ಬೆಂಗಳೂರು, ಜೂ. ೧೩- ಪಕ್ಷದ ವಿಪ್ ಉಲ್ಲಂಘಿಸಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆಗ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ದೇವೇಗೌಡರು ನಮ್ಮ ಮೇಲೆ ಮಾತ್ರ ಈಗ ಅಮಾನತ್ತಿನ ಕ್ರಮ ಕೈಗೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಜೆಡಿಎಸ್ನ ಭಿನ್ನಮತೀಯ ನಾಯಕರು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ. ಇಲ್ಲದಿದ್ದರೆ ಎಲ್ಲಾ ಸತ್ಯಗಳನ್ನು ಜನರ ಮುಂದೆ ಇಡಬೇಕಾಗುತ್ತದೆ ಎಂದು ಗುಡುಗಿದ್ದಾರೆ.
ಪಕ್ಷದ ಇಂದಿನ ಪರಿಸ್ಥಿತಿಗೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರೇ ಕಾರಣ ಬೇರೆ ಯಾರೂ ಅಲ್ಲ ಎಂದು ಜೆಡಿಎಸ್ನ ಭಿನ್ನಮತೀಯ ಶಾಸಕರ ಜೊತೆ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಹಾಗೂ ಶಾಸಕ ಚೆಲುವರಾಯಸ್ವಾಮಿ ಹೇಳಿದರು.
ನನ್ನ ವಿರುದ್ಧ ಅನಗತ್ಯವಾಗಿ ಟೀಕೆ ಟಿಪ್ಪಣಿ ಮಾಡುವುದು ಸರಿಯಲ್ಲ. ಪಕ್ಷದ ಕಾರ್ಯಕರ್ತರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸುವುದು, ತಿಥಿ ಕಾರ್ಡ್ ಹಂಚುವುದು, ಫೇಸ್ ಬುಕ್ ಹಾಗೂ ವಾಟ್ಸಪ್ನಲ್ಲಿ ಅಶ್ಲೀಲ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ, ನಮಗೂ ಇದೆಲ್ಲಾ ಬರುತ್ತದೆ ಎಂಬುದನ್ನು ಮರೆಯಬೇಡಿ ಎಂದು ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ಪಕ್ಷದಿಂದ ಬೆಳೆದಿದ್ದೇವೆ ನಿಮ್ಮ ಮನೆಯಲ್ಲಿ ಅನ್ನ ತಿಂದಿದ್ದೇವೆ ಎಂಬ ಕಾರಣಕ್ಕೆ ಎಲ್ಲವನ್ನು ಸಹಿಸಿಕೊಂಡು ನೋವನ್ನು ನುಂಗಿಕೊಂಡು ಸುಮ್ಮನಿದ್ದೇವೆ, ನಮ್ಮನ್ನು ಕೆಣಕಿದರೆ ಸತ್ಯ ಹೇಳಬೇಕಾಗುತ್ತದೆ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟರೆ ಒಳ್ಳೆಯದು ಎಂದು ಅವರು ಹೇಳಿದರು.
ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ನಾವೆಲ್ಲಾ ಒಂದಾದಾಗ ದೇವೇಗೌಡರು ಏನು ಮಾಡಿದರು ಎಂಬುದು ನಮಗೆ ಗೊತ್ತಿದೆ. ಆಗ ಪಕ್ಷದ ವಿಪ್ ಉಲ್ಲಂಘಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು, ಅವರನ್ನು ಏಕೆ ಪಕ್ಷದಿಂದ ಅಮಾನತ್ತು ಮಾಡಲಿಲ್ಲ. ಮಗ ಮಾಡಿದರೆ ಸರಿ, ಬೇರೆಯವರು ಮಾಡಿದರೆ ತಪ್ಪಾ ಎಂದವರು ಪ್ರಶ್ನಿಸಿದರು.
