ಕರ್ನಾಟಕ

ಸಾವಿಗಂಜದೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಗೆದ್ದ ಅಂಜನಾ!

Pinterest LinkedIn Tumblr

3222

ಬೆಂಗಳೂರು: ತಾನು ಹೆಚ್ಚು ದಿನ ಬದುಕುವುದಿಲ್ಲ ಎಂಬ ಸತ್ಯ ಗೊತ್ತಿದ್ದರೂ ಆ ಕಣ್ಣುಗಳಲ್ಲಿ ಸಾವಿನ ಭಯವಿಲ್ಲ. ಓದಿ ಏನಾದರೂ ಸಾಧಿಸಬೇಕೆಂಬ ಛಲವೂ ಬತ್ತಿಲ್ಲ. ತುತ್ತು ಅನ್ನಕ್ಕಾಗಿ ನಿತ್ಯ ಮೈಮುರಿದು ದುಡಿಯುವ ತಾಯಿಗೆ ನೆರವಾಗಲು ಒಳ್ಳೆಯ ಉದ್ಯೋಗ ಹಿಡಿಯಬೇಕೆಂಬ ಆಕೆಯ ಕನಸಿಗೆ ಎಸ್ಸೆಸ್ಸೆಲ್ಸಿ ಸಾಧನೆ ನೀರೆರೆದಿದೆ.

ಇದು ಡಿಸ್ಲೆಕ್ಸಿಯಾ, ಡಯಾಬಿಟಿಕ್ ಮತ್ತು ಸ್ನಾಯುಕ್ಷಯ (ದೇಹ ನಿಶ್ಯಕ್ತಿ ಮತ್ತು ಸ್ನಾಯು ಸವೆಯುವಿಕೆ) ಎಂಬ ಕಾಯಿಲೆಯಿಂದ ಬಳಲುತ್ತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.72 ಅಂಕ ಗಳಿಸಿರುವ ಬೆಂಗಳೂರಿನ ಬ್ಲಾಸಂ ಶಾಲೆಯ ವಿದ್ಯಾರ್ಥಿನಿ ಬಿ.ಎನ್.ಅಂಜನಾ ಯಶೋಗಾಥೆ.

ಅಪರೂಪದ ರೋಗಕ್ಕೆ ತುತ್ತಾಗಿರುವ ಅಂಜನಾಳಿಗೆ ತಾನು ಹೆಚ್ಚು ದಿನ ಬದುಕುವುದಿಲ್ಲವೆಂಬ ಸತ್ಯ ತಿಳಿದಿದೆ. 5 ವರ್ಷದ ಹಿಂದೆ ಸಹೋದರ ಕೂಡ ಇದೇ ರೋಗಕ್ಕೆ ಬಲಿಯಾಗಿದ್ದರೂ ಈಕೆ ಎದೆ ಗುಂದಲಿಲ್ಲ. ಶಾಲೆಗೆ ಕಳುಹಿ ಸದಂತೆ ವೈದ್ಯರು ನೀಡಿರುವ ಎಚ್ಚರಿಕೆಯನ್ನೂ ನಿರ್ಲಕ್ಷಿಸಿ ಓದು ಮುಂದುವರಿಸಿರುವ ಅಂಜನಾ, ಸಾಧನೆಗೆ ರೋಗ ಅಡ್ಡಿಯಾಗದೆಂಬುದನ್ನು ನಿರೂಪಿಸಿದ್ದಾಳೆ.

ಚಿಕ್ಕವಯಸ್ಸಿನಲ್ಲೇ ತಂದೆಯನ್ನೂ ಕಳೆದುಕೊಂಡ ಅಂಜನಾ ವಿದ್ಯಾಭ್ಯಾಸಕ್ಕೆ ಬೆನ್ನೆಲುಬಾಗಿದ್ದು ತಾಯಿ. ಉಸಿರಾಟದ ತೊಂದರೆ ಎದುರಾಗುವ ಭೀತಿಯಲ್ಲಿ ವೈದ್ಯರು ಶಾಲೆಗೆ ಕಳುಹಿಸದಂತೆ ಹೇಳಿದ್ದರೂ ಮಗಳ ಕನಸಿಗೆ ಒತ್ತಾಸೆಯಾಗಿ ನಿಂತು ಶಿಕ್ಷಣ ದೊರಕಿಸಿಕೊಟ್ಟಿದ್ದಾರೆ. ಪ್ರತಿನಿತ್ಯ ಅಮ್ಮನ ಜತೆ ಸ್ಕೂಟರ್ನಲ್ಲಿ ಶಾಲೆಗೆ ತೆರಳುತ್ತಿದ್ದ ಅಂಜನಾಳನ್ನು ಆಕೆಯ ಸಹಪಾಠಿಗಳು ಹಾಗೂ ಶಿಕ್ಷಕರು ತರಗತಿಗೆ ಕರೆದೊಯ್ದು ಕೂರಿಸುತ್ತಿದ್ದರು. ಇಂತಹ ಕಷ್ಟವನ್ನೆಲ್ಲ ಮೀರಿ ವಿದ್ಯಾರ್ಥಿಯೊಬ್ಬರ ಸಹಾಯದಿಂದ ಪರೀಕ್ಷೆ ಬರೆದ ಅಂಜನಾ ಈಗ ಹೆಚ್ಚಿನ ಅಂಕ ಪಡೆಯುವ ಮೂಲಕ ತನ್ನಂತೆ ಅನಾರೋಗ್ಯದಿಂದ ಬಳಲುತ್ತಿರುವವರಿಗೂ ಮಾದರಿ ಆಗಿದ್ದಾಳೆ.

ನಾನು ಓದುವುದಕ್ಕೆ ಶಿಕ್ಷಕರು ಹಾಗೂ ತಾಯಿ ಬಹಳ ಸಹಕಾರ ನೀಡಿದ್ದಾರೆ. ಅಮ್ಮ ಟೇಲರ್ ಆಗಿರುವುದರಿಂದ ನಾನು ಮುಂದೆ ಫ್ಯಾಷನ್ ಡಿಸೈನ್ ತರಬೇತಿ ಪಡೆದು ಆ ಮೂಲಕ ಅಮ್ಮನ ಕೆಲಸಕ್ಕೆ ಸಹಾಯ ಮಾಡಬೇಕೆಂದುಕೊಂಡಿದ್ದೇನೆ. – ಅಂಜನಾ ವಿದ್ಯಾರ್ಥಿನಿ

Comments are closed.