ಕರ್ನಾಟಕ

ಅಶಿಸ್ತಿಗೆ ಶಾಸ್ತಿ : ಬಿಜೆಪಿ ಸಭೆಯಲ್ಲಿ ತಪ್ಪು ಒಪ್ಪುಗಳಿಗೆ ಸಾಣೆ

Pinterest LinkedIn Tumblr

eshwarappa

ಬೆಂಗಳೂರು, ಜು. ೨- ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತ ಶಮನಗೊಳಿಸಲು ಪಕ್ಷದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಕರೆದಿದ್ದ ಸಭೆಯಿಂದ ಭಿನ್ನಮತೀಯರ ನಾಯಕ ಕೆ.ಎಸ್. ಈಶ್ವರಪ್ಪ ಹೊರಗೆ ಉಳಿದಿದ್ದರೆ, ಅವರ ಸಂಗಡಿಗರು ಸಭೆಯಲ್ಲಿ ಭಾಗವಹಿಸುವ ಮೂಲಕ ಈಶ್ವರಪ್ಪ ಅವರಿಗೆ ಕೈ ಕೊಟ್ಟಿದ್ದಾರೆ. ಆದರೆ ಇದ್ಯಾವುದನ್ನು ಲೆಕ್ಕಿಸದೆ ಯಡಿಯೂರಪ್ಪ ಅಶಿಸ್ತಿಗೆ ತಕ್ಕ ಶಾಸ್ತಿ ಮಾಡುವ ಎಚ್ಚರಿಕೆ ನೀಡಿದರು.

ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಭಿನ್ನಮತೀಯರ ಅಶಿಸ್ತಿನ ವರ್ತನೆ ಬಗ್ಗೆ ಯಡಿಯೂರಪ್ಪ ಗುಡುಗಿದರು. ಆದರೆ ಇದ್ಯಾವುದಕ್ಕೂ `ಕ್ಯಾರೆ’ ಎನ್ನದೆ ಈಶ್ವರಪ್ಪ ಸಭೆಯಿಂದ ಹೊರಗುಳಿದು ದೆಹಲಿ ನಾಯಕರ ಭೇಟಿಗೆ ಸಿದ್ಧತೆ ನಡೆಸಿದ್ದಾರೆ.
ರಾಜ್ಯ ಬಿಜೆಪಿ ನೂತನ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿ ಅತೃಪ್ತಿ, ಅಸಮಾಧಾನ ಹೊರ ಹಾಕಿ ಬಹಿರಂಗವಾಗಿಯೇ ಈಶ್ವರಪ್ಪನವರ ನೇತೃತ್ವದಲ್ಲಿಯೇ ಕೆಲ ಮುಖಂಡರು ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿ, ಪದಾಧಿಕಾರಿಗಳ ಪಟ್ಟಿಯನ್ನು ಬದಲಾಯಿಸಲು ಪಟ್ಟು ಹಿ‌ಡಿ‌ದು ದೆಹಲಿ ನಾಯಕರನ್ನು ಭೇಟಿ ಮಾಡಿ ದೂರು ಕೊಡಲು ನಿರ್ಧರಿಸಿದ್ದರು. ಅಷ್ಟೆ ಅಲ್ಲದೆ, ಇಂದಿನ ಸಭೆಯಿಂದ ದೂರ ಉಳಿಯಲು ಯೋಜಿಸಿದ್ದರು. ಆದರೂ ಪಟ್ಟು ಬಿಡದ ಈಶ್ವರಪ್ಪನವರು ದೆಹಲಿಗೆ ತೆರಳಿ ವರಿಷ್ಠರಿಗೆ ದೂರು ನೀಡಲು ತೀರ್ಮಾನಿಸಿದ್ದಾರೆ.
ಭಿನ್ನಮತ ಶಮನಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದು ಕರೆದಿರುವ ಪದಾಧಿಕಾರಿಗಳ ಸಭೆಗೆ ಈಶ್ವರಪ್ಪ ಹಾಜರಾಗದೆ ದೂರ ಉಳಿದಿದ್ದಾರೆ. ಅವರ ಜತೆ ಗುರುತಿಸಿಕೊಂಡಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್, ಮುಖಂಡರಾದ ನಿರ್ಮಲಾಕುಮಾರ್ ಸುರಾನ, ಸೋಮಣ್ಣ ಬೇವಿನಮರದ ಸೇರಿದಂತೆ ಹಲವು ನಾಯಕರು ಇಂದಿನ ಸಭೆಯಲ್ಲಿ ಹಾಜರಾಗುವ ಮೂಲಕ ಪಾಳೆಯ ಬದಲಾಯಿಸಿರುವ ಸಂದೇಶ ರವಾನಿಸಿದ್ದಾರೆ. ಈ ಎಲ್ಲಾ ನಾಯಕರು ಇಂದಿನ ಸಭೆಯಲ್ಲಿ ಗೈರು ಹಾಜರಾಗಲು ನಿನ್ನೆ ಸಂಜೆ ಈಶ್ವರಪ್ಪನವರ ನಿವಾಸದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದರು. ಆದರೆ, ಏಕಾಏಕಿ ಯೂಟರ್ನ್ ತೆಗೆದುಕೊಂಡಿರುವ ಕೆಲ ಮುಖಂಡರು ಇಂದಿನ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಈಶ್ವರಪ್ಪನವರಿಗೆ ಕೈ ಕೊಟ್ಟಿರುವುದು ಸ್ಪಷ್ಟ.
ಭಿನ್ನಮತೀಯ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಮುಖಂಡರ ಕೋಪ ಶಮನಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮದೇ ಆದ ಶೈಲಿಯನ್ನು ಅಳವಡಿಸಿಕೊಂಡು ಮುಖಂಡರನ್ನು ಇಂದಿನ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಈಶ್ವರಪ್ಪನವರಿಗೆ ತಿರುಗೇಟು ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜಕೀಯ ಚದುರಂಗದಾಟದಲ್ಲಿ ಈಶ್ವರಪ್ಪನವರು ಸೈನಿಕರಿಲ್ಲದ ದಂಡ ನಾಯಕರಂತೆ ಬಿಂಬಿತರಾಗಿದ್ದಾರೆ.
ಸಮರ್ಥನೆ
ಇಂದಿನ ಸಭೆ ಅತ್ಯಂತ ಮಹತ್ವದ್ದಾಗಿದೆ‌. ಸಭೆಯಲ್ಲಿ ತಮ್ಮ ಅಸಮಾಧಾನ, ಅತೃಪ್ತಿಗಳನ್ನು ಸಭೆಯಲ್ಲಿ ಹೇಳಲು ಪಾಲ್ಗೊಂಡಿದ್ದೇವೆ ಹೊರತು ಎಲ್ಲವೂ ಸರಿಹೋಗಿದೆ ಎಂದು ಭಾವಿಸಬೇಕಿಲ್ಲ. ಈಗಲೂ ತಮಗೆ ನೂತನ ಪದಾಧಿಕಾರಿಗಳ ನೇಮಕದಲ್ಲಿ ಅಸಮಾಧಾನವಿದೆ ಎಂದು ಭಿನ್ನಮತೀಯ ಗುಂಪಿನ ಪ್ರಮುಖ ಮುಖಂಡರೊಬ್ಬರು ಹೇಳಿದರು.
ಈ ಸಭೆಯಲ್ಲಿ ಪಾಲ್ಗೊಳ್ಳದಿದ್ದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಕಾರಣಕ್ಕೆ ಸಭೆಯಲ್ಲಿ ಪಾಲ್ಗೊಂಡಿದ್ದೇವೆ. ಆಗಿರುವ ಅನ್ಯಾಯವನ್ನು ವರಿಷ್ಠರ ಗಮನಕ್ಕೆ ತರುತ್ತೇವೆ ಎಂದರು.
ಈಶ್ವರಪ್ಪ ದೆಹಲಿಗೆ
ಬಿಜೆಪಿಯ ಭಿನ್ನಮತೀಯ ಗುಂಪಿನ ನಾಯಕರಾಗಿರುವ ಕೆ.ಎಸ್. ಈಶ್ವರಪ್ಪ ಇಂದು ಸಂಜೆ ದೆಹಲಿಗೆ ತೆರಳುವ ಸಾಧ್ಯತೆಯಿದ್ದು, ನಾಳೆ ಪಕ್ಷದ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾರವರನ್ನು ಭೇಟಿ ಮಾಡಿ ಪದಾಧಿಕಾರಿಗಳ ನೇಮಕದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
ಇಂದು ದೆಹಲಿಗೆ ತೆರಳುತ್ತಿರುವ ಈಶ್ವರಪ್ಪ ಜತೆ ಭಿನ್ನಮತೀಯ ಗುಂಪಿನ ಇತರ ನಾಯಕರು ಹೋಗುತ್ತಾರೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಯಾರು ಬರಲಿ ಬರದಿರಲಿ ಈಶ್ವರಪ್ಪನವರಂತು ದೆಹಲಿಗೆ ಹೋಗುವುದು ನಿಶ್ಚಿತ ಎಂದು ಅವರ ಆಪ್ತ ವಲಯಗಳು ಹೇಳಿವೆ.

Comments are closed.