ಕರ್ನಾಟಕ

ಸರ್ಕಾರದಲ್ಲಿ ಭ್ರಷ್ಟಾಚಾರ ಸಮೃದ್ಧಿ : ಹೆಚ್‌ಡಿಕೆ ಲೇವಡಿ

Pinterest LinkedIn Tumblr

hdkಬೆಂಗಳೂರು, ಮೇ ೧೨- ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರದ ಬಿತ್ತನೆಯಾಗಿದ್ದರೆ, ಕಾಂಗ್ರೆಸ್‌ ಸರ್ಕಾರ ಅದಕ್ಕೆ ನೀರು, ಗೊಬ್ಬರ ಹಾಕಿ ಸಮೃದ್ಧವಾಗಿ ಬೆಳೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದಿಲ್ಲಿ ಲೇವಡಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ 3 ವರ್ಷಗಳಲ್ಲಿ ಬಂಡವಾಳ ಶಾಹಿಗಳಿಗೆ ರಕ್ಷಣೆ ನೀಡಿದ್ದು, ರೈತರು ಮತ್ತು ಬಡವರ ರಕ್ಷಣೆ ಮಾಡುವ ಗೋಜಿಗೆ ಹೋಗಿಲ್ಲ. ಅಕ್ರಮಗಳಲ್ಲಿ ಭಾಗಿಯಾಗಿರುವ ಸಚಿವ ದೇಶಪಾಂಡೆ ಅಂಥವರಿಗೆ ರಕ್ಷಣೆ ನೀಡಲು ವಿಶೇಷ ಆಸಕ್ತಿ ವಹಿಸಿದೆ ಎಂದು ಅವರು ಆರೋಪಿಸಿದರು.
ಈಗಾಗಲೇ ಬಹಿರಂಗವಾಗಿರುವ ಭ್ರಷ್ಟಾಚಾರ ಹಗರಣಗಳ ತನಿಖಾ ವರದಿಗಳು ಬಂದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಕಾಂಗ್ರೆಸ್ ಭ್ರಷ್ಟಾಚಾರ ಕುರಿತಂತೆ ಮಾತನಾ‌ಡುವ ನೈತಿಕತೆಯನ್ನು ಕಳೆದುಕೊಂಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಈ ಕುರಿತು ಮಾತನಾಡುವ ನೈತಿಕತೆ ಇಲ್ಲ ಎಂದರು.
ಲಾಟರಿ ದಂಧೆ, ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಮತ್ತಿತರ ಪ್ರಕರಣಗಳಲ್ಲಿ ಅಧಿಕಾರಿಗಳು ಭಾಗಿಯಾಗಿರುವುದು ರುಜುವಾತಾಗಿದ್ದರೂ ಯಾರಿಗೂ ಶಿಕ್ಷೆಯಾಗಿಲ್ಲ ಎಂದು ಅವರು ಹೇಳಿದರು.
ಸಿದ್ದರಾಮಯ್ಯನವರ ಸರ್ಕಾರದ ಕಾರ್ಯವೈಖರಿಗೆ ಬಿಜೆಪಿಯವರು 3 ಅಂಕ ನೀಡಿರುವಂತೆ ನಾನು ಯಾವುದೇ ಅಂಕ ನೀಡುವುದಿಲ್ಲ. ಇದು ಉತ್ತರ ಪತ್ರಿಕೆಯೂ ಅಲ್ಲ, ಮೌಲ್ಯಮಾಪನವೂ ಅಲ್ಲ. ಸರ್ಕಾರಕ್ಕೆ ಜನರೆ ಅಂಕ ಕೊಡಲಿದ್ದಾರೆ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆ ಕೈಗೆತ್ತಿಕೊಂಡಿರುವ ಶುದ್ದ ಕುಡಿಯುವ ನೀರಿನ ಘಟಕ, ನೀರು ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಯಲ್ಲೂ ಅಕ್ರಮಗಳು ನಡೆದಿವೆ ಎಂದರೆ, ಹಿರಿಯರಾದ ಹೆಚ್.ಕೆ. ಪಾಟೀಲ್‌ರವರು ಕಣ್ಮುಚ್ಚಿ ಕುಳುತಿದ್ದಾರೆಯೇ ಎಂಬ ಅನುಮಾನ ಬರುತ್ತದೆ ಎಂದರು.
ಬರ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಲು ತಾವು ಉದ್ದೇಶಪೂರ್ವಕವಾಗಿಯೇ ಹೋಗಲಿಲ್ಲ. ಕಾರಣ ಕೇಂದ್ರ ಮತ್ತು ರಾಜ್ಯಗಳಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿಲ್ಲ. ಆದರೂ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದ್ದೇನೆ. ಆರ್ಥಿಕ ನೆರವನ್ನೂ ನೀಡಿದ್ದೇನೆ ಎಂದರು.

ನನ್ನ ಮಗನ ಭವಿಷ್ಯ ರೂಪಿಸುವ ಉದ್ದೇಶದಿಂದ ಮಗನ ಸಿನಿಮಾ ತಯಾರಿಸುವ ಕಡೆಗೆ ಗಮನ ಹರಿಸಿದ್ದೇನೆ. ಇದಕ್ಕೆ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಒಬ್ಬ ತಂದೆಯಾಗಿ ಮಗನ ಭವಿಷ್ಯ ರೂಪಿಸುವುದು ನನ್ನ ಜವಾಬ್ದಾರಿ. ಆ ಕಾರಣಕ್ಕಾಗಿ ನಾನು ಆ ಕಡೆ ಹೆಚ್ಚು ಗಮನ ನೀಡಿದ್ದೇನೆ ಎಂದರು.
ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನನ್ನ ಮಗ ಎಂದೂ ಕಚೇರಿಗೆ ಬಂದಿರಲಿಲ್ಲ. ನಾನು ಈಗ ಮುಖ್ಯಮಂತ್ರಿಯೂ ಅಲ್ಲ. ಹಾಗಾಗಿ ಮಗನಿಗೆ ಉಜ್ವಲ ಭವಿಷ್ಯ ರೂಪಿಸುವ ಸಲುವಾಗಿ ಇತ್ತಕಡೆ ಗಮನ ಹರಿಸಿದ್ದೇನೆ ಎಂದರು.

Write A Comment