ಬೆಂಗಳೂರು, ಜು.೨: ಅಕ್ರಮ ಸರ್ಕಾರಿ ಭೂಮಿ ಒತ್ತುವರಿದಾರರ ವಿರುದ್ಧ ಜಿಲ್ಲಾಡಳಿತ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದು, ಇಂದು 1200 ಕೋಟಿ ರೂ.ಗೂ ಅಧಿಕ ಮೌಲ್ಯದ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿದೆ.
ಬೆಂಗಳೂರು ಜಿಲ್ಲಾಧಿಕಾರಿ ವಿ.ಶಂಕರ್ ನಿರ್ದೇಶನದಂತೆ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ನೇತೃತ್ವದಲ್ಲಿ ಬೆಂಗಳೂರಿನ ಕೆಂಗೇರಿ ಬಳಿಯ ಪಂತರಪಾಳ್ಯ ಸರ್ವೆ ನಂ.೪೭ರ ೧೨೦೦ ಕೋಟಿ ರೂ.ಗೂ ಅಧಿಕ ಮೌಲ್ಯದ ೨೪ ಎಕರೆ ೩೭ ಗುಂಟೆ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ.
ಈ ಜಾಗಕ್ಕೆ ಸಂಬಂಧಿಸಿ ಕಳೆದ ೬೫ ವರ್ಷಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದ್ದು, ಅಂತಿಮವಾಗಿ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರದ ಪರವಾಗಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಹಲವು ವರ್ಷಗಳ ಹಿಂದೆ ಅನಂತಸ್ವಾಮಿ ಅವರಿಗೆ ಅಂದಿನ ಜಿಲ್ಲಾಧಿಕಾರಿ ಕಾನೂನುಬಾಹಿರವಾಗಿ ಈ ಜಮೀನನ್ನು ಮಂಜೂರು ಮಾಡಿದ್ದರು. ಇದರ ವಿರುದ್ಧ ಸರ್ಕಾರ ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಜಮೀನನ್ನು ವಶಕ್ಕೆ ಪಡೆದಿದೆ ಎಂದು ಜಿಲ್ಲಾಧಿಕಾರಿ ಶಂಕರ್ ಮಾಹಿತಿ ನೀಡಿದ್ದಾರೆ.
Comments are closed.