ಕರ್ನಾಟಕ

ಕನ್ನಡ ಸಿನೆಮಾ ರಂಗದಲ್ಲಿ ಬಹುಬೇಡಿಕೆ ನಟರಲ್ಲಿ ಹೆಚ್ಚು ಸಂಭಾವನೆ ಪಡೆಯುವವರು ಯಾರು ಗೊತ್ತಾ..? ಯಾರು ಯಾರು ಎಷ್ಟೆಷ್ಟು ಪಡೆಯುತ್ತಾರೆ…ಇಲ್ಲಿದೆ ಓದಿ…

Pinterest LinkedIn Tumblr

Kannada_heroes

ಬೆಂಗಳೂರು: ಕನ್ನಡದ ಮಟ್ಟಿಗೆ ನಾಯಕಿಯರ ಸಂಭಾವನೆ ಇನ್ನೂ ಲಕ್ಷಗಳ ಲೆಕ್ಕಾಚಾರದಲ್ಲೇ ಇದೆ. ಆದರೆ, ಕನ್ನಡದ ಹೀರೋಗಳ ಸಂಭಾವನೆ ಮಾತ್ರ ಕೋಟಿಯ ಗಡಿ ಮುಟ್ಟಿದೆ. ಹಾಗೆ ನೋಡಿದರೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಆವರೇಜ್ ನಟಿಯರು ತೆಗೆದುಕೊಳ್ಳುತ್ತಿರುವ ಒಟ್ಟು ಸಂಭಾವನೆಯಷ್ಟು ನಮ್ಮೂರಿನ ಹೀರೋಗಳು ಪಡೆಯುತ್ತಿದ್ದಾರೆ! ಇದೇ ಇಲ್ಲಿನ ಮಾರುಕಟ್ಟೆಗೆ ಹೆಚ್ಚು. ಕನ್ನಡದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಹೀರೋ ಯಾರಿರಬಹುದು? ಒಂದು ಕುತೂಹಲದ ನೋಟ ಇಲ್ಲಿದೆ.

1280x720-7FU

ದರ್ಶನ್ ಇಲ್ಲಿ ದಾದಾ!
‘ಮೆಜೆಸ್ಟಿಕ್’ನಲ್ಲಿ ಗೆಲುವು ಕಂಡು ‘ಕರಿಯ’ ಮೂಲಕ ಹೊಸ ಭೂಗತ ಲೋಕ ತೆರೆದಿಟ್ಟ ಈ ನಟ ಸದ್ಯಕ್ಕೆ ಕನ್ನಡ ಚಿತ್ರರಂಗದ ಚಕ್ರವರ್ತಿ. ದರ್ಶನ್ ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ನ ಸುಲ್ತಾನ್! ದರ್ಶನ್ ಒಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರೆ, ಗಾಂಧಿನಗರದಲ್ಲಿ ದೊಡ್ಡ ಮಟ್ಟದಲ್ಲಿ ಫೈನಾನ್ಸ್ ವಹಿವಾಟು ನಡೆಯುತ್ತದೆ. ಇವರ ಸಂಭಾವನೆ ಅಂದಾಜು 4.5 ರಿಂದ 5 ಕೋಟಿ ರೂ.! ಕೆಲವೊಮ್ಮೆ ಸಿನಿಮಾ, ಬ್ಯಾನರ್, ಕತೆ ಎಲ್ಲವೂ ಚೆನ್ನಾಗಿದ್ದರೆ ಜಗ್ಗುದಾದಾನ ಕಾಲ್‌ಶೀಟ್ ಕೊಂಚ ಕಡಿಮೆ ರೇಟಿಗೆ ದೊರೆಯಬಹುದು. ಇಲ್ಲ ಅಂದರೆ 5 ಕೋಟಿಯಲ್ಲಿ ಇವರು ಒಂದು ರುಪಾಯಿಯನ್ನೂ ಕಡಿಮೆ ಮಾಡೋಲ್ವಂತೆ!

