ಕರ್ನಾಟಕ

ರಾಜ್ಯದಲ್ಲಿ ಶೇ. 13ರಷ್ಟು ಅರಣ್ಯ ಮಾಯ

Pinterest LinkedIn Tumblr

aranya

ಬೆಂಗಳೂರು, ಜೂ. ೫- ರಾಜ್ಯದಲ್ಲಿ ಪರಿಸರವನ್ನು ಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯಿಂದ ನಿರ್ವಹಿಸದಿದ್ದಲ್ಲಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಲು ಸಾಧ್ಯವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಇಲ್ಲಿ ಎಚ್ಚರಿಕೆ ನೀಡಿದ್ದಾರೆ.
ಅರಣ್ಯ ಮತ್ತು ಪರಿಸರ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು ಪರಿಸರವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವ ಸಲುವಾಗಿ ಸ್ವಾರ್ಥವನ್ನು ಕಡಿಮೆ ಮಾಡಬೇಕೆಂದು ಅವರು ಹೇಳಿದರು.
ಮಾನವನ ಸ್ವಾರ್ಥದಿಂದಾಗಿ ಒಟ್ಟು ಭೂಮಿಯ ವಿಸ್ತೀರ್ಣದಲ್ಲಿ ಮೂರನೇ ಒಂದು ಭಾಗದಷ್ಟು ಇರುವ ಬದಲು ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಕೂಡ ಶೇ. 13 ರಷ್ಟು ಕಾಡು ಕಣ್ಮರೆಯಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಪರಿಸರ ನಾಶದಿಂದಾಗಿ ತಾಪಮಾನ ಹೆಚ್ಚುತ್ತಿದೆ ಎಂದ ಮುಖ್ಯಮಂತ್ರಿಗಳು ಬೆಂಗಳೂರು ಮತ್ತು ಮೈಸೂರುಗಳಂತಹ ನಗರಗಳಲ್ಲೂ ಈ ಬಾರಿ ತಾಪಮಾನ ಹೆಚ್ಚಿರುವುದನ್ನು ಪ್ರಸ್ತಾಪಿಸಿ ಮನುಷ್ಯ ಸಣ್ಣ ವಿಚಾರಗಳತ್ತ ಮೈಮರೆತರೆ, ಮುಂದೊಂದು ದಿನ ಗಂಡಾಂತರ ಎದುರಿಸಬೇಕಾಗುತ್ತದೆ ಎಂದರು.

ಇಂದು ಪ್ರಶಸ್ತಿಯನ್ನು ಪಡೆದ ಪುರಸ್ಕೃತರು ಎಲ್ಲರಿಗೂ ಆದರ್ಶಪ್ರಾಯರು. ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರಿಗೂ ಪ್ರೇರಣೆಯಾಗಲಿದೆ ಎಂದು ಹೇಳಿದರು.
ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಆಹಾರವನ್ನು ವ್ಯರ್ಥ ಮಾಡಲಾಗುತ್ತಿದೆ. ಬಡವರು ಯಾವುದೇ ಆಹಾರ ಪದಾರ್ಥಗಳನ್ನು ಹಾಳು ಮಾಡುವುದಿಲ್ಲ. ಆದರೆ ಹೊಟ್ಟೆ ತುಂಬಿದವರು ಮಾತ್ರವೇ ಆಹಾರವನ್ನು ಹಾಳುಮಾಡುತ್ತಿದ್ದಾರೆ ಎಂದು ಹೇಳಿದರು.
ಅರಣ್ಯ ಸಚಿವ ರಮಾನಾಥ ರೈ ಅವರು ಮಾತನಾಡಿ, ಜುಲೈ ತಿಂಗಳ ಮೊದಲ ವಾರದಲ್ಲಿ 8 ಕೋಟಿ ವೃಕ್ಷ ಆಂದೋಲನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರು ಚಾಲನೆ ನೀಡಲಿದ್ದಾರೆ ಎಂದರು.
ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳದಿದ್ದರೆ, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಲು ಸಾಧ್ಯವಿಲ್ಲವೆಂದರು. ಸಚಿವರಾದ ರಾಮಲಿಂಗಾರೆಡ್ಡಿ, ರೋಷನ್ ಬೇಗ್, ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಸ್ವಾಗತಿಸಿದರು.
ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.

Comments are closed.