
ಬೆಂಗಳೂರು: ಬೈಕ್‌ಗಳ ಕಳ್ಳತನ ಪ್ರಕರಣ ಸಂಬಂಧ ಜೆ.ಸಿ.ರಸ್ತೆಯ ಮುರಳಿ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಇಬ್ಬರು ಹೆಂಡತಿಯರನ್ನು ಸಾಕಲು 25 ಬೈಕ್‌ಗಳನ್ನು ಕದ್ದಿರುವುದಾಗಿ ಆರೋಪಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.
‘ತಮಿಳುನಾಡು ಮೂಲದ ಮುರಳಿ, ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ಕಾರ್ಖಾನೆಯೊಂದರಲ್ಲಿ ಕೆಲಸಕ್ಕಿದ್ದ ಆತ, ಪಿ.ಜಿ.ಹಳ್ಳಿಯ ಯುವತಿಯನ್ನು ಮದುವೆಯಾಗಿದ್ದ. ಅವರಿಬ್ಬರು ಅದೇ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಬಳಿಕ ಆತ ಕಲಾಸಿಪಾಳ್ಯದ ಯುವತಿಯನ್ನೂ ಮದುವೆಯಾಗಿದ್ದ. ಈ ವಿಷಯ ಮೊದಲ ಪತ್ನಿಗೆ ಗೊತ್ತಿರಲಿಲ್ಲ. ಇಬ್ಬರು ಹೆಂಡಿರನ್ನು ಸಾಕಲಾಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ’.
‘ಮೆಕ್ಯಾನಿಕ್‌್ ಕೆಲಸ ತಿಳಿದಿದ್ದ ಆರೋಪಿ, ಆರಂಭದಲ್ಲಿ ಕಲಾಸಿಪಾಳ್ಯದ ಬಸ್ ನಿಲ್ದಾಣ ಬಳಿ ನಿಲ್ಲಿಸಿದ್ದ ಬೈಕ್ ಎಗರಿಸಿದ್ದ. ಅದನ್ನು ಮಾರಾಟ ಮಾಡಿ ಮೊದಲ ಪತ್ನಿ ಬಯಸಿದ ವಸ್ತುಗಳನ್ನು ತಂದುಕೊಟ್ಟಿದ್ದ. ಕಲಾಸಿಪಾಳ್ಯದ ಮಾರ್ಕೆಟ್ ಬಳಿ ನಿಲ್ಲಿಸಿದ್ದ ಇನ್ನೊಂದು ಬೈಕ್ ಕದ್ದು ಮಾರಿದ್ದ ಆತ, ಅದರ ದುಡ್ಡನ್ನು ಎರಡನೇ ಪತ್ನಿಗೆ ನೀಡಿದ್ದ.
ನಂತರ ಕಾರ್ಖಾನೆ ಕೆಲಸ ಬಿಟ್ಟಿದ್ದ. ಹೆಂಡಿರ ಸಾಕಲು ಬೈಕ್ ಕಳವು ಮಾಡುವುದನ್ನೇ ವೃತ್ತಿಯಾಗಿಸಿಕೊಂಡ’ ಎಂದು ಶೇಷಾದ್ರಿಪುರ ಠಾಣೆ ಪೊಲೀಸರು ತಿಳಿಸಿದರು.
ಬಸ್‌ನಲ್ಲಿ ಹೋಗಿ ಬೈಕ್‌ನಲ್ಲಿ ಬರುತ್ತಿದ್ದ: ‘ಕೆಲಸಕ್ಕೆಂದು ಹೇಳಿ ಬಸ್‌ನಲ್ಲಿ ಹೋಗುತ್ತಿದ್ದ ಆರೋಪಿ ಬೈಕ್‌ನಲ್ಲಿ ವಾಪಸಾಗುತ್ತಿದ್ದ. ಕಾರ್ಖಾನೆ ಕೆಲಸ ಬಿಟ್ಟ ಬಳಿಕವೂ ಆರೋಪಿ ಕೆಲಸಕ್ಕೆ ಹೋಗುತ್ತಿದ್ದೇನೆ ಎಂದೇ ಪತ್ನಿಯರಿಗೆ ಹೇಳುತ್ತಿದ್ದ. ಪ್ರತಿ ಬಾರಿಯೂ ಮನೆಗೆ ಬೈಕ್ ತಂದಾಗ ಗೆಳೆಯನ ಬೈಕ್ ಎಂದು ಹೇಳಿಕೊಳ್ಳುತ್ತಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.
ಆರ್ಥಿಕ ಸಂಕಷ್ಟವೆಂದು ಬೈಕ್ ಮಾರಾಟ: ‘ಇದು ಸ್ನೇಹಿತನ ಬೈಕ್. ಆತ ಆರ್ಥಿಕ ಸಂಕಷ್ಟದಲ್ಲಿದ್ದು ಬೈಕ್ ಮಾರಾಟ ಮಾಡುತ್ತಿರುವುದಾಗಿ ನಂಬಿಸಿ ಆತ ಕದ್ದ ಬೈಕ್‌ಗಳನ್ನು ಮಾರುತ್ತಿದ್ದ. ಕಲಾಸಿಪಾಳ್ಯ ಹಾಗೂ ಜೆ.ಸಿ.ರಸ್ತೆಯಲ್ಲೇ ಹೆಚ್ಚು ಬೈಕ್‌ಗಳನ್ನು ಮಾರಾಟ ಮಾಡಿದ್ದ. ಬೈಕ್‌ಗಳ ದಾಖಲೆ ನೀಡುವಂತೆ ಖರೀದಿದಾರರು ಒತ್ತಾಯಿಸಿದಾಗ ಅವರಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ’ ಎಂದು ತನಿಖಾಧಿಕಾರಿ ತಿಳಿಸಿದರು.
ಕದಿಯುವಾಗ ಸಿಕ್ಕಿಬಿದ್ದ: ‘ಶೇಷಾದ್ರಿಪುರದ ಮಂತ್ರಿ ಮಾಲ್ ಬಳಿಗೆ ಬಿಎಂಟಿಸಿ ಬಸ್‌ನಲ್ಲಿ ಬಂದಿದ್ದ ಆರೋಪಿಯು ಸ್ಕೂಟಿ ಕದಿಯುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ. ಆತನ ಚಲನವಲನದಿಂದ ಸಂಶಯಗೊಂಡು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಮಲ್ಲೇಶ್ವರ, ಶೇಷಾದ್ರಿಪುರ, ವೈಯಾಲಿಕಾವಲ್, ಹೈಗ್ರೌಂಡ್ಸ್, ವಿಲ್ಸನ್‌ಗಾರ್ಡನ್, ಕಲಾಸಿಪಾಳ್ಯ, ಜೆ.ಪಿ. ನಗರ ಮತ್ತು ಕಾಟನ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ಕದ್ದಿರುವ 25 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಅವುಗಳ ಮೌಲ್ಯ ₹ 15 ಲಕ್ಷ’ ಎಂದು ತಿಳಿಸಿದರು.
Comments are closed.