ಕರ್ನಾಟಕ

ಪಾವಗಡ ಸೋಲಾರ್ ಪಾರ್ಕ್ ವಿದ್ಯುತ್ ಖರೀದಿ ಒಪ್ಪಂದ

Pinterest LinkedIn Tumblr

dks

ಬೆಂಗಳೂರು: ಜಗತ್ತಿನ ಅತ್ಯಂತ ದೊಡ್ಡ ಸೋಲಾರ್ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪಾವಗಢದ ಸೋಲಾರ್ ಪಾರ್ಕ್ ಸೋಲಾರ್ ವಿದ್ಯುತ್ ಉತ್ಪಾದನಾ ಪಾರ್ಕ್‌ನ ವಿದ್ಯುತ್ ಖರೀದಿ ಒಪ್ಪಂದಕ್ಕೆ ಇಂದು ರಾಜ್ಯದ ಐದು ಎಸ್ಕಾಂಗಳು ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್‌ಟಿಪಿಸಿ ಜೊತೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದವು.

ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ರಾಜ್ಯದ ೫ ವಿದ್ಯುತ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರು ಎನ್‌ಟಿಪಿಸಿಯ ಪ್ರಾದೇಶಿಕ ನಿರ್ದೇಶಕ ಫರ್ನಾಂಡಿಸ್‌ರವರ ಜೊತೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.

ಪಾವಗಢದಲ್ಲಿ ೧೨ ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಸೋಲಾರ್ ಪಾರ್ಕ್‌ನಲ್ಲಿ ಒಟ್ಟು ೨ ಸಾವಿರ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ಮೊದಲ ಹಂತವಾಗಿ ೫೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಎನ್‌ಟಿಪಿಸಿ ಕೈಗೆತ್ತಿಕೊಳ್ಳಲಿದ್ದು, ಈ ವಿದ್ಯುತ್ ಖರೀದಿಗೆ ಇಂದು ಸಹಿ ಹಾಕಲಾಯಿತು.

೬ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಗುರಿ
ಇದೇ ಸಂದರ್ಭದಲ್ಲಿ ಮಾತನಾಡಿದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಇಂದು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ ಜಗತ್ತಿನಲ್ಲೇ ಅತ್ಯಂತ ದೊಡ್ಡದಾದ ಸೋಲಾರ್ ಪವರ್ ಪಾರ್ಕ್‌ನ್ನು ರಾಜ್ಯದಲ್ಲಿ ಆರಂಭಿಸುತ್ತಿದೆ. ಮೊದಲ ಹಂತದ ೫೦೦ ಮೆಗಾವ್ಯಾಟ್ ವಿದ್ಯುತ್‌ನ್ನು ಎನ್‌ಟಿಪಿಸಿ ಈ ವರ್ಷದ ಕೊನೆಗೆ ರಾಜ್ಯಕ್ಕೆ ನೀಡಲಿದ್ದು, ಈ ಪಾರ್ಕ್‌ನಿಂದ ೨೦೧೮ರ ವೇಳೆಗೆ ಸಂಪೂರ್ಣ ವಿದ್ಯುತ್ ಉತ್ಪಾದನೆ ಆಗಲಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಳೆದ ಮೂರು ವರ್ಷಗಳಲ್ಲಿ ಸುಮಾರು ೫,೨೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಯೋಜನೆಗಳಿಗೆ ಸಹಿ ಹಾಕಲಾಗಿದೆ. ೨೦೨೨ರ ವೇಳೆಗೆ ಒಟ್ಟು ೬ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು

ರಾಜ್ಯದ ಈ ಎಲ್ಲಾ ವಿದ್ಯುತ್ ಯೋಜನೆಗಳು ಅನುಷ್ಠಾನಗೊಂಡರೆ ರಾಜ್ಯದ ವಿದ್ಯುತ್ ಸಮಸ್ಯೆ ತೀರಲಿದೆ ಎಂದು ಅವರು ಹೇಳಿದರು.

ಪ್ರತಿ ಯುನಿಟ್‌ಗೆ ೩.೩೦ ಪೈಸೆ
ಇಂದು ಎನ್‌ಟಿಪಿಸಿ ಜೊತೆ ಸಹಿ ಹಾಕಲಾದ ವಿದ್ಯುತ್ ಖರೀದಿ ಒಪ್ಪಂದದ ಪ್ರಕಾರ ಈ ಸೋಲಾರ್ ಪಾರ್ಕ್‌ನಿಂದ ಎನ್‌ಟಿಪಿಸಿ ಮುಂದಿನ ೨೫ ವರ್ಷಗಳ ಕಾಲ ಪ್ರತಿ ಯುನಿಟ್‌ಗೆ ೩.೩೦ ಪೈಸೆ ದರದಲ್ಲಿ ವಿದ್ಯುತ್ ಒದಗಿಸಲಿದೆ ಎಂದರು.

