ಕರ್ನಾಟಕ

ರಿಂಗಿಂಗ್ ಬೆಲ್ಸ್ ಆಯ್ತು… ಈಗ 99 ರೂ.ಗೆ ನಮೋಟೆಲ್ ಸ್ಮಾರ್ಟ್ ಫೋನ್ !

Pinterest LinkedIn Tumblr

smartphone

ಬೆಂಗಳೂರು: ದೆಹಲಿ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿ ಐದು ನೂರು ರೂಗೆ ಸ್ಮಾರ್ಟ್ ಫೋನ್ ಕೊಡುವುದಾಗಿ ಆನ್‌ಲೈನ್‌ನಲ್ಲಿ ಕೋಟ್ಯಂತರ ರೂ. ಸಂಗ್ರಹಿಸಿ, ಜನರ ಕೈಗಿನ್ನೂ ಮೊಬೈಲ್ ನೀಡದೆ ಇರುವ ಪ್ರಸಂಗ ನಮ್ಮ ಕಣ್ಣ ಮುಂದಿರುವಾಗಲೇ ‘ನಮೋಟೆಲ್’ ಎಂಬ ಸಂಸ್ಥೆಯೊಂದು ಕೇವಲ ೯೯ ರೂ.ಗೆ ಸ್ಮಾರ್ಟ್‌ಫೋನ್ ಕೊಡುವುದಾಗಿ ಘೋಷಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಮೋಟೆಲ್‌ನ ವ್ಯವಸ್ಥಾಪಕ ಮಾಧವರೆಡ್ಡಿ, ನಮ್ಮ ಕಂಪನಿ ಬಿಮೈಬ್ಯಾಂಕರ್ ಡಾಟ್ ಕಾಂನೊಂದಿಗೆ ಸಹಭಾಗಿತ್ವ ಹೊಂದಿದ್ದು, ಮೊಬೈಲ್ ಬೇಕಾದವರು ಮೊದಲು ಬಿಮೈಬ್ಯಾಂಕರ್ ಡಾಟ್ ಕಾಂನಲ್ಲಿ ಲಾಗಿನ್ ಆಗಿ 199 ರೂ. ನೋಂದಣಿ ಶುಲ್ಕ ಪಾವತಿಸಬೇಕು. ಇದರ ಜತೆಗೆ ಭಾವಚಿತ್ರ ಮತ್ತು ಆಧಾರ್ ಕಾರ್ಡ್‌ನ್ನು ಅಪ್‌ಲೋಡ್ ಮಾಡಬೇಕು. ಹೀಗೆ ಬಿಮೈಬ್ಯಾಂಕರ್‌ನಲ್ಲಿ ಸದಸ್ಯತ್ವ ಪಡೆದ ನಂತರ ನಾಮ್‌ಟೆಲ್‌ನ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಸಿಗುತ್ತದೆ. ಆ ನಂತರ 99 ರೂ ಪಾವತಿಸಿ ಬುಕ್ ಮಾಡಿದರೆ 45 ದಿನಕ್ಕೆ ಮೊಬೈಲ್‌ನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಹೇಳಿದರು.

ಈ ಹಿಂದೆ 500 ರೂ.ಗೆ ಮೊಬೈಲ್ ಕೊಡುತ್ತೇವೆಂದ ಸಂಸ್ಥೆಯೇ ಅವಧಿ ಮುಗಿದರೂ ಇನ್ನೂ ಗ್ರಾಹಕರಿಗೆ ಮೊಬೈಲ್ ತಲುಪಿಸಿಲ್ಲ. ಇನ್ನು ೯೯ರೂ.ಗೇ ನೀವು ಅದೇಗೆ ಮೊಬೈಲ್ ನೀಡಲು ಸಾಧ್ಯ ಎಂದು ಪ್ರಶ್ನಿಸಿದ್ದಕ್ಕೆ ನಮ್ಮದು ಗ್ಯಾರಂಟಿ ವ್ಯವಹಾರ ಎಂದರು.

