ಕರ್ನಾಟಕ

ಹಾಡುಹಗಲೇ ನಡು ರಸ್ತೆಯಲ್ಲಿ ಯುವಕನಿಗೆ ಅಮಾನುಷವಾಗಿ ಥಳಿಸಿದ ಪುಂಡರು

Pinterest LinkedIn Tumblr

ac62d722de7295824aeb01cd46280bcd_XL

ಬೆಂಗಳೂರು: ಹಾಸನ ಬಸ್ ನಿಲ್ದಾಣದಲ್ಲಿ ಹುಡುಗಿಯೊಬ್ಬಳ ವಿಷಯಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನಿಗೆ ಹಾಡುಹಗಲೇ ನಡುರಸ್ತೆಯಲ್ಲಿ ಯುವಕರು ಅಮಾನುಷವಾಗಿ ಥಳಿಸಿದ ಘಟನೆ ಮಾಸುವ ಮುನ್ನವೇ ರಾಜಧಾನಿ ಬೆಂಗಳೂರಿನಲ್ಲೂ ಇಂಥದ್ದೇ ಘಟನೆ ನಿನ್ನೆ ನಡೆದಿದೆ.

ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲಗ್ಗೆರೆ ಬ್ರಿಡ್ಜ್ ಬಳಿ ಕೆಂಪೇಗೌಡ ಆರ್ಚ್ ಸಮೀಪ ಸರ್ವೀಸ್ ರಸ್ತೆ ಬಳಿ ನಿನ್ನೆ ಮಧ್ಯಾಹ್ನ 2.30ರಲ್ಲಿ ಹುಡುಗಿಯೊಬ್ಬಳ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರು ಅಗರಬತ್ತಿ ಫ್ಯಾಕ್ಟ್ರರಿಯ ಸೆಕ್ಯುರಿಟಿಗಾರ್ಡ್‌ರೊಬ್ಬರನ್ನು ನಡುರಸ್ತೆಯಲ್ಲೇ ಮನಬಂದಂತೆ ಥಳಿಸಿದ್ದಾರೆ.

ಇಲ್ಲಿನ ಸರ್ವೀಸ್ ರಸ್ತೆಯಲ್ಲಿರುವ ಅಗರಬತ್ತಿ ಫ್ಯಾಕ್ಟ್ರರಿ ಕೆಲಸ ಮಾಡುತ್ತಿದ್ದ ಹುಡುಗಿಯನ್ನು ಮಾತನಾಡಿಸಲೆಂದು ನರೇಂದ್ರ ಮತ್ತು ಉದಯ ಎಂಬುವರು ಅಲ್ಲಿಗೆ ಬಂದಿದ್ದಾರೆ. ಆ ಹುಡುಗಿಯನ್ನು ಕರೆಯಲೆಂದು ಸೆಕ್ಯುರಿಟಿಗಾರ್ಡ್‌ಗೆ ತಿಳಿಸಿದ್ದಾರೆ. ಸೆಕ್ಯುರಿಟಿಗಾರ್ಡ್ ದರ್ಶನ್(19) ಆ ಹುಡುಗಿಯನ್ನು ಕರೆದಿದ್ದು, ಫ್ಯಾಕ್ಟ್ರರಿಯಿಂದ ಬರುವಾಗ ಆಕೆಯ ಜೊತೆ ಮಾತನಾಡಿಕೊಂಡು ಬಂದಿದ್ದಾನೆ. ನಂತರ ನರೇಂದ್ರ ಮತ್ತು ಉದಯ ಹತ್ತಿರದಲ್ಲಿರುವ ಬೇಕರಿ ಬಳಿಗೆ ಆ ಹುಡುಗಿಯನ್ನು ಕರೆದುಕೊಂಡು ಹೋಗಿ ಜೋರಾಗಿ ಮಾತನಾಡಿಕೊಂಡು ನಿಂತಿದ್ದರು.

ಆಗ ಅದನ್ನು ನೋಡಿದ ಸೆಕ್ಯುರಿಟಿಗಾರ್ಡ್ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಆ ಸಂದರ್ಭದಲ್ಲಿ ಈಕೆ ನಮ್ಮ ಸಂಬಂಧಿ, ನಮ್ಮ ಅತ್ತೆ ಮಗಳು ಎಂದು ಒಬ್ಬ ಹೇಳಿದರೆ, ಮತ್ತೊಬ್ಬ ನಮ್ಮ ದೊಡ್ಡಮ್ಮನ ಮಗಳು ಎಂದು ಹೇಳಿ ದರ್ಶನ್ ಮೇಲೆ ರೇಗಿದ್ದಾರೆ. ಆಗ ಜಗಳವುಂಟಾಗಿ ಅಲ್ಲಿಂದ ಆತನನ್ನು ರಸ್ತೆಗೆ ಎಳೆತಂದು ತೀವ್ರವಾಗಿ ಥಳಿಸಿದ್ದಾರೆ ಎಂದು ಈ ಸಂಜೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸೆಕ್ಯುರಿಟಿಗಾರ್ಡ್‌ನನ್ನು ನಡುರಸ್ತೆಯಲ್ಲೇ ಕೆಳಗೆ ಹಾಕಿಕೊಂಡು ಕಾಲಿನಿಂದ ನರೇಂದ್ರ ಮತ್ತು ಉದಯ ಒದೆಯಿತ್ತಿದ್ದರೂ ಸಾರ್ವಜನಿಕರು ನೋಡುತ್ತಿದ್ದರೇ ವಿನಃ ಯಾರೊಬ್ಬರೂ ಜಗಳ ಬಿಡಿಸಲು ಬರಲಿಲ್ಲ.

ಆಗ ಸುದ್ದಿ ತಿಳಿದ, ಅಲ್ಲೇ ಹತ್ತಿರದಲ್ಲಿದ್ದ ಉದಯನ ತಾಯಿ ಅಡ್ಡಬಂದು ಹಲ್ಲೆಯನ್ನು ತಡೆದಿದ್ದಾರೆ. ಯಾರೋ ಈ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಖಾಸಗಿ ಟಿವಿ ಚಾನೆಲ್‌ಗಳಿಗೆ ನೀಡಿದ್ದು, ಆ ಘಟನೆ ಪ್ರಸಾರಗೊಂಡಿದೆ. ಥಳಿತಕ್ಕೊಳಗಾದ ದರ್ಶನ್ ರಾಜಗೋಪಾಲನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಉದಯ್ ಮತ್ತು ನರೇಂದ್ರನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.