ಕರ್ನಾಟಕ

ದುಡಿಯುವ ಕೈಗಳಿಗೆ ಉದ್ಯೋಗ ನೀಡಿ

Pinterest LinkedIn Tumblr

06ct6epಚಿತ್ರದುರ್ಗ: ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಮಾನವ ದಿನಗಳ ಸೃಜನೆಯ ವಿಚಾರದಲ್ಲಿ ಶಂಕೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಏಪ್ರಿಲ್ ತಿಂಗಳಲ್ಲಿ ನಡೆದಿರುವ 12 ಲಕ್ಷ ಮಾನವ ದಿನಗಳ ಕುರಿತು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಬರ ಅಧ್ಯಯನ ಮತ್ತು ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಒಂದೇ ತಿಂಗಳಲ್ಲಿ 12 ಲಕ್ಷ ಮಾನವ ದಿನಗಳನ್ನು ಸೃಜಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಇದಕ್ಕೆ ವಿವರಣೆ ನೀಡಲು ಮುಂದಾದ ಜಿ.ಪಂ ಸಿಇಒ ನಿತೇಶ್ ಪಾಟೀಲ್ ಅವರನ್ನು ‘ನೀವು ಸಮರ್ಥಿಸಿಕೊಳ್ಳಲು ಪ್ರಯತ್ನಿಸಬೇಡಿ’ ಎಂದು ಹೇಳಿದ್ದಲ್ಲದೇ, ಇದನ್ನು ತನಿಖೆ ನಡೆಸುವಂತೆ ಸೂಚಿಸಿದರು. ಮಾನವ ಸೃಜನೆಯ ಪ್ರಗತಿ ತೃಪ್ತಿಕರವಾಗಿಲ್ಲ. ಈ ವೇಗದಲ್ಲಿ ಸಾಗಿದರೆ ಕಳೆದ ವರ್ಷಕ್ಕಿಂತ ಕಳಪೆ ಸಾಧನೆ ಮಾಡುತ್ತೀರಿ. ಈ ಮೇ ತಿಂಗಳಲ್ಲಿ ಕನಿಷ್ಠ 4 ಲಕ್ಷ ಮಾನವ ದಿನಗಳನ್ನು ಸೃಜಿಸಬೇಕು ಎಂದು’ ಆದೇಶಿಸಿದರು.
‘ಜಿಲ್ಲೆಯಲ್ಲಿ 14 ಗೋಶಾಲೆಗಳಿವೆ ಎನ್ನುತ್ತಿದ್ದೀರಿ. ಎಲ್ಲ ಗೋಶಾಲೆಗಳಿಗೂ ಭೇಟಿ ನೀಡಿದ್ದೀರಾ ? ಅಲ್ಲಿನ ಪರಿಸ್ಥಿತಿ ಪರಿಶೀಲಿಸಿದ್ದೀರಾ? ನರೇಗಾ ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ ಮಾಡಿದ್ದೀರಾ?’ ಎಂದು ಮುಖ್ಯಮಂತ್ರಿ ಅವರು, ಜಿಲ್ಲಾಧಿಕಾರಿ ಮತ್ತು ಸಿಇಒ ಅವರನ್ನು ಪ್ರಶ್ನಿಸಿದರು.
‘ಸುಳ್ಳು ಹೇಳ್ಬೇಡಿ. ಇವತ್ತು ನಾನು ಬಂದಿದ್ದೇನೆಂದು ಇವತ್ತು ಶಾಮಿಯಾನ ಹಾಕಿದ್ದೀರಿ, ಅಲ್ವಾ’ ಎಂದು ಪುನಃ ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಸಿರುವ ಲೆಕ್ಕ ಕೇಳಿದರು. ಇದಕ್ಕೆ ಉತ್ತರಿಸಿದ ಎಂಜಿನಿಯರ್ ಮನೋಹರ್, ‘481 ಕೊಳವೆಬಾವಿ ಕೊರೆಸಿದ್ದು, 116 ಫೇಲ್ ಆಗೆ. 265ರಲ್ಲಿ ನೀರಿದೆ.ಇವುಗಳಿಗೆ ತಾತ್ಕಾಲಿಕ ವಿದ್ಯುತ್ ಪಡೆದು, ನೀರು ಪೂರೈಸುತ್ತದ್ದೇವೆ. ಶಾಶ್ವತ ಪೈಪ್ ಲೈನ್ ಕಾಮಗಾರಿಗೆ ಅನುದಾನ ಕೊರತೆ ಇದೆ.108 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ ’ ಎಂದು ಮಾಹಿತಿ ನೀಡಿದರು.
