ಕರ್ನಾಟಕ

ಮಗಳು ಓಡಿಹೋದಳು ಎಂದು ನೊಂದ ಪೋಷಕರು ವಿಷ ಸೇವಿಸಿ ಆತ್ಮಹತ್ಯೆ

Pinterest LinkedIn Tumblr

suicide

ಬೆಂಗಳೂರು: ಆ ತಂದೆ-ತಾಯಿಯಾದರೂ ಕ್ಷಣಕಾಲ ಯೋಚಿಸಬಹುದಿತ್ತು. ತಮ್ಮ ಮಗಳು ಎಲ್ಲೋ ಒಂದು ಕಡೆ ಚೆನ್ನಾಗಿ ಇರಲಿ ಎಂದು ಅಂದುಕೊಂಡಿದ್ದರೆ ಇಂತಹ ದುರ್ಗತಿ ಬರುತ್ತಿರಲಿಲ್ಲವೇನೋ. ಇವರಿಗೆ ಪ್ರತಿಷ್ಠೆಯೇ ಪ್ರಶ್ನೆಯಾಯಿತು. ಮಗಳಾದರೂ ಅಷ್ಟೇ. ಸಾಕಿ ಸಲಹಿದ ತಂದೆ-ತಾಯಿಗಳ ವಿರುದ್ಧವಾಗಿ ನಡೆದುಕೊಳ್ಳಬಾರದಿತ್ತು. ತನ್ನ ಪ್ರೀತಿ-ಪ್ರೇಮದ ಬಗ್ಗೆ ತಂದೆ-ತಾಯಿಯ ಮನವೊಲಿಸಿ ಅವರ ಮೂಲಕವೇ ತಾನು ಒಪ್ಪಿದ ಹುಡುಗನನ್ನು ವರಿಸಬಹುದಿತ್ತು. ಆದರೆ, ಹೇಳದೇ ಕೇಳದೆ ಅವನೊಂದಿಗೆ ಪರಾರಿಯಾದಳು. ಇದು ತಂದೆ-ತಾಯಿಯ ನಿದ್ದೆಗೆಡಿಸಿತು. ಈ ಪ್ರೇಮಿಗಳು ತಮ್ಮ ಬದುಕು- ಭವಿಷ್ಯದ ಬಗ್ಗೆ ಚಿಂತಿಸುವ ಸಾಮರ್ಥ್ಯ ಹೊಂದಿದ್ದರು.

ತಮ್ಮ ಬದುಕನ್ನು ರೂಪಿಸಿಕೊಳ್ಳುವಷ್ಟು ಶಕ್ತಿ ಅವರಲ್ಲಿತ್ತು. ಪಾಲಕರು ಇದನ್ನು ಯೋಚಿಸಬಹುದಿತ್ತು ಅಥವಾ ಅವರನ್ನು ಹುಡುಕಿ ಕರೆತಂದು ಬುದ್ಧಿ ಹೇಳಬಹುದಿತ್ತು. ತಮ್ಮ ಮಗಳ ಬದುಕನ್ನು ತಂದೆ-ತಾಯಿಗಳು ಹಸನು ಮಾಡಬಹುದಿತ್ತು. ಆದರೆ, ಇದ್ಯಾವುದನ್ನೂ ಮಾಡದ ಪೋಷಕರು ಮಗಳು ಪ್ರೇಮ ವಿವಾಹವಾಗಿರುವುದನ್ನು ತಿಳಿದು ವಿಷ ಸೇವಿಸಿ ಸಾವನ್ನಪ್ಪಿದರು. ಪೀಣ್ಯ ಬಳಿಯ ಶಿವಪುರದಲ್ಲಿ ಹಲವು ವರ್ಷಗಳಿಂದ ವಾಸವಿದ್ದ ರಶ್ಮಿ, ಪಕ್ಕದ ಮನೆಯಲ್ಲಿ ಬಾಡಿಗೆಗಿದ್ದ ಮಂಡ್ಯ ಮೂಲದ ಶ್ರೀಧರ್ ಜತೆ ಓಡಿ ಹೋಗಿದ್ದಳು ಎಂಬ ಸುದ್ದಿ ಹರಡಿತ್ತು. ರಶ್ಮಿ ನಾಪತ್ತೆಯಾಗಿರುವ ಬಗ್ಗೆ ದೂರು ಕೂಡ ದಾಖಲಾಗಿತ್ತು. ಮಗಳು ಪಕ್ಕದ ಮನೆಯವನೊಂದಿಗೆ ಓಡಿ ಹೋಗಿದ್ದಾಳೆ ಎಂಬುದನ್ನು ತಿಳಿದ ಪೋಷಕರಾದ ಮಣಿಕಾಂತ್ ಹಾಗೂ ಸುಜಾತಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಇವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೊದಲು ತಾಯಿ ಸಾವನ್ನಪ್ಪಿದ್ದು, ಅಂತ್ಯಕ್ರಿಯೆಗೆ ಮಗಳು ಬರಲಿಲ್ಲ. ನಂತರ ತಂದೆ ನಿನ್ನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕೊನೆಯ ಕ್ಷಣದವರೆಗೂ ಮಗಳು ಅಂತ್ಯಕ್ರಿಯೆಗೆ ಬರಲೇ ಇಲ್ಲ. ಸಂಬಂಧಿಕರು ಮಗಳಿಗೋಸ್ಕರ ಕಾದರು. ಕೊನೆಯ ಕ್ಷಣದಲ್ಲಿ ರಶ್ಮಿ ಪ್ರಿಯಕರ ಶ್ರೀಧರ್‌ನೊಂದಿಗೆ ಅಪ್ಪನ ಅಂತ್ಯಸಂಸ್ಕಾರಕ್ಕೆ ಚಾಮರಾಜಪೇಟೆಯಲ್ಲಿರುವ ರುದ್ರಭೂಮಿಗೆ ಬಂದಳು. ಅಲ್ಲಿ ಸೇರಿದ್ದವರ ಆಕ್ರೋಶದ ಕಟ್ಟೆಯೊಡೆಯಿತು. ತಂದೆ-ತಾಯಿಯ ಮಾತಿಗೆ ಬೆಲೆ ಕೊಡದೆ ಅವರನ್ನು ಬಲಿ ಪಡೆದ ನೀವು ಇಲ್ಲಿಗೇಕೆ ಬಂದಿರಿ ಎಂದು ಎಲ್ಲರೂ ಆಕೆಯ ವಿರುದ್ಧ ತಿರುಗಿ ಬಿದ್ದರು. ಕೊನೆಗೆ ಪೊಲೀಸರ ರಕ್ಷಣೆಯಲ್ಲಿ ಅಪ್ಪನ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮಾಧ್ಯಮಗಳೊಂದಿಗಾಗಲೀ, ಯಾರೊಂದಿಗಾಗಲೀ ಮಾತನಾಡದೆ ರಶ್ಮಿ ತನ್ನ ಪ್ರಿಯಕರನೊಂದಿಗೆ ಹಿಂದಿರುಗಿದಳು.

