುತ್ತಿದೆ. ಬೆಳಗ್ಗೆ 7ಕ್ಕೆ ಹಾಗೂ
ಬೆಳಗ್ಗೆ 10.30ಕ್ಕೆ ಶಿವನಗರದ 8, 9, 10 ಮತ್ತು 11ನೇ ಮುಖ್ಯರಸ್ತೆಯಲ್ಲಿ ವಾಹನ ಸುತ್ತು ಹಾಕುತ್ತದೆ ಎಂದು ನಿವಾಸಿಗಳು ತಿಳಿಸುತ್ತಾರೆ.

„ ಸೊಳ್ಳೆಗಿಂತ ನಾಯಿ ಕಾಟ: ಕಾವಲಿದ್ದ ಪಾಲಿಕೆ ಪೌರಕಾರ್ಮಿಕರ ಪುರುಷೋತ್ತಮ್‌, “ಕಸ ಚೆಲ್ಲಬೇಡಿ ಎಂದು ಹೇಳುವಾಗ ಆರಂಭದಲ್ಲಿ ಜನ ವಾದಕ್ಕಿಳಿ ಯುತ್ತಿದ್ದರು. ಸುಮಾರು ದಿನಗಳಿಂದ ನಾವು ಇಲ್ಲಿಯೇ ಕಸ ಹಾಕುತ್ತಿದ್ದೇವೆ ಎಂದು ಜಗಳವಾಡುತ್ತಿದ್ದರು. ಒಮ್ಮೊಮ್ಮೆ ಮಧ್ಯರಾತ್ರಿ 3ರ ಸುಮಾರಿಗೆ ಬಂದು ಯಾರಿಗೂ ಗೊತ್ತಿಲ್ಲದಂತೆ ಕಸ ಹಾಕಿ ಹೋಗುತ್ತಿದ್ದರು. ನಂತರದಲ್ಲಿ ಈ ಸಮಸ್ಯೆ ಬರಲಿಲ್ಲ’ ಎಂದು ವಿವರಿಸಿದರು.
“ಕಾವಲಿದ್ದಾಗ ಸೊಳ್ಳೆಗಿಂತ ಹೆಚ್ಚಾಗಿ ನಾಯಿಗಳ ಉಪಟಳ ತುಂಬಾ ಎದುರಿಸಬೇಕಾಯಿತು. ನಿತ್ಯ ರಾತ್ರಿ ಉದ್ದೇಶಿತ ಸ್ಥಳದಲ್ಲಿ ಕಸದ ರಾಶಿ
ಬಿದ್ದಿರುತ್ತಿತ್ತು. ಅದಕ್ಕೆ ಹತ್ತಾರು ನಾಯಿಗಳು ಮುಗಿಬೀಳುತ್ತಿದ್ದವು. ಆದರೆ, ಕಸ ಇಲ್ಲದಿದ್ದಾಗಲೂ 10-20 ನಾಯಿಗಳ ಗುಂಪು ಬಂದು ಎಷ್ಟೋ ಹೊತ್ತು ಕಾಯುತ್ತಿತ್ತು ಎಂದೂ ಪುರುಷೋತ್ತಮ್‌ ಹೇಳಿದರು.
-ಉದಯವಾಣಿ

Comments are closed.