ಕರ್ನಾಟಕ

ಒಂದೇ ಮಳೆಗೆ ರಾಜ್ಯದ ತಾಪ 6 ಡಿಗ್ರಿ ಇಳಿಕೆ!

Pinterest LinkedIn Tumblr

rainಬೆಂಗಳೂರು: ವಾರದ ಹಿಂದೆ ಬೆಂಕಿ ಉಂಡೆಯಾಗಿದ್ದ ಕರುನಾಡು ಶುಭ ಶುಕ್ರವಾರದ ಮಳೆಗೆ ತಂಪಾಗಿದೆ.ತನ್ಮೂಲಕ ರಾಜ್ಯದ ಜನರಿಗೆ ಬಿಸಿಲಿನ ಧಗೆಯಿಂದ “ತಾತ್ಕಾಲಿಕ ರಜೆ’ ಸಿಕ್ಕಿದೆ. ಶುಕ್ರವಾರದ ಮಳೆ ಅಬ್ಬರಕ್ಕೆ ಇಡೀ ರಾಜ್ಯದ ಉಷ್ಣಾಂಶ ಸರಾಸರಿ 5ರಿಂದ 6 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿತ ಕಂಡಿದೆ. ಪರಿಣಾಮ ದಕ್ಷಿಣದ ಮೈಸೂರು, ಬೆಂಗಳೂರಿನಿಂದ ಹಿಡಿದು ಉತ್ತರದ ರಾಯಚೂರು, ಕಲಬುರಗಿವರೆಗೆ ರಾಜ್ಯ ತಂಪಾಗಿದೆ. ಇದರಿಂದ ಜನ ಕೂಡ ನಿಟ್ಟುಸಿರು ಬಿಡುವಂತಾಗಿದೆ.

ಕೇವಲ ಹತ್ತು ದಿನಗಳ ಹಿಂದೆ ಶತಮಾನದ ಬಿಸಿಲಿಗೆ ಸಾಕ್ಷಿಯಾಗಿದ್ದ ಮೈಸೂರಿನಲ್ಲಿ (39.9 ಡಿಗ್ರಿ ಸೆಲ್ಸಿಯಸ್‌) ಶುಕ್ರವಾರ ಸಂಜೆಯ ಮಳೆಗೆ ಉಷ್ಣಾಂಶ 5 ಡಿಗ್ರಿ ಕಡಿಮೆಯಾಗಿದೆ. ಅದೇ ರೀತಿ, ಬೆಂಗಳೂರಿನಲ್ಲಿ ಏಪ್ರಿಲ್‌ನಲ್ಲಿ ದಾಖಲೆ ಬಿಸಿಲು (39.2 ಡಿಗ್ರಿ) ಇತ್ತು. ಮಳೆಯಿಂದ 34.6ಕ್ಕೆ ಇಳಿಕೆಯಾಗಿದೆ. ಕಲಬುರಗಿಯಲ್ಲಿ 43.6 ಡಿಗ್ರಿ ಸೆಲ್ಸಿಯಸ್‌ ಇದ್ದ ಉಷ್ಣಾಂಶ 36.7ಕ್ಕೆ ಕುಸಿದಿದೆ. ಇನ್ನು ರಾಯಚೂರಿನಲ್ಲಿ 43.8 ಇದ್ದ ಉಷ್ಣಾಂಶ, ಈಗ ಸುಮಾರು 8 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿದಿದೆ. ಚಿತ್ರದುರ್ಗದಲ್ಲಿ ಒಂದು ವಾರದ ಅಂತರದಲ್ಲಿ 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗಿದೆ.

ಇದೆಲ್ಲವೂ ಶುಕ್ರವಾರ ಸಂಜೆ ಬಿದ್ದ ಮಳೆಯ ಎಫೆಕ್ಟ್ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ.