ದೇವೇಗೌಡರು ನಮ್ಮ ನಾಯಕರು ಮಾಜಿ ಪ್ರಧಾನಿಗಳಾಗಿದ್ದವರು, ಮುತ್ಸದ್ದಿ ರಾಜಕಾರಣಿ ಅವರ ವಿರುದ್ಧ ಯಾವುದೇ ಕಾರಣಕ್ಕೂ ಟೀಕೆ, ಟಿಪ್ಪಣಿ ಮಾಡಬಾರದು ಎಂದು ನೋವು ನುಂಗಿಕೊಂಡು ಸುಮ್ಮನೆ ಇದ್ದೇವೆ. ನಾವು ಈಗಲೂ ಪಕ್ಷದಲ್ಲೇ ಇದ್ದೇವೆ. ಅಮಾನತ್ತಾಗಿರುವ ನೋಟಿಸ್ ನಮಗೆ ತಲುಪಿಲ್ಲ, ಪಕ್ಷದಲ್ಲಿ ಇರಿ ಎಂದರೆ ಇರುತ್ತೇವೆ ಇಲ್ಲದಿದ್ದರೆ ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ. ಅದನ್ನು ಬಿಟ್ಟು ಕಾರ್ಯಕರ್ತರನ್ನು ಎತ್ತಿಕಟ್ಟುವ ಕೆಲಸ ಬೇಕಾಗಿಲ್ಲ ಎಂದರು.
ಪಕ್ಷದಲ್ಲಿ ಯಾವುದೇ ನಿರ್ಧಾರಗಳನ್ನು ಯಾರನ್ನು ಕೇಳಿ ತೆಗೆದುಕೊಳ್ಳುತ್ತೀರಿ, ಚಿಕ್ಕಬಳ್ಳಾಪುರಲ್ಲಿ ಸ್ಪರ್ಧೆ ಮಾಡುವಾಗ, ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಹಾಕುವಾಗ ನಮ್ಮನ್ನು ಕೇಳಿದ್ದೀರಾ. ನಿಮಗೆ ಬೇಕಾದ ಹಾಗೆ ತೀರ್ಮಾನಗಳನ್ನು ಮಾಡಿಕೊಂಡು ನಿಮಗೆ ಅನುಕೂಲವಾದ ಹಾಗೆ ಯಾರ ಜೊತೆ ಬೇಕಾದರೂ ಕೈಜೋಡಿಸಿ. ರಾಜಕಾರಣ ಮಾಡಿ ಲಾಭ ಪಡೆದುಕೊಂಡು ನಮ್ಮ ಮೇಲೆ ಮಾತ್ರ ಗೂಬೆ ಕೂರಿಸುವುದು ಸರಿಯಲ್ಲ ಎಂದು ಹೇಳಿದರು.
ನಾವು ಪಕ್ಷ ಬಿಟ್ಟು ಹೋಗುವ ಆಲೋಚನೆ ಇಲ್ಲ, ಪಕ್ಷ ಕಟ್ಟುತ್ತೇವೆ. ಆದರೆ ಕೆಟ್ಟದ್ದಾಗಿ ಮಾತನಾಡುವುದು ಬೇಡ, ನಮಗೂ ಸತ್ಯಗಳನ್ನು ಹೇಳಲು ಗೊತ್ತಿದೆ ಎಂದರು.
ಕುಮಾರಸ್ವಾಮಿಗೆ ರೇವಣ್ಣನೇ ಶನಿ
ಮಾಜಿ ಸಚಿವ ಎಚ್.ಡಿ. ರೇವಣ್ಣ ಪಕ್ಷದಿಂದ ಶನಿಗಳು ತೊಲಗಿದ್ದಾರೆ ಎಂದು ನಮ್ಮ ಬಗ್ಗೆ ಟೀಕೆ ಮಾಡಿದ್ದಾರೆ. ಕುಮಾರಸ್ವಾಮಿಗೆ ರೇವಣ್ಣನೇ ನಿಜವಾದ ಶನಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದಾಗ ಅದರ ಲಾಭ ಪಡೆದುಕೊಂಡಿದ್ದು ಇದೇ ರೇವಣ್ಣ ಹಾಗೂ ಕುಟಂಬ ವರ್ಗದವರು. ಇಡೀ ಸರ್ಕಾರ ನಡೆಸಿದ್ದು ರೇವಣ್ಣ, ಈಗ ನಮ್ಮ ವಿರುದ್ಧವೇ ಮಾತನಾಡುವುದು ಸರಿಯಲ್ಲ ಎಂದು ಶಾಸಕ ಬಾಲಕೃಷ್ಣ ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡರಿಗೆ ಕುಮಾರಸ್ವಾಮಿ ಅಧಿಕಾರ ಹಿಡಿಯುವುದು ಬೇಕಾಗಿಲ್ಲ, ಹಾಗಾಗಿಯೇ ಅವರು ಕುಮಾರಸ್ವಾಮಿ ಬೆಳವಣಿಗೆಗೆ ಅಡ್ಡಿಯಾಗಿದ್ದಾರೆ. ನಮ್ಮ ಮುಂದೆಯೇ ಹಲವು ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗದಿದ್ದುದ್ದೇ ಒಳ್ಳೆಯದು ಎಂದು ಹೇಳಿದ್ದಾರೆ. ಇದನ್ನು ಬೇಕಾದರೆ ಈಶ್ವರನ ಮೇಲೆ ಆಣೆ ಮಾಡಿ ಇಲ್ಲ ಎಂದು ಹೇಳಲಿ ಎಂದು ಸವಾಲು ಹಾಕಿದರು.