ಪವರ್‌ಫುಲ್ ಪುನೀತ್
ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬೆಟ್ಟದ ಹೂವು ಪುನೀತ್ ರಾಜ್‌ಕುಮಾರ್. ‘ಅಪ್ಪು’ ಚಿತ್ರದ ಮೂಲಕ ನಾಯಕ ನಟರಾದ ಪುನೀತ್, ಒಂದು ರೀತಿಯಲ್ಲಿ ನಿರ್ಮಾಪಕರ ಬಾಸ್ ಎನ್ನಬಹುದು. ಯಾಕೆಂದರೆ ಈಗಲೂ ಒಂದು ಹಂತಕ್ಕೆ ತಮ್ಮ ಸಕ್ಸಸ್ ರೇಟನ್ನು ಕಾಯ್ದುಕೊಳ್ಳುತ್ತಲೇ ಅತ್ತ ಸ್ಯಾಟಲೈಟ್ ರೈಟ್ಸ್‌ನಲ್ಲೂ ಟಿಆರ್‌ಪಿ ಉಳಿಸಿಕೊಂಡಿರುವ ಈ ಅರಸು ಸದ್ಯಕ್ಕೆ ಪಡೆಯುತ್ತಿರುವ ಸಂಭಾವನೆ ಸುಮಾರು 4 ರಿಂದ 4.5 ಕೋಟಿ ರು.! ಕೆಲವೊಮ್ಮೆ 5 ಕೋಟಿ ರು. ತೆಗೆದುಕೊಂಡ ಉದಾಹರಣೆಗಳೂ ಇವೆ.

ಕೋಟಿಗೊಬ್ಬ ಸುದೀಪ್
ಕನ್ನಡದ ನಟನಾದರೂ ಭಾರತೀಯ ಸಿನಿಮಾ ನಕ್ಷೆಯಲ್ಲಿ ಗುರುತಿಸಿಕೊಂಡ ನಟ ಸುದೀಪ್. ‘ರಣ್’ ಮೂಲಕ ಬಾಲಿವುಡ್‌ಗೆ ಎಂಟ್ರಿಯಾದರೆ, ‘ಈಗ’ ಮೂಲಕ ಭಾರತದ ಅಷ್ಟೂ ಭಾಷೆಗಳಿಗೆ ಕಾಲಿಟ್ಟವರು. ‘ಬಾಹುಬಲಿ’ಯಲ್ಲೂ ಕಾಣಿಸಿಕೊಂಡು ಮತ್ತಷ್ಟು ಜನಪ್ರಿಯತೆ ಕಂಡರು. ಕನ್ನಡದ ಈ ರನ್ನ ಬಲು ಚೂಸಿ. ಸದ್ಯಕ್ಕೆ ‘ಕೋಟಿಗೊಬ್ಬ-2’ ಮುಗಿಸಿಕೊಂಡು, ‘ಹೆಬ್ಬುಲಿ’ಗೆ ರೆಡಿಯಾಗುತ್ತಿರುವ ಸುದೀಪ್, ಸಿನಿಮಾಗಳ ಆಯ್ಕೆಯಲ್ಲಿ ತೋರುವ ಚೂಸಿತನವನ್ನು ಸಂಭಾವನೆಯಲ್ಲೂ ತೋರುತ್ತಾರೆಂಬ ಮಾತುಗಳಿವೆ. ಹೀಗಾಗಿ ನಂ.1 ನಟ ಆದರೂ ಸಂಭಾವನೆಯಲ್ಲಿ ಅವರದ್ದು ಮೂರನೇ ಸ್ಥಾನ ಎಂಬ ಮಾಹಿತಿಯಿದೆ. ಸುದೀಪ್ ಪ್ರತಿ ಚಿತ್ರಕ್ಕೆ ತೆಗೆದುಕೊಳ್ಳುವುದು 4 ಕೋಟಿ ರು.! ನಟನೆ ಜತೆ ನಿರ್ದೇಶನದ ಹೊಣೆಯನ್ನೂ ಹೊತ್ತರೆ 4.5 ಕೋಟಿ ರೂ. ದಾಟಬಹುದಂತೆ!

ಬ್ಯುಸಿ ಶಿವಣ್ಣನ ಸಂಭಾವನೆ
ಸ್ಯಾಂಡಲ್‌ವುಡ್‌ನ ಅತ್ಯಂತ ಬ್ಯುಸಿ ನಟ ಶಿವರಾಜ್‌ಕುಮಾರ್. ಚಿತ್ರೀಕರಣದಲ್ಲಿರುವ, ಚಿತ್ರೀಕರಣಕ್ಕೆ ಹೋಗಬೇಕಿರುವ, ಹೆಸರು ಪ್ರಕಟಣೆಯಾಗಿರುವ ಎಲ್ಲ ಚಿತ್ರಗಳನ್ನು ಸೇರಿಸಿದರೆ ಶಿವಣ್ಣ ಅವರ ಕಾಲ್‌ಶೀಟ್ ಖಾತೆಯಲ್ಲಿ ಒಂದು ಡಜನ್ ಸಿನಿಮಾಗಳು ಸಿಗುತ್ತವೆ. ನಿರ್ಮಾಪಕ ಹಾಗೂ ನಿರ್ದೇಶಕರ ಪಾಲಿನ ಎವರ್‌ಗ್ರೀನ್ ಹೀರೋ ಎನಿಸಿಕೊಂಡಿರುವ ಸೆಂಚುರಿ ಸ್ಟಾರ್ ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ 3.5 ಕೋಟಿ ರುಪಾಯಿ ಎನ್ನುತ್ತದೆ ಗಾಂಧಿನಗರ.