ದುಡುಕಿನ ನಿರ್ಧಾರದಿಂದ ಎರಡು ಜೀವಗಳು ಬಲಿಯಾದವು. ತನ್ನ ದುಡುಕಿನ ನಿರ್ಧಾರದಿಂದ ತಂದೆ-ತಾಯಿಯನ್ನು ಕಳೆದುಕೊಂಡು ರಶ್ಮಿ ಅನಾಥಳಾಗಬೇಕಾಯಿತು, ಸಮಾಜದ ನಿಂದನೆಗೆ ಗುರಿಯಾಗಬೇಕಾಯಿತು. ಪೋಷಕರ ಸಾವಿಗೆ ನಾನೇ ಕಾರಣ ಎಂಬ ಕೊರಗು ಜೀವನದುದ್ದಕ್ಕೂ ಆಕೆಗೆ ಕಾಡುವುದು ತಪ್ಪುವುದಿಲ್ಲ. ಕ್ಷಣಕಾಲ ಯೋಚಿಸಿದ್ದರೆ, ತಂದೆ-ತಾಯಿಯೊಂದಿಗೆ ಚರ್ಚಿಸಿದ್ದರೆ ಇಂತಹ ಸನ್ನಿವೇಶ ಎದುರಾಗುತ್ತಿರಲಿಲ್ಲವೇನೋ. ಪೋಷಕರೂ ಕೂಡ ತಮ್ಮ ಮಕ್ಕಳನ್ನು ಸ್ನೇಹಿತರಂತೆ ಬೆಳೆಸಬೇಕಾಗಿದೆ. ಎಚ್ಚರಿಕೆಯ ಪಾತ್ರ ವಹಿಸಬೇಕು. ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ರಶ್ಮಿ ಮತ್ತು ಶ್ರೀಧರ್ ಪ್ರೀತಿಗೆ ರಶ್ಮಿ ಪೋಷಕರು ಒಪ್ಪಿರಲಿಲ್ಲ. ಮೇ 13ರ ಹುಟ್ಟುಹಬ್ಬದಂದೇ ಮದುವೆಯಾಗುವ ನಿರ್ಧಾರ ಕೈಗೊಂಡು ಇಬ್ಬರೂ ಮನೆ ಬಿಟ್ಟು ಹೋಗಿದ್ದಾರೆ.

ಇಲ್ಲಿ ಜಾತಿ ಅಡ್ಡಬಂದಿದೆ. ಮಗಳು ರಶ್ನಿ ಅನಾಥಳಾಗಿದ್ದಾಳೆ. ಈಗ ಪತಿ ಶ್ರೀಧರ್ ಮಾತ್ರ ಅವಳಿಗೆ ಆಸರೆಯಾಗಿದ್ದಾನೆ. ಮಕ್ಕಳು ತಂದೆ-ತಾಯಿಯ ಮಾತು ಕೇಳಬೇಕು ಎಂಬುದಕ್ಕೆ ಈ ಘಟನೆ ಒಂದು ನಿದರ್ಶನವಾಗಿದೆ. ಪೋಷಕರನ್ನು ಕಳೆದುಕೊಂಡು ಯಾವ ಸುಖ ಪಡೆಯುತ್ತಾಳೋ ಎಂದು ಅಂತ್ಯಸಂಸ್ಕಾರ ಸಂದರ್ಭದಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದದ್ದು ಸ್ಮಶಾನದಲ್ಲಿ ಕೇಳಿ ಬಂತು. ಇದು ರಶ್ಮಿ ಕಿವಿಗೂ ಬಿತ್ತು.

Comments are closed.