ಕರ್ನಾಟಕ

ರಾಜ್ಯಸಭೆಗೆ ಹೊರ ರಾಜ್ಯದವರನ್ನು ನೇಮಿಸುವ ಉದ್ದೇಶ ನಮಗಿಲ್ಲ : ಉಮಾಶ್ರೀ

Pinterest LinkedIn Tumblr

umasriಬೆಂಗಳೂರು,ಮೇ 23- ರಾಜ್ಯಸಭೆಗೆ ಹೊರ ರಾಜ್ಯದವರನ್ನು ನೇಮಿಸುವ ಉದ್ದೇಶ ನಮಗಿಲ್ಲ. ಅಂತಹ ಚಿಂತನೆ ನಡೆದಿಲ್ಲ. ನಮ್ಮಲ್ಲೇ ಸಾಕಷ್ಟು ಸೇವೆ ಸಲ್ಲಿಸುವವರು ಇದ್ದಾರೆ. ಈ ವಿಷಯದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಚಿವೆ ಉಮಾಶ್ರೀ ಇಂದಿಲ್ಲಿ ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ನಾಡು-ನುಡಿ ಸೇವೆಗೈದು ಹೋರಾಟ ಮಾಡಿದವರು, ಸಾಹಿತಿಗಳು ಸಾಕಷ್ಟು ಮಂದಿ ಇದ್ದಾರೆ. ರಾಜ್ಯಸಭೆಗೆ ಆಯ್ಕೆ ಮಾಡುವ ವಿಷಯದಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದರು.

ಬಿಜೆಪಿಗೆ ವೆಂಕಯ್ಯ ನಾಯ್ಡು ಅನಿವಾರ್ಯ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಬಿಎಂಟಿಸಿ ಬಸ್‌ನಲ್ಲಿ ಸಿಕ್ಕಿರುವ ಮೂರು ತಿಂಗಳ ಹೆಣ್ಣು ಮಗುವಿನ ರಕ್ಷಣೆಗೆ ಬದ್ಧ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಮಾಹಿತಿ ಪಡೆಯಲಾಗುತ್ತಿದೆ. ಮಗುವಿನ ಲಾಲನೆ-ಪಾಲನೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ನಿನ್ನೆ ನಗರದ ಬಿಎಂಟಿಸಿ ಬಸ್‌ನಲ್ಲಿ ಸಿಕ್ಕಿರುವ ಮಗುವಿನ ರಕ್ಷಣೆಗಾಗಿ ಎಲ್ಲಾ ರೀತಿಯ ಮಾಹಿತಿ ಪಡೆಯುತ್ತಿದ್ದೇವೆ ಎಂದರು.

ಖಾಸಗಿ ಶಾಲೆಗಳು ವೇಶ್ಯಾವಾಟಿಕೆಗಳಾಗಿವೆ ಎಂದು ಸಚಿವ ಆಂಜನೇಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಅವರು ಹೇಳಿರುವ ವಿಚಾರ ಸರಿಯಾಗಿದೆ. ಆದರೆ ಪದ ಬಳಕೆ ಸರಿಯಾಗಿಲ್ಲ. ಮಾಧ್ಯಮದಲ್ಲಿ ಅವರು ಮಾತನಾಡಿರುವುದನ್ನು ನೋಡಿದೆ. ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣ ನೀಡುವುದೇ ಮೂಲ ಉದ್ದೇಶವಿರಬೇಕು. ಲಾಭ ಮಾಡುವುದಲ್ಲ ಎಂದು ತಿಳಿಸಿದರು. ರಾಜಕಾರಣಿಗಳು ಮನುಷ್ಯರೇ. ಹಾಗಾಗಿ ಆಂಜನೇಯ ಅವರು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ ಎಂದು ಸಮರ್ಥನೆ ನೀಡಿದರು.

ಕೊಳದಮಠದ ಶ್ರೀ ಶಾಂತವೀರ ಸ್ವಾಮೀಜಿಯವರು, ಅನಂತಮೂರ್ತಿಯವರನ್ನು ಗುಂಡಿಟ್ಟು ಕೊಲ್ಲಬೇಕೆಂದು ನೀಡಿರುವ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ಅನಂತಮೂರ್ತಿಯವರು ಬದುಕಿಲ್ಲ. ಆದರೆ ಅವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಪಾರ ಕೊಡುಗೆ ನಮ್ಮ ಕಣ್ಣ ಮುಂದಿದೆ. ಈ ವಿಷಯ ಪ್ರಸ್ತಾಪಿಸುವುದು ಅಪ್ರಸ್ತುತ ಎಂದ ಅವರು, ಆ ರೀತಿ ಏಕೆ ಹೇಳಿದರೋ ತಿಳಿದಿಲ್ಲ ಎಂದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಲಿದೆ. ನಮ್ಮಲ್ಲೂ ಅನುಭವವಿರುವ ಸಾಕಷ್ಟು ಮಹಿಳೆಯರಿದ್ದಾರೆ ಎಂದು ಹೇಳಿದರು.

ಸಂಪುಟ ಪುನಾರಚನೆ ವಿಷಯ ಪ್ರಸ್ತಾಪಿಸಿದಾಗ ನಮಗೆ ಕೊಟ್ಟಿರುವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತೇವೆ. ಶೇ.98ರಷ್ಟು ಅನುದಾನವನ್ನು ಬಳಕೆ ಮಾಡಿ ಯೋಜನೆಗಳನ್ನು ಕಾರ್ಯಗತಗೊಳಿಸುತ್ತೇವೆ. ಪಕ್ಷದ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಿದ್ದೇವೆ. ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದು ನುಡಿದರು. ಇಲಾಖೆಯಲ್ಲಿ ಘೋಷಣೆಯಾದ ಯೋಜನೆಗಳು ಶೇ.95ರಷ್ಟು ಕಾರ್ಯಗತಗೊಂಡಿವೆ. ಕೆಲವು ಮಾತ್ರ ತಾಂತ್ರಿಕ ಕಾರಣಗಳಿಂದ ಪೂರ್ಣಗೊಂಡಿಲ್ಲ, ಜನರ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಹಾಜರಾತಿಯ ಕೊರತೆ ಇದೆ. ಅಂಗನವಾಡಿ ಶಾಲೆಗಳಿಂದ ಮಕ್ಕಳನ್ನು ನೇರವಾಗಿ ಒಂದನೇ ತರಗತಿಗೆ ಸೇರಿಸುವ ಚಿಂತನೆ ಇದೆ. ಶಿಕ್ಷಣ ಸಚಿವರ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ ಎಂದರು.

Comments are closed.