ಕರ್ನಾಟಕ

ಬಹಿರಂಗ ಚರ್ಚೆಗೆ ಬರುವಂತೆ ಯು.ಟಿ.ಖಾದರ್ ಗೆ ಎನ್.ಆರ್.ರಮೇಶ್ ಸವಾಲು

Pinterest LinkedIn Tumblr

rameshಬೆಂಗಳೂರು, ಮೇ 23-ರಾಜ್ಯ ಆರೋಗ್ಯ ಅಭಿಯಾನಕ್ಕೆ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಲಾಗಿರುವ ಅನುದಾನ ಬಳಕೆಯಲ್ಲಿ ಅಪಾರ ಪ್ರಮಾಣದ ವಂಚನೆ, ಭ್ರಷ್ಟಾಚಾರ ನಡೆದಿರುವುದು ದಾಖಲೆಯ ಸಮೇತ ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಆರೋಗ್ಯ ಸಚಿವ ಯು.ಟಿ.ಖಾದರ್ ಅವರಿಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆರೋಗ್ಯ ಇಲಾಖೆಯ ಔಷಧಿ ಖರೀದಿ ಮತ್ತು ಹೊರಗುತ್ತಿಗೆ ಸಿಬ್ಬಂದಿ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರ ಹಗರಣ ಸಂಬಂಧಿಸಿದಂತೆ ದಾಖಲೆಗಳ ಸಮೇತ ನಾನು ಆರೋಪ ಮಾಡಿದ್ದಕ್ಕೆ ನನ್ನ ಮಾನಸಿಕ ಸಾಮರ್ಥ್ಯದ ಬಗ್ಗೆ ಸಚಿವರು ಟೀಕೆ ಮಾಡಿದ್ದಾರೆ.

ಇಲಾಖೆಗೆ ಬಂದ ಅನುದಾನದ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವುದಕ್ಕಿಂತ 2 ವರ್ಷಗಳ ಅವಧಿಯಲ್ಲಿ ಖರೀದಿ ಮಾಡಿದ ಔಷಧಿಗಳು, ಅನುಷ್ಠಾನಗೊಂಡ ಕಾರ್ಯಕ್ರಮಗಳ ದಾಖಲೆಗಳೊಂದಿಗೆ ಬಹಿರಂಗ ಚರ್ಚೆ ನಡೆಸಲು ನಾನು ಸಿದ್ಧನಿದ್ದೇನೆ. ಇದಕ್ಕೆ ತಮಗೆ ಆಹ್ವಾನ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. ರಾಜ್ಯ ಆರೋಗ್ಯ ಅಭಿಯಾನ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯ ಅನುಷ್ಠಾನ ದೃಷ್ಟಿಯಿಂದ ಅವಶ್ಯವಿರುವ ತಜ್ಞ ವೈದ್ಯರು, ತಂತ್ರಜ್ಞರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಪ್ರಯೋಗಾಲಯ ಸಿಬ್ಬಂದಿ, ಅಧಿಕಾರಿಗಳು, ಎಂಜಿನಿಯರ್, ನರ್ಸ್‌ಗಳು ಸೇರಿದಂತೆ ಇತರೆ ನೌಕರರನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡಿರುವ ಬಗ್ಗೆ ದಾಖಲಾತಿ ಸೃಷ್ಟಿಸಿ ವಂಚನೆ ಮಾಡಿರುತ್ತಾರೆ.

ಪಾರದರ್ಶಕ ಕಾಯ್ದೆಯನ್ನು ಉಲ್ಲಂಘನೆ ಮಾಡಲಾಗಿದೆ. ಹತ್ತಾರು ಕೋಟಿ ರೂ.ಗಳನ್ನು ವೇತನದ ಹೆಸರಲ್ಲಿ ಗುಳುಂ ಮಾಡಲಾಗಿದೆ. ಇದರ ಬಗ್ಗೆ ತಾವು ಪರಿಶೀಲನೆ ಮಾಡಿಲ್ಲವೇ? ಆರೋಗ್ಯ ಯೋಜನೆಯಡಿಯಲ್ಲಿ ರೋಗಿಗಳಿಗೆ ನೀಡಲಾಗುತ್ತಿದೆ ಎಂದು ತಮ್ಮ ಇಲಾಖೆ ನೀಡಿರುವ ದಾಖಲೆಗಳಲ್ಲಿ ಔಷಧಿ ಸಾಮಗ್ರಿಗಳ ಮತ್ತು ಔಷಧಿ ಪೂರೈಕೆಗಳ ಅವ್ಯವಹಾರಗಳು ಸ್ಪಷ್ಟವಾಗಿರುತ್ತವೆ. ಒಮ್ಮೆಯಾದರೂ ಉನ್ನತ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿಲ್ಲ. ಔಷಧಿಗಳ ಗುಣಮಟ್ಟದ ಅರ್ಹತೆಯ ದೃಢೀಕರಣ ಪತ್ರ ತಮ್ಮ ಇಲಾಖಾ ಅಧಿಕಾರಿಗಳ ಬಳಿ ಇದೆಯೇ?

ಕರ್ನಾಟಕ ರಾಜ್ಯ ಡ್ರಗ್ಸ್ ಲಾಗಿಸ್ಟಿಕ್ಸ್ ಮತ್ತು ವೇರ್‌ಹೌಸಿಂಗ್ ಸೊಸೈಟಿಯ ಕಚೇರಿಯ ಒಳಗೆ ತಡರಾತ್ರಿವರೆಗೆ ನಡೆಯುವ ಕೆಲಸಗಳಾದರೂ ಏನು? ಆಸ್ಪತ್ರೆ ಮತ್ತು ಕಚೇರಿಯ ನವೀಕರಣ ಹಾಗೂ ಉನ್ನತೀಕರಣ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದ್ದರೂ, ತಪಾಸಣೆ ಮಾಡಿರುವ ಯಾವುದೇ ಉದಾಹರಣೆಗಳಿಲ್ಲ. ಆರೋಗ್ಯ ಸಚಿವರು ಈ ನಾಲ್ಕು ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಈ ಹಗರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳೊಂದಿಗೆ ಸಾರ್ವಜನಿಕವಾಗಿ ಬಹಿರಂಗ ಚರ್ಚೆಗೆ ಬರಬೇಕೆಂದು ರಮೇಶ್ ಅವರು ಸಚಿವರಿಗೆ ಸವಾಲು ಹಾಕಿದ್ದಾರೆ.

Comments are closed.