ಯಲಹಂಕ, ಜೂ. ೨೬-ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಮುಂದೆ ಇಟ್ಟುಕೊಂಡು ಅಧಿಕಾರಕ್ಕೆ ಬರುವ ಅನಿವಾರ್ಯತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದು ಇಲ್ಲಿ ತಿಳಿಸಿದ್ದಾರೆ.
ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ 224 ಕ್ಷೇತ್ರಗಳಲ್ಲಿ ಸಮಾವೇಶ ಮಾಡಲು ಯೋಜನೆ ಹಮ್ಮಿಕೊಳ್ಳಲಾಗಿದ್ದು, ನಾಡಪ್ರಭು ಕೆಂಪೇಗೌಡರ ನಾಡಾದ ಯಲಹಂಕದಿಂದ ಪ್ರಾರಂಭಿಸಿದ್ದೇವೆ.
ಕಾಂಗ್ರೆಸ್ ಸರ್ಕಾರದಿಂದ ಜನತೆ ಬೇಸತ್ತಿದ್ದಾರೆ. ಅಧಿಕಾರಿಗಳಿಗೆ ಕಿರುಕುಳ, ವರ್ಗಾವಣೆ ದಂಧೆ, ಪಕ್ಷದ ಆಂತರಿಕ ಕಿತ್ತಾಟವೇ ಸಿದ್ದರಾಮಯ್ಯರವರ ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದರು.
ನಮ್ಮ ಸರ್ಕಾರದ ಅಧಿಕಾರಾವಧಿಯಲ್ಲಿ ಮಾಡಿದ ಜನಸ್ನೇಹಿ ಯೋಜನೆಗಳನ್ನು ಕರ್ನಾಟಕ ರಾಜ್ಯದ ಜನತೆ ಮರೆತಿಲ್ಲ. ರೈತನಿಗೆ ಬಡ್ಡಿ ರಹಿತ ಸಾಲ, ಸಾಲಮನ್ನಾ ಯೋಜನೆ, 25 ಲಕ್ಷ ರೈತರ ಪಂಪ್ ಸೆಟ್‌ಗೆ ವಿದ್ಯುತ್, 3 ಲಕ್ಷ ಕುಟುಂಬಗಳಿಗೆ ಯಶಸ್ವಿನಿ ಯೋಜನೆ ಸೇರಿದಂತೆ, ಅನೇಕ ಜನಪರ ಕಾರ್ಯಗಳನ್ನು ತಮ್ಮ ಸರ್ಕಾರ ಮಾಡಿದೆ. ಕಾಂಗ್ರೆಸ್ ತುಘಲಕ್ ದರ್ಬಾರ್‌ನಿಂದ ಜನ ಬೇಸತ್ತಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ, ಯಲಹಂಕ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಯಡಿಯೂರಪ್ಪನವರ ಕೊಡುಗೆ ಅಪಾರವಾದುದು. ಅಲ್ಲಾಳಸಂದ್ರ ಮೇಲುಸೇತುವೆ ಕಾಮಗಾರಿಗೆ 43 ಕೋಟಿ ರೂ., ಯಲಹಂಕ ಕೆರೆ ಅಭಿವೃದ್ಧಿಗಾಗಿ 300 ಕೋಟಿ ರೂ. ಮಿನಿ ವಿಧಾನಸೌಧಕ್ಕೆ 12 ಕೋಟಿ ರೂ. ಅನುದಾನ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾದುದು ಎಂದ ಅವರು, ಮುಂದಿನ ಒಂದು ವರ್ಷ 11 ತಿಂಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
Comments are closed.