ಈ ವೇಳೆ ಬೆಸ್ಕಾಂ ಎಜಿನಿಯರ್ ಕರೆಸಿದ ಸಿಎಂ, ‘ಕುಡಿಯುವ ನೀರಿನ ವಿಚಾರದಲ್ಲಿ, ಕಾರಣಗಳನ್ನು ನೀಡದೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು’ಎಂದು ತಾಕೀತು ಮಾಡಿದರು.
ಕೆರೆ ಹೂಳೆತ್ತುವ ವಿಚಾರ ಪ್ರಸ್ತಾಪಿಸಿದ ಸಿಎಂ, ‘ಕೆರೆ ಹೂಳುತೆಗೆಯುವ ಮುನ್ನ, ಸೂಕ್ತ ಕೆರೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆ ಕೆರೆ ಕುಡಿಯುವ ನೀರನ್ನು ಅವಲಂಬಿಸಿರಬೇಕು, ಕ್ಯಾಚ್‌ಮೆಂಟ್ ಪ್ರದೇಶ ಚೆನ್ನಾಗಿರಬೇಕು. ಇಂಥ ಕೆರೆಗಳನ್ನು ಜೆಸಿಬಿ ಬಳಸಿ ಹೂಳೆತ್ತಬಹುದು.ರೈತರಿಗೇ ಹೂಳು ತೆಗೆದುಕೊಂಡು ಹೋಗಲು ತಿಳಿಸಬಹುದು. ಈ ಒಂದು ತಿಂಗಳಲ್ಲಿ ಕೆರೆ ಹೂಳೆತ್ತುವ ಕೆಲಸ ಮುಗಿಸಬೇಕು’ ಎಂದು ಸೂಚಿಸಿದರು.
ಶಾಸಕ ಎಸ್. ತಿಪ್ಪೇಸ್ವಾಮಿ, ಮೊಳಕಾಲ್ಮುರು ತಾಲ್ಲೂಕಿನ ಸಮಸ್ಯೆಗಳನ್ನು ವಿವರಿಸಿ, ‘ಐದಾರು ವರ್ಷಗಳಿಂದ ಮಳೆ ಇಲ್ಲ. ಹಾಗಾಗಿ ರೈತರ ಸಾಲ ಮನ್ನಾ ಮಾಡಿ’ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ‘ನಮ್ಮಲ್ಲಿ ಶೇ 20ರಷ್ಟು ರೈತರು ಸೊಸೈಟಿಗಳಲ್ಲಿ, ಶೇ 80ರಷ್ಟು ರೈತರು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಮಾಡಿದ್ದಾರೆ. ಹೀಗಾಗಿ ಸಾಲ ಮನ್ನಾ ಸದ್ಯಕ್ಕೆ ಸಾಧುವಲ್ಲದ ಕೆಲಸ’ ಎಂದು ಪ್ರತಿಕ್ರಿಯಿಸಿದರು.