ಕುಮಾರಸ್ವಾಮಿ ಅವರಿಗೂ ಅವರ ಕುಟುಂಬದವರು ಅವರ ಬೆಳವಣಿಗೆಯನ್ನು ಸಹಿಸುತ್ತಿಲ್ಲ ಎಂಬುದು ಗೊತ್ತಿದೆ. ಆತ್ಮಸಾಕ್ಷಿಯಿಂದ ಅವರು ನಿಜ ಹೇಳಲಿ ಎಂದು ಸವಾಲು ಹಾಕಿದರು.
ದೇವೇಗೌಡರ ಕುಟುಂಬಸ್ಥರಿಗೆ ಕುಮಾರಸ್ವಾಮಿ ಬಲ ಆಗುವುದು ಇಷ್ಟ ಇಲ್ಲ. ಕುಮಾರಸ್ವಾಮಿ ಬಲ ಆದರೆ ದೇವೇಗೌಡರು ಬಲಹೀನ ಆಗುತ್ತಾರೆ ಎಂದು ಜ್ಯೋತಿಷ್ಯ ಹೇಳಿದ್ದಾರಂತೆ ಎಂದು ವ್ಯಂಗ್ಯವಾಡಿದರು.
ಒಕ್ಕಲಿಗರ ಪರಮೋಚ್ಛ ನಾಯಕ ಎಂದು ಹೇಳಿಕೊಳ್ಳುವ ದೇವೇಗೌಡರು ಎಷ್ಟು ಜನ ಒಕ್ಕಲಿಗರನ್ನು ಎಮ್ಎಲ್ಸಿ ಮಾಡಿದ್ದಾರೆ. ಎಲ್ಲರಿಗೆ ಬೋರ್ಡ್ ಚೇರ್ಮನ್ ಮಾಡಿದ್ದಾರೆ ಇವರಿಗೆ ಕಾರ್ಯಕರ್ತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಅವರಿಗೆ ಅಧಿಕಾರ ನೀಡಲಿ. ತಾವು ರಾಜಕೀಯ ನಿವೃತ್ತಿ ಬೇಕಾದರೂ ಆಗುತ್ತೇವೆ ಎಂದರು.
ಇವರು ಏನು ಮಾಡಿದರೂ ಸರಿ, ನಾವು ಮಾಡಿದರೆ ತಪ್ಪೇ, ಈಗಲೂ ನಾವು ಮಾಡಿರುವ ತಪ್ಪನ್ನು ಕ್ಷಮಿಸಿ ಪಕ್ಷ ಕಟ್ಟಲು ನಮ್ಮನ್ನು ಬಳಸಿಕೊಂಡರೆ ಅದಕ್ಕೆ ನಾವು ಸಿದ್ಧ ಎಂದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ನ ಭಿನ್ನಮತೀಯ ಶಾಸಕರಾದ ರಮೇಶ್ ಬಂಡಿ, ಸಿದ್ದೇಗೌಡ, ಭೀಮಾ ನಾಯಕ್, ಗೋಪಾಲಯ್ಯ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹಾಜರಿದ್ದರು. ಜಮೀರ್ ಅಹ್ಮದ್ ಖಾನ್ ಮೆಕ್ಕಾಗೆ ಹೋಗಿರುವುದರಿಂದ ಗೈರು ಹಾಜರಾಗಿದ್ದು, ಇಕ್ಬಾಲ್ ಅನ್ಸಾರಿ ಸಹ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿರಲಿಲ್ಲ.