ಕೃಷ್ಣರಾಜಪೇಟೆ, ಜೂ. ೫- ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ 7 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಇಬ್ಬರು ಹೆಂಡಿರ ಗಂಡನಾದ ಕಾಮುಕ ಶಿವಣ್ಣ (53)ನನ್ನು ಗ್ರಾಮಾಂತರ ಪೋಲಿಸರು ಬಂಧಿಸಿ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನೆರೆಯ ಕೆ.ಆರ್.ನಗರ ತಾಲೂಕಿನ ಮಂಚನಹಳ್ಳಿಯವನಾದ ಶಿವಣ್ಣ ಕಳೆದ 15 ವರ್ಷಗಳಿಂದ ಅಕ್ಕಿಹೆಬ್ಬಾಳು ಗ್ರಾಮದಲ್ಲಿಯೇ ವಾಸವಾಗಿದ್ದಾನೆ. ರುಕ್ಮಿಣಿ ಮತ್ತು ಲಕ್ಷ್ಮೀ ಎಂಬ ಇಬ್ಬರನ್ನು ವಿವಾಹವಾಗಿರುವ ಶಿವಣ್ಣ ಪ್ರಸ್ತುತ ತನ್ನ ಎರಡನೇ ಪತ್ನಿ ಲಕ್ಷ್ಮೀಯೊಂದಿಗೆ ಅಕ್ಕಿಹೆಬ್ಬಾಳಿನಲ್ಲಿ ಕೃಷಿ ಕೂಲಿ ಕಾರ್ಮಿಕನಾಗಿ ಜೀವನ ನಡೆಸುತ್ತಿದ್ದಾನೆ. ಕಳೆದ ತಿಂಗಳು 25ರಂದು ಈ ಘಟನೆಯು ನಡೆದಿದ್ದು, ತನ್ನ ಆಟೋ ಚಾಲಕನಾದ ತನ್ನ ಪಕ್ಕದ ಮನೆಯ ಮಹೇಶನಾಯಕ ಅವರ ಮಗಳಿಗೆ ಮೊಬೈಲ್‍ನಲ್ಲಿ ಆಟವಾಡಲು ಗೇಮನ್ನು ಹಾಕಿಕೊಡುವುದಾಗಿ ಪುಸಲಾಯಿಸಿ ತನ್ನ ಮನೆಗೆ ಕರೆಸಿಕೊಂಡು ಈ ಕೃತ್ಯವೆಸಗಿದ್ದಾನೆ ಎಂದು ಅಪ್ರಾಪ್ತ ಬಾಲಕಿಯ ತಂದೆ ಮಹೇಶನಾಯಕ ಮತ್ತು ತಾಯಿ ಶೀಲ ತಿಳಿಸಿದ್ದಾರೆ.
ಘಟನೆಯ ವಿವರ: ಕಳೆದ ತಿಂಗಳು ಮೇ 25ರಂದು ತನ್ನ ಮಗಳು ಹೊಟ್ಟೆನೋವೆಂದು ಹೇಳಿದಾಗ ನಾನು ಸರಿಯಾಗಿ ಗಮನ ಹರಿಸದೇ ಸುಮ್ಮನಾದೆ ಮತ್ತೆ ಮಾರನೇ ದಿನವೂ ಮಗಳು ಹೊಟ್ಟೆನೋವೆಂದು ಒದ್ದಾಡುತ್ತಿದ್ದಾಗ ಅಕ್ಕಿಹೆಬ್ಬಾಳು ಸರ್ಕಾರಿ ಆಸ್ಪತ್ರೆಗೆ ಹೋದಾಗ ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಹಾಗೂ ಗುಪ್ತಾಂಗದಲ್ಲಿ ರಕ್ಷ ಬರುತ್ತಿರುವುದರ ಬಗ್ಗೆ ವೈದ್ಯರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಮಾನ-ಮರ್ಯಾದೆಗೆ ಹೆದರಿಕೊಂಡು ಸುಮ್ಮನಿದ್ದ ತಾವು ಘಟನೆಯ ಬಗ್ಗೆ ತಿಳಿಸಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಆರೋಪಿ ತಿಳಿಸಿರುವ ಬಗ್ಗೆ ತಮ್ಮ ಮಗಳು ತಿಳಿಸಿದಾಗ ಬಂದುಗಳಿಗೆ ವಿಚಾರ ತಿಳಿಸಿ ಸಮಾಲೋಚನೆ ನಡೆಸಿ ಇಂದು ದೂರು ನೀಡುತ್ತಿದ್ದೇನೆ. ಒಂದು ಪುಟ್ಟ ಬಾಲಕಿ ಎಂಬುದನ್ನೂ ಕಾಣದೇ ಪಶುವಿನಂತೆ ದೌರ್ಜನ್ಯವೆಸಗಿರುವ ಶಿವಣ್ಣನಿಗೆ ಉಗ್ರವಾದ ಶಿಕ್ಷೆಯಾಗಬೇಕು. ಸಮಾಜದಲ್ಲಿ ಇಂತಹ ಘಟನೆಗಳು ನಡೆಯಬಾರದು, ನನ್ನ ಮಗಳಿಗಾದ ಸ್ಥಿತಿಯು ಯಾವ ಮಗುವಿಗೂ ಬರಬಾರದು ಎಂಬ ಕಾರಣದಿಂದ ಅನಿವಾರ್ಯವಾಗಿ ದೂರು ನೀಡಿ ಅನ್ಯಾಯವನ್ನು ಖಂಡಿಸುತ್ತಿದ್ದೇವೆ. ನಮಗೆ ಗ್ರಾಮಸ್ಥರೂ ಬೆಂಬಲವಾಗಿ ನಿಂತಿದ್ದಾರೆ ಎಂದು ದಂಪತಿಗಳು ಕಣ್ಣೀರು ಹಾಕಿದರು.