ಈ ಯೋಜನೆಯನ್ನೂ ಸಾಕಾರಗೊಳಿಸಲು ಕಾರಣರಾದ ಕೇಂದ್ರ ಇಂಧನ ಸಚಿವ ಪಿ.ಎಸ್. ಗೋಯಲ್, ಎನ್‌ಟಿಪಿಸಿಯ ಅಧ್ಯಕ್ಷ ತ್ರಿಪಾಠಿ ಇವರಿಗೆ ಧನ್ಯವಾದ ಹೇಳಿದ ಸಚಿವ ಡಿ.ಕೆ. ಶಿವಕುಮಾರ್ , ಕೇಂದ್ರ ಹಾಗೂ ರಾಜ್ಯದ ನಡುವೆ ಇದೊಂದು ಮಹಾ ಘಟಬಂಧನ ಎಂದು ವ್ಯಾಖ್ಯಾನಿಸಿದರು.

ಈ ಸೋಲಾರ್ ಪಾರ್ಕ್ ನಿರ್ವಹಣೆಗೆ ಅಗತ್ಯವಾದ ೧೨ ಸಾವಿರ ಎಕರೆ ಭೂಮಿಯಲ್ಲಿ ೯ ಸಾವಿರ ಎಕರೆ ಭೂಮಿ ಈಗಾಗಲೇ ಸರ್ಕಾರದ ಸ್ವಾಧೀನದಲ್ಲಿದ್ದು, ರೈತರಿಂದ ಗುತ್ತಿಗೆಯಾಧಾರದ ಮೇಲೆ ಭೂಮಿಯನ್ನು ಪಡೆಯಲಾಗಿದೆ. ಪ್ರತಿ ವರ್ಷ ಪ್ರತಿ ಎಕರೆಗೆ ರೈತರಿಗೆ ೨೧ ಸಾವಿರ ರೂ.ಗಳನ್ನು ನೀಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷ ಶೇ. ೫ ರಷ್ಟು ಗುತ್ತಿಗೆ ಹಣವನ್ನು ಏರಿಕೆ ಮಾಡಲಾಗುವುದು ಎಂದರು.

ಕೇಂದ್ರದಿಂದ ೪೦೦ ಕೋಟಿ
ಈ ಯೋಜನೆಗೆ ಕೇಂದ್ರ ಸರ್ಕಾರ ೪೦೦ ಕೋಟಿ ರೂ.ಗಳ ವಿಶೇಷ ಅನುದಾನವನ್ನು ಒದಗಿಸಿದೆ. ಸದ್ಯದಲ್ಲೇ ಯೋಜನೆಯನ್ನು ಉದ್ಘಾಟಿಸಲಾಗುತ್ತಿದ್ದು, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ದಿನಾಂಕ ನಿಗದಿ ಮಾಡುವಂತೆ ಕೇಳಲಾಗಿದೆ ಎಂದರು.

ಈ ಯೋಜನೆಗೆ ಅವಕಾಶ ನೀಡಿದ ಪಾವಗಢದ ರೈತರಿಗೆ ಧನ್ಯವಾದಗಳನ್ನು ಹೇಳಿದ ಡಿ.ಕೆ. ಶಿವಕುಮಾರ್, ರಾಜ್ಯದ ೬೦ ತಾಲ್ಲೂಕುಗಳಲ್ಲಿ ೨೦ ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಉತ್ಪಾದನಾ ಘಟಕಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನ್ನು ಆಯಾ ತಾಲ್ಲೂಕುಗಳಿಗೆ ವಿತರಿಸಲಾಗುವುದು. ಇದರಿಂದ ಸಾಗಾಣಿಕಾ ನಷ್ಟ ಕಡಿಮೆಯಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎನ್‌ಟಿಪಿಸಿಯ ಪ್ರಾದೇಶಿಕ ನಿರ್ದೇಶಕ ಫರ್ನಾಂಡಿಸ್, ರಾಜ್ಯ ಸರ್ಕಾರದ ಇಂಧನ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರವಿಕುಮಾರ್, ಕೆಪಿಟಿಸಿಎಲ್ ಎಂಡಿ ಜಾವೇದ್ ಅಖ್ತರ್ ಸೇರಿದಂತೆ ಎಲ್ಲ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.

Comments are closed.