ಬೆಂಗಳೂರು, ಜೂ. ೨೬- ಬೋಗಸ್ ಪಡಿತರ ಚೀಟಿಗಳಿಗೆ ಕಡಿವಾಣ ಹಾಕುವುದರ ಜತೆಗೆ ಎಲ್ಲ ಅರ್ಹ ಕುಟುಂಬಗಳಿಗೆ ಪಡಿತರ ಚೀಟಿಗಳನ್ನು ವಿತರಿಸಲು ಆದ್ಯತೆ ನೀಡುವುದಾಗಿ ಆಹಾರ ಮತ್ತು ನಾಗರಿಕರ ಪೂರೈಕೆ ಸಚಿವ ಯು.ಟಿ. ಖಾದರ್ ಅವರು ಇಂದಿಲ್ಲಿ ತಿಳಿಸಿದರು.
ನೂತನ ಖಾತೆಯನ್ನು ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲನೆ ಮಾಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಡಿತರ ಚೀಟಿ ವಿತರಣೆಗೆ ಇರುವ ನಿಯಮಗಳನ್ನು ಸರಳೀಕರಣಗೊಳಿಸಿ ಎಲ್ಲ ಅರ್ಹ ಕುಟುಂಬಗಳಿಗೆ ಪಡಿತರ ಚೀಟಿಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಬಿಪಿಎಲ್ ಅಥವಾ ಎಪಿಎಲ್ ಯಾವುದೇ ಕಾರ್ಡ್ ಪಡೆಯಲು ಅರ್ಹತೆ ಹೊಂದಿರುವ ಕುಟುಂಬಗಳನ್ನು ಗುರುತಿಸಿ ಪಡಿತರ ಚೀಟಿ ನೀಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಬಿಪಿಎಲ್ ಪಡಿತರ ಚೀಟಿ ಪಡೆಯುವುದರಿಂದ ವಂಚಿತರಾದ ಕುಟುಂಬಗಳನ್ನು ಗುರುತಿಸಿ ಕಾರ್ಡ್ ನೀಡಲಾಗುವುದು ಎಂದರು.
ಬೋಗಸ್ ಕಾರ್ಡ್‌ಗಳಿಗೆ ಕಡಿವಾಣ ಹಾಕುವುದು ಒಂದೆಡೆಯಾದರೆ ಎಲ್ಲ ಕುಟುಂಬಗಳಿಗೂ ಕಾರ್ಡ್ ನೀಡುವುದಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಪ್ರತಿಯೊಂದು ಕುಟುಂಬದ ಬಳಿಯೂ ಪಡಿತರ ಚೀಟಿ ಇರುವುದು ಅಗತ್ಯ ಎಂದ ಅವರು, ಹಿಂದಿನ ಆಹಾರ ಸಚಿವರಾಗಿದ್ದ ದಿನೇಶ್‌ಗುಂಡೂರಾವ್ ಅವರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅವುಗಳನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರ ಪಡೆದು ಇಲಾಖೆಗೆ ಮತ್ತಷ್ಟು ಕಾಯಕಲ್ಪ ನೀಡುವ ಪ್ರಯತ್ನ ಮಾಡಲಾಗುವುದು ಎಂದರು.
ಆಹಾರ ಇಲಾಖೆ ಜನರಿಗೆ ಸಂಬಂಧಿಸಿದ ಇಲಾಖೆಯಾಗಿದ್ದು, ದಿನ 24 ಗಂಟೆಯೂ ಕೆಲಸ ಮಾಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಅಧಿಕಾರಿಗಳನ್ನು ಸಜ್ಜುಗೊಳಿಸಲು ಇಂದಿನ ಸಭೆ ಕರೆಯಲಾಗಿದೆ. ಅಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಯತ್ನಿಸಲಾಗುವುದು. ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಸಮಗ್ರವಾಗಿ ಚರ್ಚಿಸಿ ಉತ್ತಮ ರೀತಿಯಲ್ಲಿ ಕೆಲಸ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳನ್ನು ಅಣಿಗೊಳಿಸಲಾಗುವುದು ಎಂದರು.
ಇಂದಿನ ಸಭೆಯಲ್ಲಿ ಇಲಾಖೆ ಕಾರ್ಯದರ್ಶಿ ಹರ್ಷಗುಪ್ತ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.
Comments are closed.