ಕರ್ನಾಟಕ

ಕುಡಿಯದವರಿಗೇ ಲಿಕ್ಕರ್ ಲಾಬಿ ಕಿಕ್

Pinterest LinkedIn Tumblr

Garamagaram2ಬ್ರಮ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ್ ಕೈನ| ಭೂಮಿಯುದ್ಕೂ ಬೊಗ್ಗಿಸ್ತೀನಿ ಎಂಡ ತುಂಬ್ಕೊಂಡ್ ಮೈನ|| ಎನ್ನುವುದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ರಾಜೀನಾಮೆ ನೀಡಬೇಕು ಅಥವಾ ಎತ್ತಂಗಡಿ ಆಗಬೇಕೆಂಬ ಪರಿಸ್ಥಿತಿ ಕೂಡ್ಲಿಗಿಯಲ್ಲಿ ಮೂಡಿದಂತಿದೆ. ಮದ್ಯವು ಕುಡಿದವರಿಗೆ ಕೊಡುವುದಕ್ಕಿಂತ ಹೆಚ್ಚಿನ ಕಿಕ್ಅನ್ನು ಲಿಕ್ಕರ್ ಬ್ಯಾನ್ ಮಾಡಿ ಎನ್ನುವವರಿಗೆ ನೀಡಿರುವಂತಿದೆ. ಭಾರತೀಯರು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದರೂ ಹೆಂಡಕ್ಕೆ ದಾಸರಾಗಿರುವುದು ತಪ್ಪಿಲ್ಲ. ಆ ದಾಸ್ಯ-ವರೇಣ್ಯರಾದ ಮತದಾರರನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದರಲ್ಲಿ ಲಿಕ್ಕರ್ ಲಾಬಿ ಸಫಲವಾಗಿದೆ. ಕಳೆದ ದಶಕವೊಂದರ ಹೊರತಾಗಿ ಪ್ರತಿ ಚುನಾವಣೆಯಲ್ಲೂ ಪ್ರತಿಪಕ್ಷಕ್ಕೂ ಒಬ್ಬ ಲಿಕ್ಕರ್ ದೊರೆಯ ಪ್ರಕಟಿತ ಅಥವಾ ಅಪ್ರಕಟಿತ ಪಾರ್ಶ್ವ ಪ್ರಾಯೋಜಕತ್ವ ಇರುತ್ತಿತ್ತು. ಪ್ರತಿ ಪಕ್ಷಗಳೂ ಲಿಕ್ಕರ್ ಕಂಪನಿಯ ಕದ ತಟ್ಟಿ ಚಂದಾ ವಸೂಲಿ ಮಾಡುವುದನ್ನು ಕಂಡ ಮಲ್ಯ ತಾನೇ ಚುನಾವಣೆಗೆ ನಿಲ್ಲುವುದೇ ಚಂದಾ ನೀಡುವುದಕ್ಕಿಂತ ಕಡಿಮೆ ಖರ್ಚಾಗುವುದು ಎಂದರಿತೇ ಚುನಾವಣೆಗೆ ನಿಂತರೆನಿಸುತ್ತದೆ. ಈಗಿನ ಸರ್ಕಾರವಂತೂ ಲಿಕ್ಕರೋದ್ಧಾರಕ್ಕೆ ಪಣ ತೊಟ್ಟಿರುವುದು ನಿರ್ವಿವಾದ. ಇತ್ತ ಬಿಟ್ಟಿ ಭಾಗ್ಯಗಳನ್ನಿತ್ತು, ಅತ್ತ ವೈನ್ ಸ್ಟೋರ್ಗಳಿಗೆ ಲೈಸೆನ್ಸ್ ನೀಡಿಬಿಟ್ಟರೆ ಲಿಕ್ಕರ್ ಆದಾಯದ ಜೊತೆಜೊತೆಗೆ ಬೊಂಬು, ಗಳು, ಹೊಸ ಮಡಿಕೆ, ಶವಪೆಟ್ಟಿಗೆ, ಸೌದೆ, ಆರಡಿ ಮೂರಡಿ ಅಗೆಯುವವರು, ಚಿತಾಗಾರ, ಇವುಗಳ ಆದಾಯವೂ ಹೆಚ್ಚೀತು! ಏನಕೇನ ಪ್ರಕಾರೇಣ ಭಂಡಾರ ಭರ್ತಿಯಾದರೆ ಸರಿ! ಕೂಡ್ಲಿಗಿಯಲ್ಲಿ ಲಿಕ್ಕರ್ ಸಾಮ್ರಾಜ್ಯದ ಹರಹಿನ ವಿರುದ್ಧ ದನಿಯೆತ್ತಲು ವಿಫಲರಾದ ಡಿವೈಎಸ್ಪಿ ಅನುಪಮಾ ಶೆಣೈಗೆ ರಾಜೀನಾಮೆ ಅನಿವಾರ್ಯವಾಯಿತು. ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದ ಅವರು ನಂತರ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯರ ರಮ್ ರಾಜ್ಯ ಎಂಬ ಅನ್ಯರ ಪೋಸ್ಟೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಈ ಬಗ್ಗೆ ತಮ್ಮ ಅನಧಿಕೃತ ಸಹಮತ ತೋರಿದ್ದಾರೆ. ದೇಶದಲ್ಲೇ ಗೂಂಡಾಗಿರಿ, ಅಸಮರ್ಪಕತೆಯ ಪರಾಕಾಷ್ಠೆ, ಭ್ರಷ್ಟತೆಯ ಉತ್ತುಂಗವನ್ನು ಮುಟ್ಟಿದ ಬಿಹಾರವೇ ಲಿಕ್ಕರ್ ಬ್ಯಾನ್ ಮಾಡಿದೆ. ನಮ್ಮ ಸರ್ಕಾರ? ಎಲ್ಲರದೂ ಒಂದು ದಾರಿಯಾದರೆ ಎಡವಟ್ಟನದು ಬೇರೆಯೇ ದಾರಿ!

ಲಾಸ್ಟ್ಲೈನ್: ಸ್ವಿಜರ್ಲೆಂಡ್ನಲ್ಲಿ ಪ್ರತಿ ತಿಂಗಳು ನಾಗರಿಕರಿಗೆ ಲಕ್ಷ ರೂ.ಗಳ ಮಾಸಿಕ ವೇತನ ನೀಡುವ ಪ್ರಸ್ತಾವನೆಯನ್ನು ಜನರು ತಿರಸ್ಕರಿಸಿದ್ದಾರೆ. ಆ ಯೋಜನೆ ಕರ್ನಾಟಕಕ್ಕೆ ವಿಸ್ತರಿಸಲು ಸಾಧ್ಯವೇ? ಎಂದು ಕೇಳಲು ಹುಬ್ಲೋಟಯ್ಯನವರು ಆಲೋಚಿಸುತ್ತಿದ್ದಾರಂತೆ!

Comments are closed.