
ಬೆಂಗಳೂರು: ನಗರದ ಪ್ರಮುಖ ಮೇಲ್ಸೇತುವೆ ಮತ್ತು ಎಲಿವೇಟೆಡ್ (ಎತ್ತರಿಸಿದ) ರಸ್ತೆಗಳಲ್ಲಿ ನಿಧಾನಗತಿಯ ವಾಹನಗಳಿಗೆ ನಿಷೇಧ ಹೇರುವ ಬಗ್ಗೆ ನಗರ ಸಂಚಾರ ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ.
ವಾಹನಗಳು ನಿಯಮ ಉಲ್ಲಂಘಿಸದೆ ಲೇನ್ ಶಿಸ್ತು ಪಾಲಿಸಲು ಈ ನಿರ್ಧಾರ ಸಹಕಾರಿಯಾಗಲಿದೆ ಎಂಬುದು ಪೊಲೀಸರ ಅಭಿಪ್ರಾಯವಾಗಿದೆ.
“ಮೇಲ್ಸೇತುವೆ ಮತ್ತು ಎಲಿವೇಟೆಡ್ ರಸ್ತೆಗಳಲ್ಲಿ ಲಾರಿಗಳು ಮತ್ತು ಟ್ರ್ಯಾಕ್ಟರ್‌ಗಳು ನಿಧಾನವಾಗಿ ಸಂಚರಿಸುವುದರಿಂದ ಇತರ ವಾಹನಗಳಿಗೆ ತೊಂದರೆಯಾಗುತ್ತವೆ. ಇದರಿಂದ ಫ್ಲೈಓವರ್‌ಗಳಲ್ಲಿ ಸಂಚಾರ ವಾಹನಗಳ ಸಂಚಾರ ನಿಧಾನವಾಗುತ್ತವೆ. ಆದ್ದರಿಂದ ಇಂತಹ ನಿಧಾನಗತಿಯ ವಾಹನಗಳು ಕೆಳ ರಸ್ತೆಯನ್ನು ಬಳಸಬೇಕು ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಹೇಳುತ್ತಾರೆ.
ಬೆಳಗ್ಗಿನ ಮತ್ತು ಸಂಜೆಯ ಸಂಚಾರ ದಟ್ಟಣೆ ಸಂದರ್ಭದಲ್ಲಿ ಪ್ರಯಾಣ ಅವಧಿಯನ್ನು ತಗ್ಗಿಸಲು ಈ ನಿರ್ಧಾರ ಸಹಾಯಕವಾಗಲಿದೆ ಎಂದು ಅವರು ಹೇಳಿದ್ದಾರೆ.
ಸಾರಿಗೆ ಇಲಾಖೆಯ ಪ್ರಕಾರ, ನಗರದಲ್ಲಿ ೧.೪ ಲಕ್ಷ ನಿಧಾನಗತಿಯ ವಾಹನಗಳು ನೋಂದಣಿಯಾಗಿವೆ. ಇದರಲ್ಲಿ ಟ್ರ್ಯಾಕ್ಟರ್, ಲಾರಿ, ಟ್ರಕ್, ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಕೊಂಡೊಯ್ಯುವ ವಾಹನಗಳು, ಬಹು ಆಕ್ಸೆಲ್ ವಾಹನಗಳು ಸೇರಿವೆ.
ಎಡ ಭಾಗದಲ್ಲಿರುವ ವೇಗದಲ್ಲಿ ಸಂಚರಿಸುವ ಲೇನ್ ಅನ್ನು ಈ ವಾಹನಗಳು ಆಕ್ರಮಿಸಿಕೊಂಡಿರುತ್ತವೆ. ಈ ವಾಹನಗಳನ್ನು ಹಿಂದಿಕ್ಕಲು ಇತರ ಸಣ್ಣ ಮತ್ತು ವೇಗವಾಗಿ ಸಂಚರಿಸುವ ವಾಹನಗಳು ನಿಯಮ ಉಲ್ಲಂಘಿಸಬೇಕಾಗುತ್ತದೆ. ಇದರಿಂದ ಈ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ವಿಮಾಣ ನಿಲ್ದಾಣಕ್ಕೆ ಹೋಗುವಾಗ ಲಾರಿಗಳಿಂದಾಗಿ ಸಾಕಷ್ಟು ತೊಂದರೆಯಾಗುತ್ತಿದೆ. ವೇಗವಾಗಿ ಬರುವ ಕ್ಯಾಬ್‌ಗಳು ಈ ಲಾರಿಗಳ ಕಾಟದಿಂದ ನಿಧಾನವಾಗಿ ಮತ್ತು ನಿಯಮ ಉಲ್ಲಂಘಿಸಿ ಹೋಗಬೇಕಾಗುತ್ತದೆ. ಲಾರಿಗಳು ನಿಧಾನಗತಿಯ ಲೇನ್‌ನಲ್ಲಿ ಹೋಗದೆ ವೇಗವಾಗಿ ಹೋಗುವ ಲೇನ್‌ನಲ್ಲಿ ಸಂಚರಿಸುತ್ತವೆ ಎಂದು ಸಾಫ್ಟ್‌ವೇರ್ ಇಂಜಿನಿಯರ್ ಕೌಶಿಕ್ ಮುಖರ್ಜಿ ಹೇಳುತ್ತಾರೆ.
