ಬೆಂಗಳೂರು, ಜೂ. ೧೮- ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣವಿದ್ದು, ಅದಕ್ಕೆ ತಕ್ಕಂತೆ ಹೆಜ್ಜೆಯಿಡಲು ಎಲ್ಲರೂ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಕೇಂದ್ರ ಸಚಿವ ಡಿ.ಬಿ. ಸದಾನಂದಗೌಡ ಹೇಳಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಉದ್ದೇಶಿಸಿ ಮಾತನಾಡಿದ ಅವರು, ಒಡೆದ ಮನೆ ಒಂದಾಗಿದೆ. ನಾವೀಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾದ ಕಾರಣ ಯಶಸ್ಸು ಸಾಧ್ಯವಾಯಿತು. ಅದೇ ರೀತಿ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ ಎಂದರು.
ಪಕ್ಷದೊಳಗೆ ಭಿನ್ನಾಭಿಪ್ರಾಯ ಸಹಜ. ಆದರೆ ಗೊಣಗಾಟ ಹೆಚ್ಚಾದರೆ ಪಕ್ಷಕ್ಕೂ ಒಳ್ಳೆಯದಲ್ಲ. ಗೊಣಗುವವರಿಗೂ ಇದು ತೊಂದರೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಖಂಡರುಗಳು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗಿದೆ ಎಂದು ಪರೋಕ್ಷವಾಗಿ ಎಲ್ಲ ನಾಯಕರ ವಿರುದ್ಧ ಸದಾನಂದಗೌಡ ಚಾಟಿ ಬೀಸಿದರು.
ನಮ್ಮ ತಪ್ಪುಗಳ ಬಗ್ಗೆ ಜನರಿಗೆ ಹಿಂದೆ ಬೇಸರವಾಗಿತ್ತು. ಆದರೂ ನಮ್ಮನ್ನು ಕ್ಷಮಿಸಿದ್ದಾರೆ. ಇನ್ನು ಮುಂದೆ ಇಂಥ ವಿದ್ಯಮಾನ ಆಗಬಾರದು ಎಂಬ ಎಚ್ಚರಿಕೆಯನ್ನು ವಹಿಸಬೇಕಿದೆ ಎಂದು ಅವರು ಹೇಳಿದರು.
ಮುಂದಿನ ೨೦೧೮ರ ಚುನಾವಣೆಗೆ ಈ ಕಾರ್ಯಕಾರಿಣಿ ಮೂಲಕ ರಣಕಹಳೆ ಊದಲಾಗಿದೆ. ಸವಾಲು ಸ್ವೀಕರಿಸುವುದೇ ಈ ಕಾರ್ಯಕಾರಿಣಿಯ ಉದ್ದೇಶ. ಕಾಂಗ್ರೆಸ್ನ ದುರಾಡಳಿತ ನಮಗೆ ಅನುಕೂಲಕರ ವಾತಾವರಣವನ್ನು ಮಾಡಿಕೊಟ್ಟಿದೆ. ಇದನ್ನು ಬಳಸಿಕೊಂಡು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮುಖಂಡರು ಭಿನ್ನಾಭಿಪ್ರಾಯಗಳನ್ನು ಮರೆತು ಕೆಲಸ ಮಾಡುವ ಅಗತ್ಯವಿದೆ ಎಂದರು.
ಮಿಷನ್ ೧೫೦
ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಬಿಜೆಪಿಯ ಉಸ್ತುವಾರಿ ಮುರುಳೀಧರ್ರಾವ್, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ರಾಜ್ಯವನ್ನು ಭ್ರಷ್ಟ ಕಾಂಗ್ರೆಸ್ ಸರ್ಕಾರದಿಂದ ಮುಕ್ತಗೊಳಿಸುವ ಒಂದೇ ಗುರಿಯನ್ನು ಇಟ್ಟುಕೊಂಡು ಪಕ್ಷ ಸಂಘಟಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ದಕ್ಷಿಣ ಭಾರತದಲ್ಲಿ ಬಿಜೆಪಿಯ ದ್ವೀಪ ಸ್ಥಂಭವನ್ನು ಪ್ರಕಾಶಿಸುವ ಕೆಲಸ ರಾಜ್ಯದಿಂದ ಆಗಬೇಕಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ರಾಷ್ಟ್ರಾಧ್ಯಕ್ಷರ ಆಶಯವನ್ನು ಸಾಕಾರಗೊಳಿಸಲು ಎಲ್ಲರೂ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದು ಮುರುಳೀಧರ್ರಾವ್ ಹೇಳಿದರು.
ಈ ಸಭೆಯಲ್ಲಿ ಎಲ್ಲರೂ ಗಂಭೀರವಾಗಿದ್ದಾರೆ. ಯಾರ ಮುಖದಲ್ಲೂ ಮಂದಹಾಸ ಮೂಡಿಲ್ಲ. ಚಪ್ಪಾಳೆ ಸದ್ದುಗಳು ಕೇಳಿಸುತ್ತಿಲ್ಲ. ಬಹುತೇಕರು ಯೋಚನಾಗ್ರಸ್ಥರಾಗಿದ್ದಾರೆ. ಇನ್ನು ಕೆಲವರು ಧ್ಯಾನಸ್ಥರಾಗಿದ್ದಾರೆ. ಬಹುಶಃ ಎಲ್ಲರೂ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದು ಹೇಗೆ ಎಂಬ ಗಂಭೀರ ಚಿಂತನೆ ನಡೆಸುತ್ತಿರುವಂತಿದೆ ಎಂದು ಅವರು ಹಾಸ್ಯದ ದಾಟಿಯಲ್ಲಿ ಹೇಳಿದರು.
ಕರ್ನಾಟಕ
Comments are closed.