ಕರ್ನಾಟಕ

ಸಿದ್ದು – ಬಿಎಸ್‌ವೈ ಮಾತಿನ ಮುಕ್ತಾಫಲ

Pinterest LinkedIn Tumblr

siddu-bsy

ಮೈಸೂರು/ಹುಬ್ಬಳ್ಳಿ, ಮೇ ೨೩- ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ 2 ವರ್ಷಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ಅಧಿಕಾರ ಚುಕ್ಕಾಣಿ ಹಿ‌ಡಿಯುವ ಕುರಿತು ಪರಸ್ಪರ ವಾಕ್ಸಮರ ಆರಂಭವಾಗಿದೆ.
ರಾಜ್ಯದಲ್ಲಿ ಮುಂದಿನ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಅಲ್ಲದೇ, ಕಾಂಗ್ರೆಸ್ ಮುಕ್ತ ಭಾರತ ಮಾಡುವುದು ನಮ್ಮ ಗುರಿ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಹುಬ್ಬಳ್ಳಿಯಲ್ಲಿ ನೀಡಿರುವ ಹೇಳಿಕೆಗೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯವರು ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಮೈಸೂರಿನಲ್ಲಿ ತಿರುಗೇಟು ನೀಡಿದ್ದಾರೆ.
ಬಿಜೆಪಿ ನಾಯಕರು ಮುಂದಿನ ಬಾರಿ ನಾವೇ ಅಧಿಕಾರಕ್ಕೆ ಬರುವುದು ಎಂದು ರಾಜ್ಯಾದ್ಯಂತ ಬುರುಡೆ ಬಿಟ್ಟುಕೊಂಡು ತಿರುಗಾಡುತ್ತಿದ್ದಾರೆ. ಅಧಿಕಾರಕ್ಕೆ ಬರುತ್ತೇವೆ ಎನ್ನುವುದು ಬರೀ ಹಗಲುಗನಸು ಕಾಣಬೇಕು ಸಿದ್ದು ಎಂದು ಹೇಳಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನಾವೇ ಮತ್ತೊಂದು ಅವಧಿಗೂ ಸರ್ಕಾರ ರಚನೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯವರಿಗೆ ವಿರೋಧ ಪಕ್ಷದ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ. ಜೆಡಿಎಸ್ ಪಕ್ಷ ಆ ಸ್ಥಾನವನ್ನು ಪಡೆಯಿತು. ಬಿಜೆಪಿಯೊಂದಿಗೆ ಕೆಜೆಪಿ ವಿಲೀನವಾದ್ದರಿಂದ ಬಿಜೆಪಿಯವರಿಗೆ ವಿರೋಧ ಪಕ್ಷದ ಸ್ಥಾನ ಸಿಗುವಂತಾಯಿತು. ಹೀಗಿರುವಾಗ ರಾಜ್ಯದಲ್ಲಿ ಮುಂದಿನ ಬಾರಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಎಲ್ಲೆಡೆ ಬುರುಡೆ ಬಿಡುತ್ತಿದ್ದಾರೆ. ಅವರ ಹಗಲುಗನಸು ನನಸಾಗುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮುಕ್ತ ಅಸಾಧ್ಯ
ರಾಜ್ಯದಲ್ಲಿ ಇಲ್ಲವೆ ದೇಶದಲ್ಲಿ ಕಾಂಗ್ರೆಸ್ ಮುಕ್ತವನ್ನಾಗಿಸಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿಯವರು ಕಾಂಗ್ರೆಸ್ ಮುಕ್ತವನ್ನಾಗಿ ಮಾಡುತ್ತೇವೆ ಎಂದು ಎಲ್ಲೆಡೆ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅದು ಅವರಿಂದ ಸಾಧ್ಯವಿಲ್ಲ. ಕೆಲ ರಾಜ್ಯಗಳ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರಬಹುದು. ಆದರೆ ಸೂಕ್ತ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಪುಟಿದೇಳಲಿದೆ ಎಂದು
ಹೇಳಿದರು.
ಚುನಾವಣೆಗಳಲ್ಲಿ ಬಿಜೆಪಿ ನಾಯಕರು ಕೇವಲ ಪ್ರಚಾರಕ್ಕಾಗಿ ಕಾಂಗ್ರೆಸ್ ಮುಕ್ತವನ್ನಾಗಿ ಮಾಡುತ್ತೇವೆ ಎಂದು ಬೊಬ್ಬೆ ಹೊಡೆಯುತ್ತಾರೆ. ಇದು ಯಾವುದೇ ಕಾರಣಕ್ಕೂ ಅವರಿಂದ ಸಾಧ್ಯವಾಗುವುದಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಜೈಲಿಗೆ ಹೋಗಿಬಂದುದ್ದನ್ನು ರಾಜ್ಯದ ಜನ ಇನ್ನೂ ಮರೆತಿಲ್ಲ. ರಾಜ್ಯದ ಇತಿಹಾಸದಲ್ಲೇ ಅದೊಂದು ಕಪ್ಪುಚುಕ್ಕೆ. ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನೈತಿಕತೆ ಅವರಲ್ಲಿಲ್ಲ ಎಂದು ಕಿಡಿಕಾರಿದರು.
ಸಮರ್ಪಕ ಬಳಕೆ
ಕೇಂದ್ರದಿಂದ ಬಂದ ಅನುದಾನವನ್ನು ರಾಜ್ಯದಲ್ಲಿ ಸಮಪರ್ಕವಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಬೇರೆ ರಾಜ್ಯಕ್ಕೆ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ರಾಜ್ಯಕ್ಕೆ ಹೆಚ್ಚಿನ ಅನುದಾನ ತರುವಲ್ಲಿ ಬಿಜೆಪಿ ನಾಯಕರು ವಿಫಲರಾಗಿದ್ದಾರೆ. ಬರ ನಿರ್ವಹಣೆಯಲ್ಲಿ ಸರ್ಕಾರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದರೂ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

Comments are closed.