ಕರ್ನಾಟಕ

ಅರಮನೆಯಲ್ಲಿ ಯದುವೀರ ವಿವಾಹ ಮಹೋತ್ಸವದ ಅರಿಶಿನ ಶಾಸ್ತ್ರ :ನಾಳೆ ಮುಹೂರ್ತ

Pinterest LinkedIn Tumblr

aramane

ಮೈಸೂರು: ಅರಮನೆಯಲ್ಲಿ ನಡೆಯುತ್ತಿರುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ವಿವಾಹ ಮಹೋತ್ಸವದ 3ನೆ ದಿನವಾದ ಇಂದು ಕನ್ನಡಿ ತೊಟ್ಟಿಯಲ್ಲಿ ಹಲವು ಪೂಜಾ ವಿಧಿವಿಧಾನಗಳು ನೆರವೇರಿದವು. ಬೆಳಗಿನಿಂದಲೇ ಮಧುಮಗ ವಿವಿಧ ಪೂಜಾ ಕೈಂಕರ್ಯಗಳಲ್ಲಿ ತೊಡಗಿಕೊಂಡು ದಿನದ ಆರಂಭದಲ್ಲಿ ಗಣಪತಿ ಪೂಜೆ, ಸಮವರ್ತನಾ ಹೋಮ, ಮಧುಮಗನ ಶಾಸ್ತ್ರ, ಶಕುನ ಶಾಸ್ತ್ರ ನೆರವೇರಿಸಲಾಯಿತು. ನಂತರ ರಾಜಮಾತೆ ಪ್ರಮೋದಾ ದೇವಿಯವರಿಗೆ ಪಾದಪೂಜೆ ನೆರವೇರಿಸಿದರು.

ಇಂದು ಸಂಜೆ ನಡೆಯಲಿರುವ ಮಧುಮಗನ ಕಾಶೀಯಾತ್ರೆಗೆ ವಧುವಿನ ಮನೆಯವರು ಅಳಿಯನಿಗಾಗಿ ತಂದಿದ್ದ ಕೋಟು, ಪಾದರಕ್ಷೆ, ಊರುಗೋಲು, ಟೋಪಿಯನ್ನು ಕಾಣಿಕೆಯನ್ನು ನೀಡುವ ಮೂಲಕ ಸಾಂಕೇತಿಕವಾಗಿ ಕಾಶೀಯಾತ್ರೆ ಕಳುಹಿಸುವ ಶಾಸ್ತ್ರ ನೆರವೇರಿಸುವರು. ಕಾಶೀಯಾತ್ರೆ ಮುಗಿಸಿ ಬರುವ ಅಳಿಯನಿಗೆ ಹುಡುಗಿ ಮನೆಯವರು ಛತ್ರಿ ಹಿಡಿದು ಮೆರವಣಿಗೆ ಮಾಡುವ ಮೂಲಕ ಸಂಪ್ರದಾಯ ಪೂರೈಸುವರು.

ಕಳೆದ ಎರಡು ದಿನಗಳಿಂದ ವಿವಾಹ ಮಹೋತ್ಸವಕ್ಕೆ ತಳಿರು ತೋರಣಗಳಿಂದ ಸಿಂಗರಿಸಿಕೊಂಡಿರುವ ಅರಮನೆಯ ಒಳಗೂ ವಿವಾಹ ಕಾರ್ಯಕ್ರಮಗಳು ಒಂದಾದ ಒಂದು ನೆರವೇರುತ್ತಾ ಸಂಭ್ರಮದ ನೆಲೆಯಾಗಿತ್ತು. 24ರಿಂದ ಆರಂಭವಾಗಿರುವ ವಿವಾಹದ ವಿಧಿವಿಧಾನಗಳು ಆರು ದಿನಗಳ ಕಾಲ ನಡೆಯಲಿದ್ದು, ಇಡೀ ಅರಮನೆಯೇ ಕಳೆಕಟ್ಟಿದೆ. ನಾಲ್ಕನೆ ದಿನವಾದ ನಾಳೆ ಸೋಮವಾರ ಬೆಳಗಿನ ಜಾವದಿಂದಲೇ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬೆಳಗ್ಗೆ 9.05ರಿಂದ 9.35 ರೊಳಗೆ ಸಾವಿತ್ರಿಯ ಲಗ್ನದಲ್ಲಿ ಅರಮನೆಯ ಕಲ್ಯಾಣ ಮಂಟಪದಲ್ಲಿ ಮಾಂಗಲ್ಯಧಾರಣೆ ನೆರವೇರ ಲಿದೆ. ನಂತರ ಉಯ್ಯಾಲೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Comments are closed.