ಉಪ್ಪಿ ಬೆಲೆಯೂ ಕಮ್ಮಿ ಇಲ್ಲ!
ಸಂಭಾವನೆ ವಿಚಾರದಲ್ಲಿ ಶಿವಣ್ಣರಷ್ಟೇ ಸರಾಸರಿ ಕಾಯ್ದುಕೊಂಡವರು ಉಪೇಂದ್ರ. ‘ಓಂ’ ಚಿತ್ರದ ಮೂಲಕ ನಿರ್ದೇಶಕರಾಗಿ ತಮ್ಮ ತಾಕತ್ತು ತೋರಿಸಿದ ಉಪ್ಪಿ, ನಟರಾಗಿಯೂ ಗೆದ್ದಿದ್ದಾರೆ, ಸೋತಿದ್ದಾರೆ. ಮತ್ತೆ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಹೌದು, ‘ಕಲ್ಪನಾ-2’ ಮೂಲಕ ಪ್ರೇಕ್ಷಕರ ಮುಂದೆ ಬರಲಿರುವ ಉಪ್ಪಿ ಅವರ ರೇಟು 3.5 ಕೋಟಿ ರುಪಾಯಿ.

ಮುರಳಿ ಲೀಲೆ
ಉಗ್ರಂ ಹಾಗೂ ರಥಾವರ ಚಿತ್ರಗಳಿಗಿಂತ ಮೊದಲು ಶ್ರೀಮುರಳಿ ಅವರನ್ನು ನೆನಪಿಸಿಕೊಂಡವರು ತೀರಾ ಕಡಿಮೆ. ಆದರೆ, ‘ಉಗ್ರಂ’ ಹಿಟ್ ಆಗಿ, ‘ರಥಾವರ’ದಲ್ಲೂ ರನ್ನನಾದ ಶ್ರೀಮುರಳಿ ಫೀನಿಕ್ಸ್‌ನಂತೆ ಎದ್ದು ಬಂದರು. ಶ್ರೀಮುರಳಿ ಈಗ ಇಟಲಿಯಲ್ಲಿ ‘ಮಫ್ತಿ’ ಚಿತ್ರದ ಶೂಟಿಂಗ್‌ನಲ್ಲಿದ್ದಾರೆ. ಒಂದೇ ಒಂದು ಚಿತ್ರದ ಗೆಲುವು ಇವರ ಸಂಭಾವನೆಯನ್ನು 3 ಕೋಟಿಯ ವೃತ್ತದಲ್ಲಿ ತಂದು ನಿಲ್ಲಿಸಿದೆ.

ಗಣೇಶ್ ಗೋಲ್ಡನ್ ಮಿನಿಟ್
ಗಣೇಶ್ ಅವರ ಕಾಲ್‌ಶೀಟ್ ರೇಟಿನ ಬಗ್ಗೆ ಯಾರು ಎಷ್ಟೇ ಗಾಸಿಪ್ ಹಬ್ಬಿಸಲಿ ಅವರು, ತುಂಬಾ ಹಿಂದೆಯೇ ಕೋಟಿಯ ಸಂಭಾವನೆ ಪಡೆದ ನಟ. ಹೀಗಾಗಿ ಅವರಿಗೆ ಕೋಟಿ ರುಪಾಯಿ ಎಂಬುದು ಮುಂಗಾರು ಮಳೆಯಷ್ಟೆ ಹಳೆಯದು. ‘ಜೂಮ್’ ಸಕ್ಸಸ್‌ನಲ್ಲಿರುವ ಗಣೇಶ್ ‘ಪಟಾಕಿ’ ಸಿಡಿಸಿ ಮತ್ತೆ ‘ಮುಂಗಾರು ಮಳೆ-2’ಗೆ ಸಾಕ್ಷಿಯಾಗುತ್ತಿದ್ದಾರೆ. ಈ ನಡುವೆ ‘ಗಂಡೆಂದರೆ ಗಂಡು’ ಎನ್ನುತ್ತಿರುವ ಗಣೇಶ್ ಸಂಭಾವನೆ 2.5 ಕೋಟಿ ರು. ಎನ್ನುತ್ತದೆ ಗಾಂಧಿನಗರ. ‘ಜೂಮ್’ ಸಕ್ಸಸ್‌ನ ಅಲೆ ಅವರ ಸಂಭಾವನೆಯನ್ನು ಹೆಚ್ಚಿಸಿದರೂ ಅಚ್ಚರಿ ಇಲ್ಲ!