ಲೇನ್ ಶಿಸ್ತು ಉಲ್ಲಂಘನೆ; ಪೊಲೀಸರ ಕಣ್ಗಾವಲು
ನಿರಂತರವಾಗಿ ಸಂಚಾರ ಲೇನ್ ಶಿಸ್ತು ಉಲ್ಲಂಘನೆ ಮಾಡುವವರು ಇನ್ನು ಮುಂದೆ ಸಂಚಾರ ಪೊಲೀಸರ ಕಣ್ಗಾವಲಿಗೆ ಒಳಗಾಗಲಿದ್ದಾರೆ. ದಿನದಿಂದ ದಿನಕ್ಕೆ ನಗರದಲ್ಲಿ ಸಂಚಾರ ಮಾರ್ಗ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿವೆ. ೨೦೧೬ರಿಂದ ೧.೭ ಲಕ್ಷ ಇಂತಹ ಪ್ರಕರಣಗಳು ದಾಖಲಾಗಿವೆ.
ಈ ಮೊದಲು ಲೇನ್ ಉಲ್ಲಂಘಿಸುವ ವಾಹನ ಸವಾರರನ್ನು ಗುರುತಿಸುವುದು ಮತ್ತು ದಂಡ ವಿಧಿಸುವುದು ಸಂಚಾರ ಪೊಲೀಸರಿಗೆ ತಲೆನೋವಿನ ಕೆಲಸವಾಗಿತ್ತು. ಆದರೆ ಇದೀಗ ಹೊಸ ತಂತ್ರಜ್ಞಾನದಿಂದ ಪೊಲೀಸರಿಗೆ ಈ ಕೆಲಸ ಸುಲಭವಾಗಲಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಹೇಳುತ್ತಾರೆ.
ಬಿ-ಟ್ರ್ಯಾಕ್ ಯೋಜನೆಯ ಎರಡನೆ ಹಂತದಲ್ಲಿ, ನಮ್ಮ ತಂಡಕ್ಕೆ ಕ್ಯಾಮರಾ ಮತ್ತು ಇತರ ಸಲಕರಣೆಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಆದರೆ ವಾಹನ ಮಾಲೀಕರು ಲೇನ್ ಶಿಸ್ತು ಬಗ್ಗೆ ಹೆಚ್ಚಿನ ಕಾಳಜಿ ಹೊಂದಿಲ್ಲ. ನಗರದ ಪ್ರಮುಖ ರಸ್ತೆಗಳನ್ನು ಹೊರತುಪಡಿಸಿ ಹೆಚ್ಚಿನ ರಸ್ತೆಗಳಲ್ಲಿ ಲೇನ್‌ಗಳೇ ಇಲ್ಲ. ಪಾದಾಚಾರಿಗಳು ರಸ್ತೆ ದಾಟಲು ಬಳಸುವ ಸ್ಥಳಗಳಲ್ಲಿ ಸರಿಯಾಗಿ ಬಣ್ಣ ಹಾಕಿರುವುದಿಲ್ಲ. ಮೊದಲು ಮೂಲಸೌಕರ್ಯ ಒದಗಿಸಿ, ಬಳಿಕ ಕಾನೂನು ಜಾರಿ ಬಗ್ಗೆ ಮಾತನಾಡಿ ಎಂದು ವಾಹನ ಸವಾರ ಶ್ರೀನಿವಾಸ ಎನ್. ತಿರುಗೇಟು ನೀಡಿದ್ದಾರೆ.