ಕರ್ನಾಟಕ

ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಮಳೆ, ರೈತರಲ್ಲಿ ಕೊಂಚ ಸಂತಸ

Pinterest LinkedIn Tumblr

rainಬೆಂಗಳೂರು, ಮೇ 6- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗಿದ್ದು, ಇದೇ ರೀತಿ ಇನ್ನೆರಡು ವಾರಗಳ ಕಾಲ ಆಗಾಗ್ಗೆ ಮಳೆಯಾಗುವ ಮುನ್ಸೂಚನೆಗಳಿವೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಚಿಕ್ಕಾಂಕನಂದಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಅತ್ಯಧಿಕ 113.50 ಮಿ.ಮೀ. ಮಳೆಯಾಗಿದೆ. ಕೊಡಗು, ಕೋಲಾರ ಜಿಲ್ಲೆಗಳ ಕೆಲವೆಡೆ ಭಾರೀ ಮಳೆಯಾದ ವರದಿಯಾಗಿದೆ. ಬಳ್ಳಾರಿ, ಚಿಕ್ಕಬಳ್ಳಾಪುರ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ರಾಮನಗರ, ಕಲಬುರಗಿ, ಹಾಸನ, ಬೀದರ್, ಬೆಂಗಳೂರು ನಗರ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಿದೆ.

ಕೆಲವೆಡೆ ಅಧಿಕ ಮಳೆಯಾಗಿದ್ದರೆ, ಕೆಲವೆಡೆ ಸಾಧಾರಣ ಮಳೆಯಾಗಿದೆ. ದಕ್ಷಿಣ ಕನ್ನಡ, ಯಾದಗಿರಿ, ಮಂಡ್ಯ, ಚಿಕ್ಕಮಗಳೂರು, ದಾವಣಗೆರೆ, ವಿಜಯಪುರ, ಚಿತ್ರದುರ್ಗ, ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಅತ್ಯಲ್ಪ ಪ್ರಮಾಣದ ಮಳೆಯಾಗಿದೆ. ಕೆಲವೆಡೆ ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಬಿರುಗಾಳಿ ಸಹಿತ ಮಳೆಯು ಕೂಡ ಬಿದ್ದಿದೆ. ಬೇಸಿಗೆಯಲ್ಲಿ ಬೀಳುವ ಮಳೆಯಿಂದ ಗಾಳಿ, ಗುಡುಗು-ಸಿಡಿಲುಗಳು ಸರ್ವೆ ಸಾಮಾನ್ಯ ಎಂದು ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ತಿಳಿಸಿದರು.

ಅಲ್ಲಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಸಾಮಾನ್ಯಕ್ಕಿಂತ ಹೆಚ್ಚಾಗಿದ್ದ ಗರಿಷ್ಠ ತಾಪಮಾನ ಸ್ವಲ್ಪ ಇಳಿಕೆಯಾಗಿದೆ. ಈಗ ಬೀಳುತ್ತಿರುವ ಮಳೆಯಿಂದ ಕೆರೆ-ಕಟ್ಟೆಗಳಿಗೆ ನೀರು ಬರುವುದು ವಿರಳ. ನೈಋತ್ಯ ಮುಂಗಾರು ಮಳೆ ಸಕಾಲಕ್ಕೆ ಆಗಮವಾಗುವ ಮುನ್ಸೂಚನೆಗಳಿವೆ. ಆದರೂ ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗುವ ಸಾಧ್ಯತೆಗಳಿವೆ. ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜೂನ್ ಮತ್ತು ಜುಲೈನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿಯವರ ಪ್ರಕಾರ, ಮೇ ಅಂತ್ಯದವರೆಗೂ ಬಿಟ್ಟು ಬಿಟ್ಟು ಚದುರಿದಂತೆ ರಾಜ್ಯದ ಹಲವೆಡೆ ಮಳೆಯಾಗಲಿದೆ. ಮುಂಗಾರು ಮಳೆಯೂ ಜೂನ್ 1ರಿಂದ 5ರ ನಡುವೆ ರಾಜ್ಯಕ್ಕೆ ಪಾದಾರ್ಪಣೆ ಮಾಡಲಿದೆ. ಮುಂಗಾರು ಆರಂಭ ಉತ್ತಮವಾಗಿರುವ ನಿರೀಕ್ಷೆಯಿದೆ. ಈಗ ಮೇನಲ್ಲಿ ರಾಜ್ಯದ ವಾಡಿಕೆ ಮಳೆ ಪ್ರಮಾಣ 86ಮಿ.ಮೀ.ನಷ್ಟಿದ್ದು, ಈ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದೆ ಎಂದರು. ಮಾರ್ಚ್‌ನಲ್ಲಿ ವಾಡಿಕೆ ಮಳೆ 8ಮಿ.ಮೀ. ಇದ್ದರೆ ಏಪ್ರಿಲ್‌ನಲ್ಲಿ 35ಮಿ.ಮೀ.ನಷ್ಟಿದೆ. ಈ ಪ್ರಮಾಣದ ಮಳೆ ರಾಜ್ಯದಲ್ಲಿ ಕಳೆದೆರಡು ತಿಂಗಳಿನಲ್ಲಿ ಬೀಳಲಿಲ್ಲ. ಹೀಗಾಗಿ ಬೇಸಿಗೆ ತಾಪಮಾನ ಹೆಚ್ಚಾಗಿ ಜನತೆ ತತ್ತರಿಸುವಂತೆ ಮಾಡಿತು.

ಜನವರಿಯಿಂದ ಇದುವರೆಗೆ ರಾಜ್ಯದ ಸರಾಸರಿ ವಾಡಿಕೆ ಮಳೆ ಪ್ರಮಾಣ 58.7ಮಿ.ಮೀ.ನಷ್ಟಿದೆ. ಮಳೆ ಬಿದ್ದಿರುವುದು ಕೇವಲ 24.4ಮಿ.ಮೀ. ಮಾತ್ರ. ಇದರಿಂದ ಮುಂಗಾರು ಪೂರ್ವ ಹಾಗೂ ಬೇಸಿಗೆ ಮಳೆ ಕೊರತೆ ಪ್ರಮಾಣ 58.4ಮಿ.ಮೀ.ನಷ್ಟು ಕಂಡುಬಂದಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಬಿದ್ದ ಮಳೆಯಿಂದಾಗಿ ತಾಪಮಾನ ಇಳಿಕೆಯಾಗಿದ್ದು, ತಂಪಿನ ವಾತಾವರಣ ಉಂಟಾಗಿದೆ. ಇಂದು ಕೂಡ ಬೆಂಗಳೂರು ಸೇರಿದಂತೆ ಹಲವು ಕಡೆ ಸಂಜೆ ಹಾಗೂ ರಾತ್ರಿ ಗುಡುಗು-ಸಿಡಿಲಿನಿಂದ ಕೂಡಿದ ಮಳೆಯಾಗುವ ಮುನ್ಸೂಚನೆಗಳಿವೆ.

Write A Comment