ಕರ್ನಾಟಕ

ಪೊಲೀಸ್ ತರಬೇತಿ ಕೇಂದ್ರ ಸ್ಥಾಪನೆಗೆ ಜಾಗ ಗುರುತಿಸಲು ತುಮಕೂರು ಜಿಲ್ಲಾಡಳಿತಕ್ಕೆ ಪರಮೇಶ್ವರ್ ಸೂಚನೆ

Pinterest LinkedIn Tumblr

parತುಮಕೂರು, ಮೇ 6- ಜಿಲ್ಲೆಗೆ ಮಂಜೂರಾಗಿರುವ ಕೆಎಸ್‌ಆರ್‌ಪಿ ಬೆಟಾಲಿಯನ್ ಹಾಗೂ ಪೊಲೀಸ್ ತರಬೇತಿ ಕೇಂದ್ರ ಸ್ಥಾಪಿಸಲು 200 ಎಕರೆ ಜಾಗದ ಅವಶ್ಯಕತೆಯಿದ್ದು, ಮೂರು ತಾಲೂಕುಗಳಲ್ಲಿ ಜಾಗ ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಧಾನಿಗೆ ಪರ್ಯಾಯವಾಗಿ ತುಮಕೂರನ್ನು ಸಬಲೀಕರಣ ಮಾಡಬೇಕಾಗಿದೆ. ಮುಖ್ಯಮಂತ್ರಿಗಳು ಜಿಲ್ಲೆಗೆ ಎರಡು ವಿನೂತನ ಕೊಡುಗೆ ನೀಡಿದ್ದಾರೆ. ಕೆಎಸ್‌ಆರ್‌ಪಿ ಮತ್ತು ಪೊಲೀಸ್ ತರಬೇತಿ ಕೇಂದ್ರ ತೆರೆಯಲು ಅನುಮೋದನೆ ದೊರೆತಿದ್ದು, ಇದಕ್ಕೆ ಜಾಗದ ಅವಶ್ಯಕತೆಯಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೋಹನ್‌ರಾಜ್, ಸಿಇಒ ಹಾಗೂ ಇತರೆ ಅಧಿಕಾರಿಗಳ ಜತೆ ಸಭೆ ನಡೆಸಿ ಗುಬ್ಬಿ, ಕೊರಟಗೆರೆ, ತುಮಕೂರಿನಲ್ಲಿ ಜಾಗ ಹುಡುಕಲು ಸೂಚಿಸಿದೆ ಎಂದರು. ಪೊಲೀಸರ ಕೊರತೆ: ಪೊಲೀಸ್ ಇಲಾಖೆಯಲ್ಲಿ ಈ ಹಿಂದೆ 2500 ಹುದ್ದೆಗಳು ಖಾಲಿ ಇದ್ದವು. ಈಗ 1600 ಪೊಲೀಸರ ನೇಮಕವಾಗಿದೆ. 8000 ಅಭ್ಯರ್ಥಿಗಳು ತರಬೇತಿಯಲ್ಲಿದ್ದಾರೆ. ಮತ್ತೆ 8000 ಪೊಲೀಸರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಲ್ಲದೆ, 600 ಪೊಲೀಸ್ ಕಾನ್ಸ್‌ಟೆಬಲ್ ಹಾಗೂ 450 ಸಬ್‌ಇನ್ಸ್‌ಪೆಕ್ಟರ್‌ಗಳ ನೇಮಕಾತಿಗೆ ಸಚಿವ ಸಂಪುಟ ಅನುಮತಿ ನೀಡಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು.

ನಿಯಮ ಸಡಿಲಿಕೆ: ಪೊಲೀಸ್ ನೇಮಕಾತಿಗೆ ಈ ಹಿಂದೆ ಇದ್ದ ಕೆಲ ನಿಯಮಗಳನ್ನು ಸಡಿಲಿಕೆ ಮಾಡಿದ್ದು, ಎಸ್‌ಐಗಳ ನೇಮಕಾತಿ ಅವಧಿ 25 ರಿಂದ 30 ವರ್ಷ ನಿಗದಿ ಮಾಡಲಾಗಿತ್ತು. ಕಾನ್ಸ್‌ಟೆಬಲ್‌ಗಳ ನೇಮಕಾತಿಗೆ ಪಿಯುಸಿ ಮತ್ತು ಸಿಇಟಿ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು. ಈಗ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದರು. ಮಾಧ್ಯಮದವರ ವಿರುದ್ಧ ಕೆಂಪಯ್ಯ ಅವರು ಅಶ್ಲೀಲವಾಗಿ ಮಾತನಾಡಿರುವುದರ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಇದರ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಇಲ್ಲ ಎಂದು ಜಾರಿಕೊಂಡರು.

ರಾಜ್ಯದಲ್ಲಿ ಬರಗಾಲವನ್ನು ಸರ್ಕಾರ ಸಮರ್ಪಕವಾಗಿ ಎದುರಿಸುತ್ತಿದ್ದು, ಸಂಸದರು, ಶಾಸಕರ ನಿಧಿಯಿಂದ ಸಾಕಷ್ಟು ಹಣ ಬಿಡುಗಡೆಯಾಗಿದೆ. ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಯಾವುದೇ ತೊಂದರೆಯಾಗಿಲ್ಲ. ಬರ ಪರಿಶೀಲನೆಗೆ ಉಪ ಸಮಿತಿ ರಚಿಸಿದ್ದು, ಇದರ ಜತೆಗೆ ಮುಖ್ಯಮಂತ್ರಿಗಳು ಕೂಡ ಬರ ಪರಿಶೀಲನೆ ನಡೆಸುತ್ತಿದ್ದಾರೆ ಎಂದರು. ಇಂದು ಸಂಜೆ ಸಿಎಂ ನಗರಕ್ಕೆ: ಪಾವಗಡ, ಚಿತ್ರದುರ್ಗ, ಹಿರಿಯೂರಿನಲ್ಲಿ ಬರ ಅಧ್ಯಯನ ನಡೆದಿದ್ದು, ಸಂಜೆ 5 ಗಂಟೆಗೆ ಶಿರಾಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ.

ಶಿರಾ ಕೆರೆಯಿಂದ ಕುಡಿಯುವ ನೀರಿನ ಯೋಜನೆಗಳು, ಎಲೆಯೂರು ಗ್ರಾಮದಲ್ಲಿ ಹಮ್ಮಿಕೊಂಡಿರುವ ಯೋಜನೆಗಳು, ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ಹೋಗುವ ಹೇಮಾವತಿ ನಾಲೆ ಕಾಮಗಾರಿ ವೀಕ್ಷಣೆ ಮಾಡಿದ ನಂತರ ಬೆಂಗಳೂರಿಗೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿಯಲ್ಲಿ ಅಧಿಕಾರಿಗಳ ಸಭೆಯನ್ನು ರದ್ದುಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಪತ್ರಿಕೆಗೆ ತಿಳಿಸಿದ್ದಾರೆ.

Write A Comment