ಕರ್ನಾಟಕ

ವನ್ಯಜೀವಿ ಸಂರಕ್ಷಿತ ಅರಣ್ಯವನ್ನು ಅತಿಕ್ರಮಿಸಿ ಟ್ರಕ್ಕಿಂಗ್ ನಡೆಸುತ್ತಿದ್ದ ನಾಲ್ವರ ಬಂಧನ

Pinterest LinkedIn Tumblr

chama

ಚಾಮರಾಜನಗರ: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಅರಣ್ಯ ಇಲಾಖೆಯವರು ರಾತ್ರಿವೇಳೆ ವನ್ಯಜೀವಿ ವಲಯಕ್ಕೆ ಸೇರಿದ ಅರಣ್ಯವನ್ನು ಅತಿಕ್ರಮಿಸಿ ಟ್ರಕ್ಕಿಂಗ್ ಮಾಡುತ್ತಿದ್ದವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ರಾಮಾಪುರ ವನ್ಯಜೀವಿ ವಲಯದ ಕೌದಳ್ಳಿ ಶಾಖೆಯ ಕುರಟ್ಟಿಹೊಸೂರು ಗಸ್ತಿನ ಅರಣ್ಯಪ್ರದೇಶದಲ್ಲಿ ಜರುಗಿದೆ.

ಬಂಧಿತರನ್ನು ಅಡ್ವೆಂಚರ್ ಸಮ್‍ನ ಕೋಆರ್ಡಿನೇಟರ್ ಪ್ರಶಾಂತ, ಕುರಟ್ಟಿ ಹೊಸೂರು ಗ್ರಾಮದ ಚೆನ್ನಬಸವಣ್ಣ ಈತನ ಸಹೋದರ ಪಾಂಡುರಂಗ ಮತ್ತು ಪ್ರವಾಸಿಗರನ್ನು ಕರೆತಂದಿದ್ದ ಟೆಂಪೋ ಚಾಲಕ ಅನಿಲ ಎಂದು ಗುರುತಿಸಲಾಗಿದೆ.

ಅಡ್ವೆಂಚರ್ ಸಮ್ ಎಂಬ ಹೆಸರಿನಲ್ಲಿ ವೆಬ್ ತೆರೆದಿದ್ದು ಅದರಲ್ಲಿ ಬಿ.ಆರ್.ಹಿಲ್ಸ್ ನೈಟ್ ಕ್ಯಾಂಪ್ ಮತ್ತು ಪಾಲ್ಸ್ ಟ್ರಕ್ ಎಂಬ ವೆಬ್‍ನ ಮಾಹಿತಿಯಂತೆ ಬೆಂಗಳೂರು ಹಾಗೂ ಇತರೆ ಕಡೆಗಳಲ್ಲಿನ ಜನರನ್ನು ಅರಣ್ಯ ಪ್ರದೇಶಕ್ಕೆ ಕರೆತಂದು ಅವರಿಂದ ಯಥೇಚ್ಚ ಹಣ ಪಡೆದು ಅವೇಳೆಯಲ್ಲಿ ಅಕ್ರಮವಾಗಿ ಅರಣ್ಯವನ್ನು ಅತಿಕ್ರಮಿಸಿ ಟ್ರಕ್ಕಿಂಗ್ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಬೆಂಗಳೂರಿನಿಂದ ಬಂದಿದ್ದ ಟೆಂಪೋ ಟ್ರಾವೆಲರ್ ಸಮೇತ 20 ಜನರನ್ನು ವಶಕ್ಕೆ ತೆಗೆದುಕೊಂಡು ಅದರಲ್ಲಿ ನಾಲ್ವರನ್ನು ಮಾತ್ರ ಬಂಧಿಸಿ ಅರಣ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಉಳಿದವರಿಂದ ಹೇಳಿಕೆ ಪಡೆದುಕೊಂಡು ಬಿಡುಗಡೆಗೊಳಿಸಲಾಗಿದೆ. ಆರೋಪಿಗಳು ಟ್ರಕ್ಕಿಂಗ್ ಅಲ್ಲದೆ ಚೆನ್ನಪ್ಪಶೆಟ್ಟಿಯವರ ಜಮೀನಿನಲ್ಲಿ ಫೈರ ಕ್ಯಾಂಪ್ ನಡೆಸುತ್ತಿದ್ದದು ದಾಳಿಯ ವೇಳೆ ಬೆಳಕಿಗೆ ಬಂದಿದೆ.

ಬಿ.ಆರ್.ಟಿ.ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜುರ ನೇತೃತ್ವದಲ್ಲಿ ಬೈಲೂರು ವಲಯದ ಮಂಜುನಾಥ, ಹನೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಜೆ.ಚಂದ್ರ, ಆರ್‍ಎಫ್‍ಓಗಳಾದ ಪ್ರಕಾಶ್, ಲೋಕೇಶ್, ಸೋಮಪ್ಪ ಹಾಗೂ ರಾಜೇಂದ್ರ ಕುಮಾರ ಮತ್ತು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಆರೋಪಿಗಳನ್ನು ಕೊಳ್ಳೇಗಾಲದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಧೀಶರು 15 ದಿನಗಳ ಕಾಲ ನ್ಯಾಯಾಂಗಬಂಧನಕ್ಕೊಪ್ಪಿಸಿ ಆದೇಶ ನೀಡಿದರು.

Comments are closed.