ಕಲಬುರಗಿ, ಜೂ. 26: ಕಳೆದ ಮೂರು ವರ್ಷದಲ್ಲಿ ಜನರು ನಿರೀಕ್ಷಿಸಿದಂತ ಸರ್ಕಾರ ರಾಜ್ಯದಲ್ಲಿ ಇಲ್ಲದಂತಾಗಿದೆ. ಸಿದ್ದರಾಮಯ್ಯನವರ ಸರ್ಕಾರ ಅಸ್ಥಿರ ಸರ್ಕಾರವಾಗಿದೆ ಎಂದು ಕೇಂದ್ರ ಕಾನೂನು ಸಚಿವರಾದ ಡಿ. ವಿ. ಸದಾನಂದಗೌಡ ಅವರು ಇಂದಿಲ್ಲಿ ಟೀಕಿಸಿದರು.
ಭಾರತೀಯ ಜನತಾ ಪಕ್ಷದಿಂದ ನಗರದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯನವರು ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿ 10 ಬಾರಿ ರಾಜ್ಯದ ಬಜೆಟ್ ಮಂಡಿಸಿದವರಾಗಿದ್ದರು. ಉತ್ತಮ ಆಡಳಿತ ನೀಡಬಹುದು ಎಂಬ ಸಹಜವಾದ ಹೆದರಿಕೆ ನಮ್ಮಲ್ಲಿ ಇತ್ತು. ಆದರೆ ಮಂತ್ರಿಮಂಡಲ ಪುನರ್ ರಚನೆಯಾದ ನಂತರ ಅವರೊಬ್ಬ ಅಸಮರ್ಥ ಮುಖ್ಯಮಂತ್ರಿಗಳು ಎಂಬುದು ಜನರಿಗೆ ತಿಳಿಯಿತು. ಇದರಿಂದಾಗಿ ನಮ್ಮ ಮುಂದಿನ ದಾರಿ ಸುಗಮವಾಗಿದೆ ಎಂದರು.
ಮುಖ್ಯಮಂತ್ರಿಗಳು ಮುಂದಿನ ಚುನಾವಣೆಯಲ್ಲಿ ತಮ್ಮ ಕುರ್ಚಿಯನ್ನು ಬಿಡದೆ ಎತ್ತಿಕೊಂಡು ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು. ಜನ ಖ್ಯಾಕರಿಸಿ ಉಗಿಯುತ್ತಿದ್ದಾರೆ ಎಂದು ಖಾರವಾಗಿ ನುಡಿಯುತ್ತಾ ಮುಖ್ಯಮಂತ್ರಿ ಕರ್ನಾಟಕ ನಿರ್ನಾಮ ಮಾಡುತ್ತಾರೆ ಎಂದರು.
ಭಾರತೀಯ ಜನತಾ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನೂರರಷ್ಟು ಸರಿಯಿಲ್ಲಿ ಎಂದು ಹೇಳಲು ಸಾಧ್ಯವಿಲ್ಲ. ಪಕ್ಷದಲ್ಲಿ ಆಂತರಿಕವಾಗಿ ಯಾವುದೆ ತೊಡಕುಗಳು ಅಥವಾ ಬಿರುಕು ಇಲ್ಲ. ಇತ್ತೀಚಿಗೆ ನಗರಕ್ಕೆ ಆಗಮಿಸಿದ ಈಶ್ವರಪ್ಪನವರು ಪಕ್ಷದ ಜಿಲ್ಲಾ ಪದಾಧಿಕಾರಿಗಳ ನೇಮಕ ಮಾಡುರಿವುದು ಕೆಲವು ನಾಯಕರಿಗೆ ಅಸಮಧಾನ ಇದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ನಮ್ಮ ಪಕ್ಷದ ನಾಯಕರ ವಿರುದ್ಧ ದೊಡ್ಡರೀತಿಯ ಆರೋಪಗಳಿಲ್ಲ, ಭಾರತೀಯ ಜನತಾ ಪಕ್ಷದಲ್ಲಿರುವ ನಾಯಕರುಗಳು ತಮ್ಮ ಕೆಲಸದ ಕುರಿತು ಸದಾ ಸಿಂಹಾವಲೋಕನ ಮಾಡಿಕೊಳ್ಳುತ್ತಾರೆ ಎಂದ ಅವರು ಮುಂದಿನ ಬಾರಿ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರ ನಡೆಸಲಿದೆ ಎಂದು ವಿಶ್ವಾಸವ್ಯಕ್ತ ಪಡಿಸಿದರು.
ಕ್ರೈಂ ಸಿಟೀ ಯಾಗುತ್ತಿದೆ ಬೆಂಗಳೂರು:
ಬೆಂಗಳೂರು ನಗರದಲ್ಲಿ ದಿನನಿತ್ಯ ಒಂದಲ್ಲಾ ಒಂದು ಅಪರಾಧ ಚಟುವಟಿಕೆ ನಡೆಯುತ್ತಿದೆ. ಕೊಲೆ ದರೋಡೆ, ಅತ್ಯಾಚಾರ ಪ್ರಕರಣಗಳು ನಡೆದರೂ ರಾಜ್ಯ ಸರ್ಕಾರ ಗಂಭೀರವಾಗಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವದು ರಾಜ್ಯ ಸರ್ಕಾರದ ಹೊಣೆಯಾಗಿದೆ. ನಾನೂ ಕೇವಲ ಕಾನೂನು ಸಚಿವನಾಗಿದ್ದು. ರಾಜ್ಯದಲ್ಲಿನ ವಿದ್ಯಮಾನಗಳ ಮೇಲೆ ನಿಗಾ ಮಾತ್ರ ಇಡಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಗ್ರಾಮಾಂತರ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ನಗರಾಧ್ಯಕ್ಷ ಶಾಸಕ ಬಿ.ಜಿ. ಪಾಟೀಲ, ಶಾಸಕ ಅಮರನಾಥ ಪಾಟೀಲ, ಮಾಜಿ ಸಚಿವ ರೇವೂನಾಯಕ ಬೆಳಮಗಿ, ಮಾಜಿ ಶಾಸಕರಾದ ಶಶೀಲ ನಮೋಶಿ, ಸುನೀಲ ವಲ್ಯಾಪುರೆ, ಬಾಬುರಾವ ಚವ್ಹಾಣ, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.