ಕರ್ನಾಟಕ

ಸಿದ್ದರಾಮಯ್ಯ ಸರ್ಕಾರದ ವೈಫಲ್ಯ ಕುರಿತು ಬಿಜೆಪಿಯಿಂದ ಕಿರು ಪುಸ್ತಕ ಬಿಡುಗಡೆ

Pinterest LinkedIn Tumblr

JAGDEESH SHATTER RELESING THE BOOK ON CM SIDDU 3YEARS OF CONGRESS GOVT ASHOK ASWATHNARAYAN VIJAKUMAR ARE SEEN AT GOLDPINCH

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕೆಟ್ಟ ಸರ್ಕಾರವನ್ನು ರಾಜ್ಯದ ಜನತೆ ಹಿಂದೆಂದೂ ನೋಡಿರಲಿಲ್ಲ ಎಂದು ಟೀಕಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್‌ರವರು, ಸಿದ್ದರಾಮಯ್ಯ ಮಹಾ ಸುಳ್ಳುಗಾರ ಎಂದು ಜರಿದಿದ್ದಾರೆ.

ಇದು ಜನಪರ ಸರ್ಕಾರವಲ್ಲ, ಜನ ವಿರೋಧಿ ಸರ್ಕಾರ ಎಂಬ ಕಿರು ಹೊತ್ತಿಗೆಯನ್ನು ಸುದ್ದಿಗೋಷ್ಠಿಯಲ್ಲಿಂದು ಬಿಡುಗಡೆ ಮಾಡಿ ಮಾತನಾಡಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಈ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ನೆಲ ಕಚ್ಚಿದೆ. ಉತ್ತಮ ಆಡಳಿತದ ನಿರೀಕ್ಷೆಯಲ್ಲಿದ್ದ ರಾಜ್ಯದ ಜನತೆಗೆ ನಿರಾಶೆಯಾಗಿದೆ ಎಂದರು.

ಲೋಕಾಯುಕ್ತಕ್ಕೆ ಚರಮಗೀತೆ ಹಾಡಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲಬೇಕು. ಆಡಳಿತದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಆಡಳಿತದಲ್ಲಿ ಬಿಗಿ ಎಂಬುದೇ ಇಲ್ಲ ಎಂದರು. ಬಡವರ, ರೈತರ, ಅಲ್ಪಸಂಖ್ಯಾತರ ಎಂಬ ಘೋಷಣೆ ಘೋಷಣೆಯಾಗಿಯೇ ಉಳಿದಿದೆ.

ಬರ ನಿರ್ವಹಣೆಯಲ್ಲೂ ಸರ್ಕಾರ ಸಂಪೂರ್ಣ ಎಡವಿದೆ. ಕುಡಿಯುವ ನೀರಿಗೆ ಹಾಹಾಕಾರ ಇದೆ. ಕೇಂದ್ರ ಸರ್ಕಾರ ನೀಡಿರುವ ಬೆಳೆ ನಷ್ಟ ಪರಿಹಾರ ಸಂಪೂರ್ಣ ವಿತರಣೆಯಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಹಿಂದೆ ವೀರಪ್ಪಮೊಯ್ಲಿಯವರಿಗೆ ಸುಳ್ಳುಗಾರ ಎಂಬ ಬಿರುದು ನೀಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾ ಸುಳ್ಳುಗಾರ ಎಂದು ಶೆಟ್ಟರ್ ದೂರಿದರು.

ದಿವಾಳಿಯತ್ತ ಸರ್ಕಾರ
ಈ ಸರ್ಕಾರ ದಿವಾಳಿಯತ್ತ ಸಾಗಿದೆ. ರೈತರ ಸಾಲ ಮನ್ನಾ ಮಾಡದೇ ಇದ್ದರೂ ಸಾವಿರಾರು ಕೋಟಿ ರೂ. ಸಾಲ ಮಾಡಿದೆ. ಬಿಜೆಪಿ ಸರ್ಕಾರ 5 ವರ್ಷದಲ್ಲಿ 5474 ಕೋಟಿ ರೂ. ಸಾಲ ಮಾಡಿದ್ದರೆ, ಕಾಂಗ್ರೆಸ್ ಸರ್ಕಾರ 3 ವರ್ಷದಲ್ಲಿ 67 ಸಾವಿರ ಕೋಟಿ ರೂ. ಸಾಲ ಮಾಡಿದೆ ಎಂದು ಶೆಟ್ಟರ್ ಹೇಳಿದರು.

