ಕರ್ನಾಟಕ

ಲಂಡನ್‌ನಲ್ಲಿ ಬಸವಣ್ಣ ಪ್ರತಿಮೆ ಸ್ಥಾಪನೆ ನೋವು-ಕಾವು

Pinterest LinkedIn Tumblr

basavannaಬೆಂಗಳೂರು, ಜೂ. ೧೮- ಲಂಡನ್ನಿನ ಥೇಮ್ಸ್ ನದಿ ದಂಡೆಯ ಮೇಲೆ ಕ್ರಾಂತಿಯೋಗಿ ಬಸವೇಶ್ವರರ ಪ್ರತಿಮೆ ಸ್ಥಾಪನೆಗೆ ಕಳೆದ 5 ವರ್ಷಗಳವರೆಗೆ ಪಟ್ಟ ಸಂಕಟ, ನೋವು ಮಾನಸಿಕ ಯಾತನೆಗಳನ್ನು ಲಂಡನ್‌ನ ಲ್ಯಾಂಬೆತ್ ಕೌನ್ಸಿಲ್ ಮಾಜಿ ಮೇಯರ್ ನೀರಜ್ ಪಾಟೀಲ್ ಅವರು ಇಂದಿಲ್ಲಿ ವಿಷಾದದಿಂದಲೇ ಹೇಳಿಕೊಂಡಿದ್ದಾರೆ.
ನಗರದಲ್ಲಿಂದು ನಡೆದ 2 ದಿನಗಳ ವಚನ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ಬಸವಣ್ಣನವರ ಹೆಸರನ್ನು ಜಗತ್ತಿಗೆ ಪರಿಚಯಿಸಲು ಥೇಮ್ಸ್ ನದಿ ದಂಡೆಯ ಮೇಲೆ ಅವರ ಪ್ರತಿಮೆ ಸ್ಥಾಪಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಎಂದು ನೋವಿನಿಂದಲೇ ಹೇಳಿಕೊಂಡರು.
ಲಂಡನ್ ಮೇಯರ್ ಆಗಿದ್ದಾಗ ಬಸವೇಶ್ವರ ಪ್ರತಿಮೆ ಸ್ಥಾಪಿಸುವ ಆಸೆ ಚಿಗುರೊಡೆಯಿತು. ಇದಕ್ಕಾಗಿ ಜಾಗ ಮತ್ತು ಪ್ರತಿಮೆ ಸೇರಿದಂತೆ ಒಟ್ಟು 6.5 ಕೋಟಿ ರೂ. ಬೇಕಿತ್ತು. ಇಷ್ಟು ಹಣವನ್ನು ಹೊಂದಿಸುವುದು ಸುಲಭದ ಮಾತಾಗಿರಲಿಲ್ಲ.
ಅಂದು ನನ್ನ ನೆರವಿಗೆ ಬಂದವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ, ಒಟ್ಟು 3 ಕೋಟಿ ರೂ.ಗಳನ್ನು ಮಂಜೂರು ಮಾಡಿದರು ಎಂದರು. ಆದರೆ, ಬಿಡುಗಡೆಯಾಗಿದ್ದು ಒಂದೂವರೆ ಕೋಟಿ ರೂ. ಮಾತ್ರ. ಆ ವೇಳೆಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು. ಉಳಿದ ಒಂದೂವರೆ ಕೋಟಿ ರೂ. ಸರ್ಕಾರದಿಂದ ಬಿಡುಗಡೆಯಾಗಲಿಲ್ಲ. ನನ್ನ ಸ್ನೇಹಿತರು, ಅಭಿಮಾನಿಗಳಿಂದ 50 ಲಕ್ಷ ರೂ.ಗಳನ್ನಷ್ಟೇ ಹೊಂದಿಸಲು ಸಾಧ್ಯವಾಯಿತು ಎಂದರು.
ಪ್ರತಿಮೆ ಸ್ಥಾಪನೆಗಾಗಿ ನನ್ನ ಸ್ವಂತ ಹಣವನ್ನೇ ಬಳಸಿಕೊಂಡೆ. ಆದರೂ ಮೊಸರಲ್ಲಿ ಕಲ್ಲು ಹುಡುಕುವಂತೆ ಕೆಲವರು ಅಡಚಣೆಯನ್ನುಂಟು ಮಾಡುತ್ತಲೇ ಬಂದರು ಎಂದ ಮೀರಜ್ ಪಾಟೀಲ್‌ರವರು ಪ್ರತಿಮೆ ಅನಾವರಣಕ್ಕೆ ಪ್ರಧಾನಿ ಮೋದಿ ಹಿಂದೆ ಮುಂದೆ ನೋಡದೆ ಒಂದೇ ಮಾತಿನಲ್ಲಿ ಒಪ್ಪಿಕೊಂಡದ್ದನ್ನು ನೆನಪಿಸಿಕೊಂಡರು.
ಲಂಡನ್‌ನ ಥೇಮ್ಸ್ ನದಿ ದಂಡೆಯ ಮೇಲೆ ಅನಾವರಣಗೊಂಡಿರುವ ಬಸವಣ್ಣ, ಕರ್ನಾಟಕದ ಬಸವಣ್ಣನಲ್ಲ. ಬ್ರಿಟಿಷ್ ಬಸವಣ್ಣ, ಲಿಂಗಾಯಿತರ ಬಸವಣ್ಣನಲ್ಲ, ವಿಶ್ವದ ಬಸವಣ್ಣ ಎಂದು ಅವರು ಹೇಳಿದರು.
ಬಸವ ಜಯಂತಿಯನ್ನು ಆಢಂಬರವಿಲ್ಲದೆ ಕೇವಲ 100 ರೂ. ಖರ್ಚಿನಲ್ಲೇ ಮಾಡಿದ್ದೇನೆ. 100 ರೂ. ಖರ್ಚು ಮಾಡಿ ಬಸವಜಯಂತಿ ಮಾಡಿದ್ದೇನೆ. ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯಿಂದ ಬಸವಣ್ಣನವರಿಗೆ ಪುಷ್ಪಮಾಲೆ ಹಾಕುವ ಸಂಪ್ರದಾಯ ಬೆಳೆಸುತ್ತೇನೆ ಎಂದರು.

Comments are closed.