ಕರ್ನಾಟಕ

ರಸ್ತೆ ದುರಸ್ತಿಗೆ ಜಾರ್ಜ್ ಗಡುವು

Pinterest LinkedIn Tumblr

geoಬೆಂಗಳೂರು, ಮೇ ೨೩- ಮೈಸೂರು ರಸ್ತೆಯ ನಾಯಂಡನಹಳ್ಳಿಯಿಂದ ರಾಜರಾಜೇಶ್ವರಿ ನಗರ ಗೇಟ್‌ವರೆಗೆ ಹಾಳಾಗಿರುವ ರಸ್ತೆಯನ್ನು ಈ ತಿಂಗಳ ೩೧ ರೊಳಗೆ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು ಆದೇಶಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ರಸ್ತೆಯಲ್ಲಿನ ರಸ್ತೆ ಗುಂಡಿಗಳ ಬಗ್ಗೆ ವ್ಯಕ್ತಪಡಿಸಿದ ಅಸಮಾಧಾನ, ನಿನ್ನೆ ಪಂತರಪಾಳ್ಯದಲ್ಲಿ ನಡೆದ ಅಪಘಾತದಲ್ಲಿ ಬಾಲಕಿಯೊಬ್ಬಳ ಮೃತಪಟ್ಟ ಹಿನ್ನಲೆಯಲ್ಲಿ ಇಂದು ನಾಯಂಡನಹಳ್ಳಿ ರಸ್ತೆಗೆ ಭೇಟಿ ನೀಡಿದ ಸಚಿವರು, ರಸ್ತೆ ಗುಂಡಿಗಳ ಪರಿಶೀಲನೆ ನಡೆಸಿದರು.
ನಾಯಂಡನಹಳ್ಳಿ ರಸ್ತೆಯಲ್ಲಿ ಮೆಟ್ರೊ, ಜಲಮಂಡಳಿ ಇಲಾಖೆಗಳು ಕಾಮಗಾರಿಗಳನ್ನು ನಡೆಸಿದ್ದರಿಂದ ರಸ್ತೆ ಹಾಳಾಗಿದೆ. ವಾಹನಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಂಚಾರ ದಟ್ಟಣೆ ಕಂಡುಬರುತ್ತಿದ್ದು, ಕೂಡಲೇ ರಸ್ತೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮೈಸೂರು ರಸ್ತೆಯ ಗಾಳಿಆಂಜನೇಯ ಸ್ವಾಮಿ ದೇವಾಲಯದ ಸೇತುವೆಯನ್ನು ಎತ್ತರಿಸಬೇಕು.
ಇದರಿಂದ ಮಳೆ ನೀರು ಸರಾಗವಾಗಿ ಹರಿದುಹೋಗಲಿದೆ ಎಂದು ತಿಳಿಸಿದರು.
ದೇವಸ್ಥಾನದ ಸಮೀಪ ಸೇತುವೆ ನಿರ್ಮಾಣ ಸಂಬಂಧ ಒಂದು ಭಾಗ ಪೂರ್ಣಗೊಂಡಿದೆ. ಆದರೆ ಇನ್ನೊಂದು ಭಾಗದ ಕಾಮಗಾರಿ ನಿಧಾನಗತಿಯಲ್ಲಿ ನಡೆದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಫ್ರೀ ಕಾಸ್ಟ್ ಕಾಂಕ್ರೀಟ್ ಬ್ಲಾಕ್‌ಗಳನ್ನು ಅಳವಡಿಸುವ ಮೂಲಕ ಕಾಮಗಾರಿ ಪೂರ್ಣಗೊಳಿಸುವಂತೆ ಪ್ರದಾನ ಇಂಜಿನಿಯರ್ ಸಿದ್ದೇಗೌಡರವರಿಗೆ ಆದೇಶಿಸಿದರು.
ಬಿ.ಎಚ್.ಇ.ಎಲ್. ವೃತ್ತದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದ ಸಚಿವ ಜಾರ್ಜ್ ಆದಷ್ಟು ಕಾರ್ಮಿಕರು ಹಾಗೂ ಯಂತ್ರೋಪಕರಣಗಳನ್ನು ಬಳಸಿ ಮಳೆಗಾಲದ ವೇಳೆಗೆ ಸೇತುವೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮುಖ್ಯಮಂತ್ರಿಯವರ ಸೂಚನೆ ಹಾಗೂ ಬಾಲಕಿ ಮೃತಪಟ್ಟ ಹಿನ್ನಲೆಯಲ್ಲಿ ಇಲ್ಲಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿದ್ದೇನೆ. ರಸ್ತೆಯಲ್ಲಿ ನೀರು ನಿಂತು ಹಾಳಾಗಿದೆ ಎಂದು ಹೇಳಿದರು.
ನಗರದಲ್ಲಿ ವನಮಹೋತ್ಸವ ಸಂಬಂಧ ೨.೧೫ ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ತೋಟಗಾರಿಕೆ ಇಲಾಖೆ, ಬಿಡಿಎ, ಬಿಬಿಎಂಪಿ ಇಲಾಖೆಗಳಿಗೆ ಈ ಬಾರಿ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದರು.
ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಕಾರ್ ಪೂಲ್ ವ್ಯವಸ್ಥೆಯನ್ನು ಬಳಸುವಂತೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಸಾರ್ವಜನಿಕರು ಈ ವ್ಯವಸ್ಥೆಯನ್ನು ಹೆಚ್ಚು ಬಳಸಿಕೊಳ್ಳಬೇಕು ಎಂದರು.
ಮೇಯರ್ ಮಂಜುನಾಥ ರೆಡ್ಡಿ, ಆಡಳಿತ ಪಕ್ಷದ ನಾಯಕ ಆರ್.ಎಸ್. ಸತ್ಯನಾರಾಯಣ, ಜೆಡಿಎಸ್ ಗುಂಪಿನ ನಾಯಕ ಆನಂದ್, ಆಯುಕ್ತ ಮಂಜುನಾಥ ಪ್ರಸಾದ್, ಮತ್ತಿತರರು ಸಚಿವರ ಜೊತೆ ಹಾಜರಿದ್ದರು.

Comments are closed.