ಅಕ್ಕಿಹೆಬ್ಬಾಳಿನಲ್ಲಿ ನಡೆದಿರುವ ಘಟನೆಯ ಬಗ್ಗೆ ಮಾಹಿತಿ ನೀಡಿದ ವೃತ್ತ ಆರಕ್ಷಕ ನಿರೀಕ್ಷಕ ಕೆ.ಸಂತೋಷ್ ಸಾಕ್ಷ್ಯಾಧಾರಗಳನ್ನು ಅವಲೋಕನ ಮಾಡಿ ಕಾಮುಕ ಶಿವಣ್ಣನ ಪೂರ್ವಾಪರವನ್ನು ವಿಚಾರಣೆ ನಡೆಸಿ ವೈದ್ಯಕೀಯ ಪರೀಕ್ಷೆಯ ನಂತರ ಘಟನೆ ನಡೆದಿರುವುದನ್ನು ಖಚಿತಪಡಿಸಿಕೊಂಡಿದ್ದೇವೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಮಾಹಿತಿ ನೀಡಿದ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಸಂತೋಷ್ ಬಾಲಕಿಯು ಪರಿಶಿಷ್ಠ ಪಂಗಡವಾದ ನಾಯಕ ಜನಾಂಗಕ್ಕೆ ಸೇರಿರುವುದರಿಂದ ಎಸ್‍ಸಿ/ಎಸ್‍ಟಿ ದೌರ್ಜನ್ಯ ಕಾಯ್ದೆ, ಅತ್ಯಾಚಾರ ಮತ್ತು ಫೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ವೈದ್ಯಕೀಯ ಪರೀಕ್ಷೆಯು ಘಟನೆ ನಡೆದಿರುವುದನ್ನು ಖಚಿತಪಡಿಸಿದೆ ಎಂದರು. ನಾಗಮಂಗಲ ಡಿವೈಎಸ್‍ಪಿ ಜನಾರ್ಧನ್ ಬಾಲಕಿಯ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ವಿಚಾರಣೆ ನಡೆಸಿ ಮಾಹಿತಿ ಪಡೆದರು. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಸುದ್ದಿಯು ಕಾಳ್ಗಿಚ್ಚಿನಂತೆ ಹರಡಿದ ಕಾರಣ ಅಕ್ಕಿಹೆಬ್ಬಾಳು ಗ್ರಾಮದಿಂದ ಜನಸಾಗರವೇ ಪೋಲಿಸ್ ಠಾಣೆಯ ಮುಂದೆ ಹರಿದು ಬಂದಿತ್ತು. ನೂರಾರು ಜನರು ಕಾಮುಕ ಶಿವಣ್ಣನಿಗೆ ಉಗ್ರವಾದ ಶಿಕ್ಷೆಯನ್ನು ನೀಡಬೇಕು, ಗ್ರಾಮದಿಂದ ಹೊರಹಾಕಿ ಗಡೀಪಾರು ಮಾಡಬೇಕು ಎಂದು ಆಗ್ರಹಿಸಿದರು. ಗ್ರಾಮದ ಮುಖಂಡರಾದ ರಾಜಾನಾಯಕ್, ಗಾಡಿಕಿಟ್ಟು, ರಘು, ದಿವಾಕರ್, ಬೋರೇಗೌಡ, ವಾಸು, ಚೆಲುವರಾಜು, ಹರೀಶ್ ಮತ್ತಿತರರು ಸೇರಿದಂತೆ ನೂರಾರು ಮಹಿಳೆಯರು ಗ್ರಾಮಾಂತರ ಠಾಣೆಯ ಮುಂದೆ ಜಮಾಯಿಸಿದ್ದರು.
ಕರ್ನಾಟಕ
Comments are closed.