ಕರ್ನಾಟಕ

ನಿದ್ರೆ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಘನ ಸಾಧನೆ : ಸಿ.ಟಿ.ರವಿ ವಾಗ್ದಾಳಿ

Pinterest LinkedIn Tumblr

raviಬೆಂಗಳೂರು, ಮೇ 14-ದುರಾಹಂಕಾರ, ಉದಾಸೀನತೆ, ಹಗರಣಗಳು, ನಿದ್ರೆ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಘನ ಸಾಧನೆಯಾಗಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದರು. ಪಕ್ಷದ ಕಚೇರಿಯಲ್ಲಿಂದು ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನುಡಿದಂತೆ ನಡೆದುಕೊಳ್ಳಲಿಲ್ಲ. ಯಾವುದೇ ಸಮುದಾಯಕ್ಕೂ ನ್ಯಾಯ ಒದಗಿಸಿಲ್ಲ. ಜನ್ಮದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದೂ ಇಲ್ಲ, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವುದೂ ಇಲ್ಲ. ಹಾಗೇನಾದರೂ ಅವರು ಅಂದುಕೊಂಡಿದ್ದರೆ ಅದು ಕೇವಲ ಕನಸಷ್ಟೇ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮದು ಅಹಿಂದಾ ಸರ್ಕಾರ, ನಾವು ಸಾಮಾಜಿಕ ನ್ಯಾಯದ ಪರ ಅನ್ನುತ್ತಾರೆ. ಇದೆಲ್ಲ ಸುಳ್ಳು. ಅವರು ಹೇಳಿದಂತೆ ನಡೆಯುತ್ತಿಲ್ಲ. ತಮ್ಮ ಹಿಂದೆ ಸುತ್ತುವ ವಂದಿಗರಿಗೆ ಮಾತ್ರ ಅನುಕೂಲ ಮಾಡಿದ್ದಾರೆ. ಅದು ಬಿಟ್ಟರೆ ಬೇರೆ ಯಾರಿಗೂ ಅನುಕೂಲ ಮಾಡಲಿಲ್ಲ. ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು. ಭ್ರಷ್ಟಾಚಾರದ ಆರೋಪ ಹೊತ್ತು ಜೈಲಿಗೆ ಹೋಗಿ ಬಂದವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿರುವುದು ದುರಾಹಂಕಾರದ ಪರಮಾವಧಿ.ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡಿದ ಪ್ರತಿಪಕ್ಷಗಳನ್ನು ಜೈಲಿಗೆ ಹೋಗಿ ಬಂದಿದ್ದೀರಿ, ಭ್ರಷ್ಟಾಚಾರ ಮಾಡಿದ್ದೀರಿ ಎಂದು ಹೇಳುವುದು ಸರಿಯಲ್ಲ ಎಂದರು.

ಹಿಂದೆ ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕರಾಗಿದ್ದಾಗ ಆಡಳಿತಾರೂಢ ಸರ್ಕಾರಗಳ ವಿರುದ್ಧ ಟೀಕೆ ಮಾಡಿದ್ದಾರೆ. ಅದನ್ನು ಅವರು ನೆನಪಿಸಿಕೊಳ್ಳಲಿ. ಯಾವುದೇ ಸರ್ಕಾರ ಆಡಳಿತದಲ್ಲಿ ಹಿಂದೆ ಬಿದ್ದಾಗ ಪ್ರತಿಪಕ್ಷಗಳು ಅದನ್ನು ಎತ್ತಿ ತೋರಿಸಿ ಎಚ್ಚರಿಸುವುದು ಸಾಮಾನ್ಯ. ಅಂತಹುದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕೇ ಹೊರತು, ಟೀಕೆ ಮಾಡುವವರ ವಿರುದ್ಧವೇ ಮತ್ತೆ ಟೀಕೆ ಮಾಡುವುದು ಅವರ ಸ್ಥಾನಮಾನಕ್ಕೆ ಗೌರವ ತರುವುದಿಲ್ಲ ಎಂದು ಹೇಳಿದರು. ಅಸ್ಪೃಶ್ಯತೆ ಎದ್ದು ಕಾಣುತ್ತಿದೆ: ಡಾ.ಬಿ.ಆರ್.ಅಂಬೇಡ್ಕರ್‌ರಂತಹ ಮಹಾನ್ ನಾಯಕನನ್ನು ಕೆಲವರು ಒಂದು ಜಾತಿಗೆ ಸೀಮಿತಗೊಳಿಸಿದ್ದಾರೆ. ಜಾತ್ಯತೀತರೆನಿಸಿಕೊಂಡವರಲ್ಲೇ ಅಸ್ಪೃಶ್ಯತೆ ಎದ್ದು ಕಾಣುತ್ತಿದೆ. ಇದಕ್ಕೆ ಹಾಸನದಲ್ಲಿ ಇತ್ತೀಚೆಗೆ ಮೇಲ್ಜಾತಿ ಹಾಗೂ ಕೆಳಜಾತಿಯವರ ಜನರ ನಡುವೆ ನಡೆದ ಗಲಾಟೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಪಕ್ಷದಲ್ಲಿ ಗೊಂದಲವಿಲ್ಲ:

ನಮ್ಮ ಪಕ್ಷದ ನಾಯಕರಲ್ಲಿ ಯಾವುದೇ ಗೊಂದಲಗಳಿಲ್ಲ. ಉದ್ದೇಶಪೂರ್ವಕವಾಗಿ ಕೆಲವರು ಗೊಂದಲ ಸೃಷ್ಟಿಸಿದ್ದಾರೆ. ನಾನು ತಮಿಳುನಾಡಿನ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಇದೇ ವೇಳೆ ಸಿ.ಟಿ.ರವಿ ಸ್ಪಷ್ಟಪಡಿಸಿದರು. ಕಾರ್ಯಕ್ರಮದಲ್ಲಿ ಬಹುಜನ ಸಮಾಜ ಪಕ್ಷದ ಮುಖಂಡ ಡಿ.ಎಸ್.ವೀರಯ್ಯ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.

Write A Comment