ಗ್ರಾಯಕರು ಯಾವ ಗ್ಯಾರಂಟಿ ಮೇಲೆ ನಿಮಗೆ ಆನ್‌ಲೈನ್‌ನಲ್ಲಿ ಹಣ ತುಂಬಬೇಕು? ಎಂದು ಪ್ರಶ್ನಿಸಿದ್ದಕ್ಕೆ ನಾನು ರೈತ ಕುಟುಂಬದಿಂದ ಬಂದವನು. ಹಲವಾರು ಖಾಸಗಿ ಬ್ಯಾಂಕ್‌ಗಳಲ್ಲಿ ಕಾರ್ಯ ನಿರ್ವಹಿಸಿ, ಜನರಿಗೆ ಏನಾದರೂ ಒಳ್ಳೆಯ ಸೇವೆ(?) ಮಾಡಬೇಕೆಂದು ಅಗ್ಗದ(ಪ್ರೆಸ್ ರಿಲೀಸ್‌ನಲ್ಲಿ ಹಗ್ಗದ ಬೆಲೆ ಎಂದಿದೆ) ದರಕ್ಕೆ ಮೊಬೈಲ್ ನೀಡಲು ಮುಂದಾಗಿರುವುದಾಗಿ ಹೇಳಿಕೊಂಡರು.

ಎಷ್ಟು ಮೊಬೈಲ್ ಸೇಲ್ ಮಾಡುವ ಗುರಿ ಹೊಂದಿದ್ದೀರಿ ಎಂದಿದಕ್ಕೆ ಪ್ರಸ್ತುತ ಕರ್ನಾಟಕದಲ್ಲಿ ಮಾತ್ರ ಮಾರಾಟ ಮಾಡಲು ನಿರ್ಧರಿಸಿದ್ದು, 25ರಿಂದ 30 ಲಕ್ಷ ಮಾರಾಟ ಗುರಿಹೊಂದಲಾಗಿದೆ. ನಂತರ ದಕ್ಷಿಣ ಭಾರತ ನಮ್ಮ ಗುರಿ ಎಂದು ಹೇಳಿಕೊಂಡರು.

ಆನ್‌ಲೈನ್ ಬುಕ್ಕಿಂಗ್ ಎಲ್ಲ ಯಾಕೆ? ಬಿಮೈಬ್ಯಾಂಕರ್ ಡಾಟ್ ಕಾಂನ 199 ರೂ. ಮತ್ತು ಭಾವಚಿತ್ರ, ಆಧಾರ್ ಕಾರ್ಡ್ ಪಡೆದು ನಮೋಟೆಲ್‌ನ 99ರೂ. ಪಡೆದು ಇಲ್ಲೇ ಮೊಬೈಲ್ ನೀಡಬಹುದಲ್ಲಾ ಎಂಬ ಪ್ರಶ್ನೆಗೆ ಅದು ಹಾಗಾಗುವುದಿಲ್ಲ. ಅದಕ್ಕೆ ಕೆಲವು ಸರ್ಕಾರದ ನಿಬಂಧನೆಗಳಿವೆ ಎಂದು ಹೇಳಿ ಮಾಧವ ರೆಡ್ಡಿ ಜಾರಿಕೊಂಡರು.

ರಾಜ್ಯದಲ್ಲಿ ಇಲ್ಲಿ ತನಕ ಚೀಟಿ, ಗಿಫ್ಟ್ ಪರಿಕರಗಳು, ಲೇವಾದೇವಿ, ಉಳಿತಾಯದ ಹೆಸರಿನಲ್ಲಿ ಅನೇಕ ಬ್ಲೇಡ್ ಕಂಪನಿಗಳು ಕೋಟಿ ಕೋಟಿ ವಂಚಿಸಿ ಮಾಯವಾಗಿರುವುದನ್ನು ಕಂಡಿದ್ದೇವೆ. ಇತ್ತೀಚೆಗೆ ದೆಹಲಿ ಮತ್ತು ಜೈಪುರದ ಸಂಸ್ಥೆಗಳು ಅಗ್ಗದ ಬೆಲೆಗೆ ಮೊಬೈಲ್ ನೀಡುವುದಾಗಿ ಹಣ ಪಡೆದರೂ ಇನ್ನೂ ನೀಡಿಲ್ಲ. ಆದರೆ ವಿಷಯ ಹೀಗಿರುವಾಗಲೇ ನಮೋಟೆಲ್ ಮೊಬೈಲ್ ಸಂಸ್ಥೆ ಯಾವ ರೀತಿ ಮೊಬೈಲ್ ನೀಡುತ್ತದೆ ಎಂಬುದು ಜನರ ಪ್ರಶ್ನೆ.

Comments are closed.