ಚಿತ್ರದುರ್ಗ ನಗರದಲ್ಲಿ ಒಳಚರಂಡಿ ಕಾಮಗಾರಿಯಿಂದಾಗಿ ರಸ್ತೆಗಳು ಹಾಳಾಗಿವೆ. ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಈ ಹಿಂದೆ ನಗರಾಭಿವೃದ್ಧಿ ಸಚಿವರು ಬಂದಾಗ ಇಲ್ಲಿನ ಪರಿಸ್ಥಿತಿ ವಿವರಿಸಿ, ರಸ್ತೆ ಕಾಮಗಾರಿ ನಿರ್ವಹಣೆಗೆ ₹ 48 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅನುಮೋದನೆ ಸಿಕ್ಕಿಲ್ಲ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಿಎಂ ಗಮನ ಸೆಳೆದರು. ಈ ವಿಷಯವನ್ನೂ ಸಹಾ ಪರಿಶೀಲಿಸುವುದಾಗಿ ಸಿಎಂ ಭರವಸೆ ನೀಡಿದರು.
ಸಿಎಂಗೆ ಮನವಿಗಳ ಮಹಾಪೂರ
ಬರ ಪರಿಸ್ಥಿತಿ ವೀಕ್ಷಣೆಗಾಗಿ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ವಿವಿಧ ತಾಲ್ಲೂಕು ಸಂಘಟನೆಗಳ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಅಮೃತ್‌ ಮಹಲ್ ಕಾವಲು ಹೋರಾಟ ಸಮಿತಿಯ ಅಧ್ಯಕ್ಷ ದೊಡ್ಡ ಉಳ್ಲಾರ್ತಿ ಕರಿಯಣ್ಣ, ‘ಐದು ವಿಜ್ಞಾನ ಸಂಸ್ಥೆಗಳಿಗೆ ನೀಡಿರುವ ಚಳ್ಳರೆ ತಾಲಲೂಕಿನ ಕುದಾಪುರ, ವರವು, ಹಾಗೂ ಉಳ್ಳಾರ್ತಿ ಅಮೃತ್ ಮಹಲ್ ಕಾವಲು ಪ್ರದೇಶವನ್ನು ವಾಪಸು ಕೊಡಿಸುವಂತೆ ಒತ್ತಾಯಿಸಿ ಸಿಎಂಗೆ ಮನವಿ ಸಲ್ಲಿಸಿದರು.
‘ಭದ್ರಾ ಮೇಲ್ದಂಡೆ ಯೋಜನೆ ತ್ವರಿತಗತಿ ಜಾರಿಗೊಳಿಸಬೇಕು. ಚಿತ್ರದುರ್ಗ– ಬೆಂಗಳೂರು ನೇರ ರೈಲು ಮಾರ್ಗ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು’ ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
‘ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಯಾಗುವವರೆಗೂ ದಲಿತ ಮುಖ್ಯಮಂತ್ರಿ ಬೇಡ. ಸದಾಶಿವ ಆಯೋಗದ ವರದಿಕೂಡಲೇ ಅನುಷ್ಠಾನಗೊಳಿಸಬೇಕು. ಪ್ರತ್ಯೇಕ ಮಾದಿಗ ಅಭಿವೃದ್ಧಿ ನಿಗಮ ಸ್ಥಾಪನೆಯಾಗಬೇಕು’ ಎಂದು ಒತ್ತಾಯಿಸಿ ಮಾದಿಗ ಮೀಸಾತಿ ಹೋರಾಟ ಸಮಿತಿಯ ಚಿತ್ರದುರ್ಗ ಜಿಲ್ಲಾಧ್ಯಕ್ಷ ಹುಲ್ಲೂರು ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಯೋಗರಾಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
‘ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಇಲ್ಲದಿದ್ದರೆ ನಿಮ್ಮ ಸರ್ಕಾರವೇ ಮುಂದಿನ ಬೆಳವಣಿಗೆಗೆ ಕಾರಣವಾಗುತ್ತದೆ’ ಎಂದು ಆಗ್ರಹಿಸಿ ಮಾದಿಗ ದಂಡೂರ ಸಮಿತಿಯವರು ಸಿಎಂ ಅವರಿಗೆ ಮನವಿಸಲ್ಲಿಸಿದರು.

Write A Comment