ಕರ್ನಾಟಕ

ನಿರ್ಲಕ್ಷ ಅಧಿಕಾರಿಗಳಿಗೆ ಸಿಎಂ ಚಾಟಿ !

Pinterest LinkedIn Tumblr

siddu

ಬೆಂಗಳೂರು: ಬರ ಪರಿಸ್ಥಿತಿ ನಿಭಾಯಿಸಲು ಆದ್ಯತೆ, ಜನಪರ ಯೋಜನೆಗಳ ಅನುಷ್ಠಾನ ವಿಚಾರದಲ್ಲಿ ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆ ಅನುಸರಿಸುತ್ತಿರುವ ಉನ್ನತ ಅಧಿಕಾರಿಗಳನ್ನು ಇಂದಿಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದೇ ಧೋರಣೆಯನ್ನು ಮುಂದುವರೆಸಿದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, ಜನಪರ ಧೋರಣೆ ಮೂಲಕ ಸಮರ್ಪಣಾ ಭಾವದಿಂದ ಕೆಲಸ ಮಾಡದ ಅಧಿಕಾರಿಗಳನ್ನು ಸಹಿಸಲಾಗದು. ತಮ್ಮ ಧೋರಣೆ ಬದಲಿಸಿಕೊಳ್ಳದಿದ್ದಲ್ಲಿ ಶಿಸ್ತು ಕ್ರಮ ಎದುರಿಸಬೇಕಾದೀತು ಎಂದು ಖಡಕ್ ಆಗಿ ಹೇಳಿದರು.

ರಾಜ್ಯದಲ್ಲಿ ಹಿಂದೆಂದೂ ಕಾಣದ ಬರ ಪರಿಸ್ಥಿತಿ ಎದುರಾಗಿದ್ದು, ಪರಿಹಾರ ಕಾಮಗಾರಿಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಬಜೆಟ್‌ನಲ್ಲಿ ರೂಪಿಸಿರುವ ಜನಪರ ಯೋಜನೆಗಳ ಲಾಭ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತಾಗಬೇಕು. ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗಳಿಗೆ ಬಂದು ನಿಗದಿತ ಸಮಯದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಬೇಕು ಎಂದು ಅವರು ತಾಕೀತು ಮಾಡಿದರು.

2015-16ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವ ಯೋಜನೆಗಳ ಅನುಷ್ಠಾನದಲ್ಲಾಗಿರುವ ಪ್ರಗತಿ, 2016-17ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವ ಜನಪರ ಯೋಜನೆಗಳ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳ ಮಾಹಿತಿಯನ್ನು ಅವರು ಇದೇ ಸಂದರ್ಭದಲ್ಲಿ ಪಡೆದುಕೊಂಡರು.

ಕಾಲಮಿತಿ ಅಗತ್ಯ
ಪ್ರಮುಖ ಯೋಜನೆಗಳನ್ನು ಕಾಲ ಮಿತಿಯಲ್ಲಿ ಅನುಷ್ಠಾನಕ್ಕೆ ತರಲು ಅಧಿಕಾರಿಗಳು ಶ್ರಮಿಸಬೇಕು. ಯೋಜನೆಗಳಿಗೆ ಮೀಸಲಾದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ಅವರು ಹೇಳಿದರು.

ಕಡತಗಳ ವಿಲೇವಾರಿ ವಿಚಾರದಲ್ಲಿ ವಿಳಂಬ ಸಲ್ಲದು. ಯಾವುದೇ ಪ್ರಮುಖ ಕಡತಗಳ ವಿಲೇವಾರಿಯಲ್ಲಿ ವಿಳಂಬವಾದರೆ ಆಯಾ ಇಲಾಖೆಗಳ ಕಾರ್ಯದರ್ಶಿಗಳೆ ನೇರ ಹೊಣೆ ಹೊರಬೇಕಾದೀತು ಎಂದು ಅವರು ಎಚ್ಚರಿಸಿದರು.

ಅಧಿಕಾರಿಗಳು ಜನಪರ ಧೋರಣೆಯನ್ನು ಅನುಸರಿಸಿದಾಗ ಮಾತ್ರ ಅವರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಜನರಲ್ಲೂ ಧನ್ಯತಾ ಭಾವ ಮೂಡಲಿದೆ ಎಂದು ಹೇಳುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಅಧಿಕಾರಿಗಳಿಂದ ಆಗಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಕೆಲವೆಡೆ ಮಳೆಯಾಗುತ್ತಿದ್ದು, ರೈತರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಲು ಅಧಿಕಾರಿಗಳು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಮಳೆಯಿಂದಾಗುವ ಹಾನಿಗೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಅರವಿಂದ ಜಾದವ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲತಾಕೃಷ್ಣರಾವ್ ಸೇರಿದಂತೆ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.

Write A Comment