
ಬೆಂಗಳೂರು: ರಾಜಭವನದಿಂದ ಕನ್ನಡ ಶಾಲೆಯನ್ನು ತೆರವುಗೊಳಿಸಿರುವ ಕ್ರಮ ವಿರೋಧಿಸಿ ಕನ್ನಡ ಒಕ್ಕೂಟದ ವತಿಯಿಂದ ಇಂದು ರಾಜಭವನದ ಎದುರು ಪ್ರತಿಭಟನೆ ನಡೆಸಿದ ಕನ್ನಡ ಚಳವಳಿ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಕೆ.ಆರ್.ಕುಮಾರ್, ಶಿವರಾಮೇಗೌಡ, ಪ್ರವೀಣ್ಶೆಟ್ಟಿ, ಮಂಜುನಾಥ್ದೇವ್ ಮುಂತಾದವರನ್ನು ಪೊಲೀಸರು ಬಂಧಿಸಿದರು.
ಸುಮಾರು 40 ವರ್ಷಗಳಿಂದ ರಾಜಭವನದಲ್ಲಿ ನಡೆಯುತ್ತಿದ್ದ ಕನ್ನಡ ಶಾಲೆಯನ್ನು ಏಕಾಏಕಿ ಹೊರಗೆ ಹಾಕಿರುವುದು ಸಮಗ್ರ ಕನ್ನಡಿಗರಿಗೆ ಮಾಡಿರುವ ಅವಮಾನ. ಕನ್ನಡ ಶಾಲೆಯನ್ನು ರಾಜಭವನದಲ್ಲಿ ಮತ್ತೆ ತೆರೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಇವರನ್ನು ಪೊಲೀಸರು ವಶಕ್ಕೆ ಪಡೆದರು.
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ರಾಜಭವನದೊಳಗಿರುವ ಕನ್ನಡ ಶಾಲೆಗೂ, ರಾಜಭವನಕ್ಕೂ ಯಾವುದೇ ಸಂಬಂಧವಿಲ್ಲ. ರಾಜಭವನವನ್ನು ಗುಜರಾತೀಕರಣ ಮಾಡುವ ಹುನ್ನಾರ ನಡೆಯುತ್ತಿದೆ. ಕನ್ನಡ ಶಾಲೆಯನ್ನು ಮತ್ತೆ ಇಲ್ಲಿ ಪ್ರಾರಂಭ ಮಾಡದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು. ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ರಾಜಭವನದ ಕಾರ್ಯಗಳಿಗೆ ಕನ್ನಡ ಶಾಲೆ ಎಂದೂ ಅಡ್ಡಿಯಾಗಿಲ್ಲ. ರಾಜಭವನಕ್ಕೂ ಶಾಲೆಗೂ ಮಧ್ಯೆ ಗೋಡೆ ಇದೆ. ರಾಜಭವನ ಸೇರಿದಂತೆ ಸುತ್ತಮುತ್ತ ಇರುವ ಬಡ ಮಕ್ಕಳು ಕಲಿಯುವ ಕನ್ನಡ ಶಾಲೆ ಇದಾಗಿದ್ದು, ಇದನ್ನು ತೆರವುಗೊಳಿಸಿದರೆ ಈ ಮಕ್ಕಳಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದರು.
ಈ ಹಿಂದೆ ರಾಜ್ಯಪಾಲರಾಗಿದ್ದ ರಮಾಬಾಯಿಯವರು ಈ ಶಾಲೆಗೆ ಭೇಟಿ ನೀಡಿ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಆದರೆ, ಪ್ರಸ್ತುತ ರಾಜ್ಯಪಾಲರಾದ ವಜುಬಾಯಿ ವಾಲಾ ಅವರನ್ನು ಶಾಲೆಯನ್ನು ಹೊರಗೆ ಹಾಕುವ ಮೂಲಕ ನಾಡಿಗೆ ಅನ್ಯಾಯ ಮಾಡಿದ್ದಾರೆ ಎಂದು ತಿಳಿಸಿದರು. ಕನ್ನಡ ಸೇನೆ ಕೆ.ಆರ್.ಕುಮಾರ್ ಮಾತನಾಡಿ, ಸರ್ಕಾರ ಇದನ್ನು ತೀವ್ರವಾಗಿ ಪರಿಗಣಿಸಬೇಕು. ಕನ್ನಡಪರ ಹೋರಾಟಗಾರರು, ಸಾಹಿತಿಗಳು, ಕನ್ನಡ ಅಭಿಮಾನಿಗಳು ರಾಜ್ಯಪಾಲರ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಬೇಕು ಎಂದು ಹೇಳಿದರು.
Comments are closed.