ವಿಜಯ್ ದುನಿಯಾ
ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡೇ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ನಿಂತವರು ನಟ ವಿಜಯ್. ಮೊದಲ ಚಿತ್ರದಲ್ಲೇ ಕರುನಾಡ ಕರಿಯನಾಗಿ ಹೊಸ ‘ದುನಿಯಾ’ ಕಂಡವರು. ಈಗ ‘ಮಾಸ್ತಿಗುಡಿ’ ಹಾಗೂ ‘ಉಸ್ತಾದ್’ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಈ ನಟನ ಸಂಭಾವನೆ 2 ಕೋಟಿ ರುಪಾಯಿ ಅಂತೆ.

ಶರಣ್ ವಿಕ್ಟರಿ
ಮಾಮೂಲಿ ಹಾಸ್ಯ ನಟನಾಗಿ ಹತ್ತಾರು ಚಿತ್ರಗಳಲ್ಲಿ ನಟಿಸಿರುವ ಶರಣ್ ‘ವಿಕ್ಟರಿ’ ಹಾಗೂ ‘ಅಧ್ಯಕ್ಷ’ ಚಿತ್ರಗಳು ಗೆದ್ದ ಕೂಡಲೇ ಬೇಡಿಕೆಯ ಹೀರೋ ಆದರು! ಈಗ ‘ರ್ಯಾಂಬೋ’ ರಾಜ ‘ನಟರಾಜ ಸರ್ವಿಸ್’ನಲ್ಲಿದ್ದಾರೆ. ಇವರ ಸಂಭಾವನೆ 2 ಕೋಟಿ ರುಪಾಯಿ! ದಿನಕ್ಕೆ ಸಾವಿರ ರುಪಾಯಿಗಳ ಲೆಕ್ಕದಲ್ಲಿ ಕೂಲಿ ಪಡೆಯುತ್ತಿದ್ದ ಕಲಾವಿದನಿಗೆ ಇದು ದೊಡ್ಡ ಸಕ್ಸಸ್ಸೇ.

ಕೃಷ್ಣನ ಹುಂಡಿಗೆಷ್ಟು?
ಅಜೇಯ್ ರಾವ್ ‘ತಾಜ್‌ಮಹಲ್’ ಕಟ್ಟಿಕೊಂಡ ಮೇಲೆ ಸ್ಯಾಂಡಲ್‌ವುಡ್‌ನಲ್ಲಿ ಕೃಷ್ಣನಾಗಿ ಬೇಡಿಕೆ ಹೆಚ್ಚಿಸಿಕೊಂಡರು. ‘ಕೃಷ್ಣನ್ ಲವ್ ಸ್ಟೋರಿ’, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’ ಹಾಗೂ ‘ಕೃಷ್ಣ ಲೀಲಾ’ ಹೀಗೆ ಕೃಷ್ಣನನ್ನು ಬಿಟ್ಟೂ ಬಿಡದಂತೆ ಕಾಡುತ್ತಿರುವ ಅಜಯ್ ರಾವ್, ‘ಜಾನ್ ಜಾನಿ ಜನಾರ್ಧನ್’ನಾಗಿ ಗುರುದೇಶ ಪಾಂಡೆ ಅವರ ಗರಡಿಯಲ್ಲಿದ್ದಾರೆ. ಈಗ ಇವರ ಸಂಭಾವನೆ 1.5 ಕೋಟಿ ರುಪಾಯಿ.

ನೆನಪಿರಲಿ, ಪ್ರೇಮ್ ಸಂಭಾವನೆ
ತಮ್ಮ ಹೆಸರಿಗೆ ಮೊದಲ ಚಿತ್ರದ ಟೈಟಲ್ ಕಾರ್ಡ್ ಅನ್ನೇ ಅಂಟಿಸಿಕೊಂಡು, ಸ್ಟಾರ್ ಆದವರು. ಲವ್ಲಿ ಸ್ಟಾರ್ ಎಂದರೂ ನೆನಪಿರಲಿ ಪ್ರೇಮ್ ಅಂತಲೇ ಕರೆಯಬೇಕು. ‘ಚೌಕ’ ಆಡುತ್ತಿರುವ ಪ್ರೇಮ್ ಸಂಭಾವನೆ 75 ಲಕ್ಷದಿಂದ 1 ಕೋಟಿಯಂತೆ!
– ಆರ್ ಕೇಶವಮೂರ್ತಿ

Comments are closed.