ಇಂದೂ ಮಳೆ?:
ಶುಕ್ರವಾರ ಸಂಜೆ ಉತ್ತರ ಒಳನಾಡಿನ ಕಲಬುರಗಿ, ಯಾದಗಿರಿ, ಚಿತ್ರದುರ್ಗ, ವಿಜಯಪುರ ಸುತ್ತಮುತ್ತ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ಮಂಡ್ಯ, ಮೈಸೂರು ಸುತ್ತಲಿನ ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಹಾಗಾಗಿ, ಅಲ್ಲೆಲ್ಲಾ ತಾಪಮಾನ ಇಳಿಕೆಯಾಗಿದೆ. ರಾಜ್ಯದಲ್ಲಿ ಶನಿವಾರ ಕೂಡ ವರುಣನ ಆರ್ಭಟ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನಿಷ್ಠ 10 ಮಿ.ಮೀ.ನಿಂದ ಗರಿಷ್ಠ 75 ಮಿ.ಮೀ.ನಷ್ಟು ಮಳೆ ದಾಖಲಾಗಿದೆ. ಸಂಜೆ 4ಕ್ಕೆ ಶುರುವಾದ ವರುಣನ ಆರ್ಭಟ ರಾತ್ರಿ 7ಗಂಟೆವರೆಗೂ ಮುಂದುವರಿದಿತ್ತು. ಬೆಂಗಳೂರಿನಲ್ಲಿ ಸುರಿದ ಮಳೆಗೆ ಸಂಚಾರದಟ್ಟಣೆ ಉಂಟಾಗಿ, ಜನಜೀವನ ಅಸ್ತವ್ಯಸ್ತಗೊಂಡಿತು.

ಮಳೆ ಅವಾಂತರ:
ಬೆಂಗಳೂರು ನಗರದಲ್ಲಿ ಮಳೆಯ ಹೊಡೆತಕ್ಕೆ ಹತ್ತಕ್ಕೂ ಹೆಚ್ಚು ಮರಗಳು ನೆಲಕಚ್ಚಿದ್ದು, ವಾಹನಗಳ ಮೇಲೆ ಮರ ಉರುಳಿಬಿದ್ದ ಪರಿಣಾಮ ಅಲ್ಲಲ್ಲಿ ವಾಹನಗಳು ಜಖಂಗೊಂಡಿವೆ. 80ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆಗಳು ತುಂಬಿಹರಿದಿದ್ದರಿಂದ ಕೊಳಚೆನೀರು ಸಹಿತ ರಸ್ತೆಗಳು ಜಲಾವೃತಗೊಂಡವು. ಕಳೆದ 15-20 ದಿನಗಳಿಂದ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸು ಇದ್ದುದರಿಂದ ನಗರ ಕಾದಕಾವಲಿಯಾಗಿತ್ತು. ಶುಕ್ರವಾರದ ಮಳೆ ನಗರಕ್ಕೆ ತಂಪೆರೆಯಿತು.

ತಾಪಮಾನ: 10 ದಿನದ ಹಿಂದೆ, ಈಗ ರಾಜ್ಯದ ಪ್ರಮುಖ ಪ್ರದೇಶಗಳಲ್ಲಿ ಹತ್ತು ದಿನಗಳ ಹಿಂದೆ ದಾಖಲಾದ ತಾಪಮಾನ ಹಾಗೂ ಶುಕ್ರವಾರ ಮಳೆಯ ನಂತರ ದಾಖಲಾದ ಗರಿಷ್ಠ ತಾಪಮಾನದ ವಿವರ ಹೀಗಿದೆ (ಡಿಗ್ರಿ ಸೆಲ್ಸಿಯಸ್‌ನಲ್ಲಿ).

ಪ್ರದೇಶ ಏ. 24ಕ್ಕೆ ತಾಪಮಾನ ಶುಕ್ರವಾರದ ತಾಪಮಾನ

ಬೆಂಗಳೂರು 39.2 34.6

ಮೈಸೂರು 39.9 34.9

ಕಲಬುರಗಿ 43.6 36.7

ರಾಯಚೂರು 43.8 35.8

ಚಿತ್ರದುರ್ಗ 40.4 37.1
-ಉದಯವಾಣಿ

Write A Comment