ಕೇಂದ್ರದಿಂದ ಬರ ಪರಿಹಾರಕ್ಕೆಸುಮಾರು 2200 ಕೋಟಿ ರೂ. ಹಣ ಬಂದರೂ ಸುಮ್ಮನೆ ಟೀಕೆ ಮಾಡಲಾಗುತ್ತಿದೆ. ಕೇಂದ್ರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವತ್ತ ಸರ್ಕಾರ ಗಮನ ನೀಡಿಲ್ಲ. ಸಂಸತ್ತಿನ 2 ದಿನ ಇರುವಾಗ ಸಂಸದರ ಸಭೆಯನ್ನು ಮುಖ್ಯಮಂತ್ರಿ ಕರೆದಿದ್ದಾರೆ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳ ಆಡಳಿತ ವೈಖರಿ ವಿರುದ್ಧ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರುಗಳೇ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಶೆಟ್ಟರ್ ಹೇಳಿದರು.

ಸರ್ಕಾರದ ಪುಸ್ತಕದಲ್ಲಿ ಏನಿದೆ
ಬಿಜೆಪಿ ಇಂದು ಬಿಡುಗಡೆ ಮಾಡಿರುವ ಕಾಂಗ್ರೆಸ್ ಸರ್ಕಾರ ವೈಫಲ್ಯಗಳನ್ನು ವಿವರಿಸುವ ಪುಸ್ತಕದಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎಳೆ ಎಳೆಯಾಗಿ ವಿವರಿಸಲಾಗಿದೆ, ವಿವಿಧ ಇಲಾಖೆಗಳ ಸಚಿವರುಗಳ ಭ್ರಷ್ಟಾಚಾರ, ಸ್ವತಃ ಮುಖ್ಯಮಂತ್ರಿ ವಿರುದ್ಧ ಲೋಕಾಯುಕ್ತ ಹಾಗೂ ಎಸಿಬಿಯಲ್ಲಿ ದಾಖಲಾಗಿರುವ ದೂರು ಈ ಎಲ್ಲವನ್ನು ವಿವರಿಸಲಾಗಿದ್ದು, ಸಮಾಜವಾದಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಜವಾದಿಯಾಗಿ ದುಬಾರಿ ವಾಚ್ ಧರಿಸಿದ ಹಗರಣ, ಲೋಕಾಯುಕ್ತವನ್ನು ಮುಗಿಸಲು ಎಸಿಬಿ ರಚನೆಯ ದುರುದ್ದೇಶ. ಬರಗಾಲ ನಿರ್ವಹಣೆಯ ವೈಫಲ್ಯ, ಹದಗೆಟ್ಟ ಕಾನೂನು ಸುವ್ಯವಸ್ಥೆ, ರೈತರ ಸಂಕಷ್ಟ, ಕುಸಿದು ಬಿದ್ದ ಆರ್ಥಿಕ ವ್ಯವಸ್ಥೆ, ಗ್ರಾಮೀಣಾಭಿವೃದ್ಧಿಯಲ್ಲಿ ಸರ್ಕಾರದ ವೈಫಲ್ಯ, ಇಂಧನ ಇಲಾಖೆಯನ್ನು ನಿಭಾಯಿಸದೆ ರಾಜ್ಯವನ್ನು ಖಾಯಂ ಕತ್ತಲಿಗೆ ದೂಡಿರುವುದು, ಸಮಾಜಕಲ್ಯಾಣ ಇಲಾಖೆ ಭ್ರಷ್ಟರ ಕಲ್ಯಾಣಕ್ಕೆ ಮೀಸಲಾಗಿರುವುದು, ರಸ್ತೆಗಳ ದುಸ್ಥಿತಿ, ಹೀಗೆ ವಿವಿಧ ಇಲಾಖೆಗಳ ವೈಫಲ್ಯಗಳನ್ನು ಪುಸ್ತಕದಲ್ಲಿ ವಿವರಿಸಲಾಗಿದೆ.

ಪುಸ್ತಕದ ಹಿಂಬದಿಯಲ್ಲಿ ಆಕಳಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಚಿತ್ರವನ್ನು ಹಾಕಿ ಅವರ ಆಡಳಿತಕ್ಕೆ ಮೂರು ಅಂಕ ನೀಡಿರುವ ಸ್ಲೇಟ್‌ನ್ನು ಅವರ ಕೈಗೆ ನೀಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಶಾಸಕರಾದ ಅಶ್ವತ್ಥ ನಾರಾಯಣ, ಸುನೀಲ್ ಕುಮಾರ್, ವಿಜಯ್ ಕುಮಾರ್, ಅಮರನಾಥ ಪಾಟೀಲ್ ಉಪಸ್ಥಿತರಿದ್ದರು.

Write A Comment