ಕರ್ನಾಟಕ

ಚುನಾವಣೆಗೆ ಬಿಜೆಪಿ ಶಂಖನಾದ : ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಸಂಕಲ್ಪ

Pinterest LinkedIn Tumblr

njಬೆಂಗಳೂರು, ಜೂ. ೧೮- ಮುಂದಿನ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಬಿಜೆಪಿ ಕರ್ನಾಟಕವನ್ನು ಕಾಂಗ್ರೆಸ ಮುಕ್ತಗೊಳಿಸಲು ಸಂಕಲ್ಪ ತೊಟ್ಟಿದೆ.
ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನೇಮಕಗೊಂಡ ನಂತರ ನಗರದಲ್ಲಿಂದು ನಡೆದ ರಾಜ್ಯ ಬಿಜೆಪಿಯ ಪ್ರಥಮ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯವನ್ನು ಕಾಂಗ್ರೆಸ್ ಮುಕ್ತಗೊಳಿಸಿ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಸಂಕಲ್ಪವನ್ನು ತೊ‌ಡಲಾಯಿತು.
ಈ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು, ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಗುರಿಯನ್ನು ಇಟ್ಟುಕೊಂಡು ಪಕ್ಷ ಬಲವರ್ಧನೆ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಚುನಾವಣೆಗೆ ಕಡಿಮೆ ಸಮಯವಿದೆ. ಕಾರ್ಯಕರ್ತರು ಪಕ್ಷಕ್ಕೆ ಪೂರ್ಣ ಸಮಯ ಕೊಟ್ಟರೆ ಖಂಡಿತವಾಗಿಯೂ 150 ಸ್ಥಾನದ ಗುರಿ ಮುಟ್ಟಬಹುದು ಎಂದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ಪ್ರಧಾನಿ ನರೇಂದ್ರಮೋದಿಯವರಿಗೆ ಕೊಡುಗೆ ನೀಡಬೇಕಿದೆ. ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸುವ ಪ್ರಧಾನಿಯವರ ಅಪೇಕ್ಷೆಯನ್ನು ಈಡೇರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಯಡಿಯೂರಪ್ಪನವರು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಪೂರಕವಾದ ವಾತಾವರಣವಿದೆ. ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿದರೆ 150 ಸ್ಥಾನ ಗೆಲ್ಲುವುದು ಕಷ್ಟವೇನಲ್ಲ ಎಂದು ಅವರು ಹೇಳಿದರು.
ಈ ಹಿಂದೆ ಬಿಜೆಪಿ ಲೋಕಸಭೆಯಲ್ಲಿ 2 ಸ್ಥಾನ ಮಾತ್ರ ಗೆದ್ದಿತ್ತು. ಈಗ ಪೂರ್ಣ ಪ್ರಮಾಣದಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದೇವೆ. ಹಿಂದಿನ ಪ್ರಧಾನಿ ವಾಜಪೇಯಿ ಅವರು ನಾ ದೈನ್ಯಂ ನಾ ಪಲಾಯನಂ ಎಂದು ಹೇಳಿದ್ದರು. ಅದರಂತೆ ಇಂದು ಬಿಜೆಪಿ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲೂ ಮುಂದಿನ ದಿನಗಳಲ್ಲಿ ಅಧಿಕಾರ ಹಿಡಿಯುವುದು ನಿಶ್ಚಿತ ಎಂಬ ವಿಶ್ವಾಸವನ್ನು ಯಡಿಯೂರಪ್ಪನವರು ವ್ಯಕ್ತಪಡಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಟ ಹಾಗೂ ಜನವಿರೋಧಿ ಸರ್ಕಾರವಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ. ಇವರ ಯೋಗ್ಯತೆಗೆ ಒಬ್ಬ ಲೋಕಾಯುಕ್ತರನ್ನು ನೇಮಕ ಮಾಡಲು ಆಗಿಲ್ಲ ಎಂದು ವಾಗ್ದಾಳಿ ನಡೆಸಿದ ಯಡಿಯೂರಪ್ಪನವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಎಸಿಬಿ ರಚನೆ ಮಾಡಿದ್ದಾರೆ. ಹೈಕೋರ್ಟ್ ಈ ವಿಚಾರದಲ್ಲಿ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಸರ್ಕಾರದ ಬಣ್ಣ ಬಯಲಾಗಿದೆ ಎಂದು ಹೇಳಿದರು.
ಸ್ವಯಂ ಘೋಷಿತ ಅಹಿಂದ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ, ಆ ವರ್ಗಕ್ಕೆ ನೀಡಿರುವ ಸೌಲಭ್ಯಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ. ನಾವು ಅಧಿಕಾರದಲ್ಲಿದ್ದಾಗ ಅಹಿಂದ ವರ್ಗಕ್ಕೆ ಏನು ಮಾಡಿದ್ದೇವೆ ಎಂಬುದನ್ನು ಜನರೇ ಹೋಲಿಸಿ ನೋಡುತ್ತಾರೆ ಎಂದರು.
ಸಿಂಹ ಸ್ವಪ್ನ
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಬಿಜೆಪಿ ಈ ಸರ್ಕಾರದ ವಿರುದ್ಧ ಹೋರಾಟಗಳನ್ನು ನಡೆಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾಲಿಗೆ ಸಿಂಹ ಸ್ವಪ್ನವಾಗಬೇಕು. ನಿದ್ದೆಯಲ್ಲೂ ಸಿದ್ದರಾಮಯ್ಯನವರು ಬಿಜೆಪಿಯ ಹೆಸರು ಕೇಳಿದರೆ ಭಯಪಡುವಂತಹ ಹೋರಾಟಗಳನ್ನು ನಡೆಸಬೇಕಿದೆ ಎಂದರು.
ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದ ವಿ. ಸೋಮಣ್ಣ, ಲೆಹರ್‌ಸಿಂಗ್, ಹನುಮಂತ ನಿರಾಣಿರವರನ್ನು ಕಾರ್ಯಕಾರಿಣಿಯಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ನಗರದ ಉಡ್‌ಲ್ಯಾಂಡ್ಸ್‌ ಹೋಟೆಲ್‌ನಲ್ಲಿ ನಡೆದ ಈ ಕಾರ್ಯಕಾರಿಣಿಯಲ್ಲಿ ಪಕ್ಷದ ಎಲ್ಲ ಶಾಸಕರು, ಸಂಸದರು, ವಿವಿಧ ಮೋರ್ಚಾಗಳ ಅಧ್ಯಕ್ಷರುಗಳು, ಪ್ರಮುಖ ಮುಖಂಡರುಗಳು ಪಾಲ್ಗೊಂಡಿದ್ದರು.
ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಹೊತ್ತಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರುಳಿಧರ್‌ರಾವ್, ಕೇಂದ್ರ ಸಚಿವರುಗಳಾದ ಸದಾನಂದಗೌಡ, ಅನಂತಕುಮಾರ್, ಜಿ.ಎಂ. ಸಿದ್ದೇಶ್ವರ್, ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್‌ಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್, ಸಿ.ಟಿ. ರವಿ, ಅರವಿಂದಲಿಂಬಾಳಿ, ಶೋಭಕರಂದ್ಲಾಜೆ, ಮಾಜಿ ಸಚಿವ ಗೋವಿಂದ ಕಾರಜೋಳ ಉಪಸ್ಥಿತರಿದ್ದರು.

Comments are closed.