ಕರ್ನಾಟಕ

ಕೃಷ್ಣ ಜತೆ ರಾಜಕೀಯ ಚರ್ಚಿಸಿಲ್ಲ: ದೇವೇಗೌಡ

Pinterest LinkedIn Tumblr

devegowdaಬೆಂಗಳೂರು: ಹಿರಿಯ ಕಾಂಗ್ರೆಸ್‌ ಮುಖಂಡ ಎಸ್‌.ಎಂ.ಕೃಷ್ಣ ಅವರ ಜತೆ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಂಡಿದ್ದು ಬಿಟ್ಟರೆ ಯಾವುದೇ ರಾಜಕೀಯ ವಿಚಾರ ಪ್ರಸ್ತಾಪಿಸಿಲ್ಲ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.

ಗುರುವಾರ ಪದ್ಮನಾಭನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೃಷ್ಣ ಅವರ ಜತೆ ದೈವ ಸಾಕ್ಷಿಯಾಗಿ ರಾಜಕೀಯ ವಿಷಯ ಚರ್ಚಿಸಲಿಲ್ಲ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರೆ ತಾನೆ ಕೃಷ್ಣ ಪ್ರಶ್ನೆ ಉದ್ಭವಿಸುತ್ತದೆ. ಅವರ ಪಕ್ಷ ಬಹುಮತ ಹೊಂದಿದೆ. ಕಾಂಗ್ರೆಸ್‌ ಪಕ್ಷದ ಬಗ್ಗೆ ನಾನೇಕೆ ಮಾತನಾಡಲಿ ಎಂದು ಪ್ರಶ್ನಿಸಿದರು.

ರಾಜ್ಯಸಭೆಗೆ ಜೆಡಿಎಸ್‌ನಿಂದ ಇನ್‌ಫೋಸಿಸ್‌ನ ಸುಧಾಮೂರ್ತಿ ಅವರನ್ನು ಕಳುಹಿಸುವ ವಿಚಾರ ಇತ್ತು. ಆದರೆ, ರಾಜಕೀಯಕ್ಕೆ ಬರುವ ಆಸಕ್ತಿ ಇಲ್ಲ ಎಂದರು ಎಂದು ತಿಳಿಸಿದರು.

ರಾಜ್ಯಸಭೆಗೆ ಮಲ್ಯ ಅವರನ್ನು ಜೆಡಿಎಸ್‌ ಆಯ್ಕೆ ಮಾಡಲಿಲ್ಲ. ಮಲ್ಯ ಸ್ಪರ್ಧಿಸಿದಾಗ ಜೆಡಿಎಸ್‌ ನಾಲ್ಕು ಮತಗಳನ್ನಷ್ಟೇ ಹೆಚ್ಚುವರಿಯಾಗಿ ಹೊಂದಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಧಾನಪರಿಷತ್‌ನ ಆಗ್ನೇಯ ಶಿಕ್ಷಕರ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ರಮೇಶ್‌ಬಾಬು ಹಾಗೂ ಹರಿಹರ ಶಾಸಕರ ಸಹೋದರ ಇಬ್ಬರೂ ಆಕಾಂಕ್ಷಿಗಳಿದ್ದಾರೆ. ಇಬ್ಬರನ್ನೂ ಕರೆದು ಮಾತನಾಡಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯಸಭೆಗೆ ಎಚ್‌.ಡಿ.ಕುಮಾರಸ್ವಾಮಿಯವರನ್ನು ಕಳುಹಿಸುವ ಪ್ರಸ್ತಾಪ ಇಲ್ಲ. ನಾವೇ ದಬ್ಬಿದರೂ ಅವರು ರಾಜ್ಯ ರಾಜ್ಯಕಾರಣ ಬಿಟ್ಟು ದೆಹಲಿ ರಾಜಕಾರಣಕ್ಕೆ ಹೋಗುವುದಿಲ್ಲ. ರಾಜ್ಯದ ಜನತೆಯಲ್ಲಿ ಅವರು ಮತ್ತೂಮ್ಮೆ ಮುಖ್ಯಮಂತ್ರಿಯಾಗಬೇಕು ಎಂಬ ಭಾವನೆಯಿದೆ.
-ಎಚ್‌.ಡಿ.ದೇವೇಗೌಡ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ

-ಉದಯವಾಣಿ

Write A Comment